More

    ದೀಪಾವಳಿ ಬಳಿಕ ಕೋವಿಡ್ ಉಲ್ಬಣ?; ನಿಯಮ ಪಾಲಿಸದಿದ್ದರೆ 3ನೇ ಅಲೆ ನಿಶ್ಚಿತ; ತಜ್ಞರಿಂದ ಗಂಭೀರ ಎಚ್ಚರಿಕೆ

    | ಪಂಕಜ ಕೆ.ಎಂ. ಬೆಂಗಳೂರು

    ಕೋವಿಡ್ 2ನೇ ಅಲೆ ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ಮೂರನೇ ಅಲೆ ಬಂದರೂ ಅಷ್ಟೊಂದು ಗಂಭೀರತೆ ಇರುವುದಿಲ್ಲ ಎಂದಿದ್ದ ತಜ್ಞರ ತಂಡವೀಗ ದೀಪಾವಳಿ ಬಳಿಕ ರಾಜ್ಯದಲ್ಲಿ ಕರೊನಾ ಉಲ್ಬಣಿಸುವ ಸಾಧ್ಯತೆ ಕುರಿತು ಆತಂಕ ಹೊರಹಾಕಿದೆ. ರಾಜ್ಯೋತ್ಸವ, ದೀಪಾವಳಿ, ಉಪ ಚುನಾವಣೆ ಹಾಗೂ ನಟ ಪುನೀತ್ ರಾಜ್​ಕುಮಾರ್ ಅಂತಿಮ ದರ್ಶನದ ವೇಳೆ ಕೋವಿಡ್ ನಿಯಮ ಉಲ್ಲಂಘನೆ ಆಗಿರುವ ಹಿನ್ನೆಲೆಯಲ್ಲಿ ಮುಂದಿನ 1 ವಾರದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಪ್ರಕರಣಗಳ ಸಂಖ್ಯೆ ಪರಿಗಣಿಸಿ ಕೋವಿಡ್ ನಿಯಮಾವಳಿ ಸಡಿಲಿಸಲು ಮುಂದಿನ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ.

    ಆತಂಕ ಏಕೆ?: ಬಹುತೇಕ ಪ್ರಮಾಣದಲ್ಲಿ ರಾಜ್ಯದ ಜನರು ಕೋವಿಡ್ ಲಸಿಕೆ ಪಡೆದಿರುವುದರಿಂದ ಸದ್ಯ 3ನೇ ಅಲೆಯ ಆತಂಕವಿಲ್ಲ. ಆದರೆ, ಈಗಿರುವ ತಳಿ ಹೊರತುಪಡಿಸಿ ಹೊಸದಾಗಿ ಕಂಡುಬಂದಿರುವ ‘ಎವೈ4.2’ ಉಪತಳಿ ವೈರಾಣು ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಸಮಸ್ಯೆ ಆಗಬಹುದು. ಅಲ್ಲದೇ ಸದ್ಯ ರಾತ್ರಿ ಕರ್ಫ್ಯೂ ಹೊರತುಪಡಿಸಿ ಉಳಿದೆಲ್ಲ ನಿಯಮ ಸಡಿಲಿಸಲಾಗಿದೆ. ಜನರು ಕೋವಿಡ್ ನಿಯಮ ಉಲ್ಲಂಘಿಸುವ ಸಾಧ್ಯತೆಗಳಿವೆ. ಹಾಗಾಗಿ ದೀಪಾವಳಿ ಬಳಿಕ ಪ್ರಕರಣಗಳನ್ನು ಆಧರಿಸಿ ರಾತ್ರಿ ಕರ್ಫ್ಯೂ ತೆರವಿಗೆ ನಿರ್ಧರಿಸುವಂತೆ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ಸರ್ಕಾರಕ್ಕೆ ಸಲಹೆ ನೀಡಿದೆ.

    2 ವಾರಗಳ ವರದಿ ಮೇಲೆ ನಿಗಾ: ನಟ ಪುನೀತ್ ರಾಜ್​ಕುಮಾರ್​ಗೆ ಅಂತಿಮ ನಮನ ಸಲ್ಲಿಸಲು ಕಂಠೀರವ ಕ್ರೀಡಾಂಗಣದಲ್ಲಿ ಅಂದಾಜು 25 ಲಕ್ಷ ಜನ ಸೇರಿದ್ದಾರೆ ಎಂದು ಸ್ವತಃ ಗೃಹ ಸಚಿವರೇ ಹೇಳಿಕೊಂಡಿದ್ದಾರೆ. ಈ ವೇಳೆ ಜನರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೋವಿಡ್ ನಿಯಮ ಉಲ್ಲಂಘನೆಯಾಗಿದೆ. ಇದರ ಪರಿಣಾಮ ಇನ್ನೆರಡು ವಾರಗಳಲ್ಲಿ ತಿಳಿಯಲಿದೆ. ಇದಲ್ಲದೆ ಉಪಚುನಾವಣೆಯಲ್ಲೂ ಕೋವಿಡ್ ನಿಯಮ ಉಲ್ಲಂಘನೆಯಾಗಿದೆ. ಹಾಗಾಗಿ ನೆಗಡಿ ಮತ್ತು ಜ್ವರ ಲಕ್ಷಣಗಳನ್ನು ಹೊಂದಿರುವ ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಸೂಚಿಸಿದೆ.

    1 ಲಕ್ಷಕ್ಕೆ ಹೆಚ್ಚಿಸಬೇಕು: ಕೋವಿಡ್ 3ನೇ ಅಲೆ ನಿಯಂತ್ರಿಸಲು ದೀಪಾವಳಿ ಮುಗಿಯುವವರೆಗೂ ವರದಿಯಾಗುವ ಕೋವಿಡ್ ಪ್ರಕರಣ ಪರಿಗಣಿಸಬೇಕು. ಜತೆಗೆ ನಿತ್ಯ ಕೋವಿಡ್ ಪರೀಕ್ಷೆಯನ್ನು ಒಂದು ಲಕ್ಷಕ್ಕೂ ಅಧಿಕಗೊಳಿಸಬೇಕು. ಅದರಲ್ಲಿ 50 ಸಾವಿರ ಪರೀಕ್ಷೆಗಳನ್ನು ಬೆಂಗಳೂರು ನಗರದಲ್ಲಿ ನಡೆಸಬೇಕು. ಸಾಮಾಜಿಕ ಅಂತರ, ಮಾಸ್ಕ್, ಕೈಗಳ ಸ್ವಚ್ಛತೆ ಜತೆಗೆ ಜನರು ಗುಂಪು ಸೇರುವುದನ್ನು ನಿಯಂತ್ರಿಸಬೇಕು ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

    ತಾಂತ್ರಿಕ ಸಮಿತಿ ಸಭೆ: ಸದ್ಯ ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣ ಗಣನೀಯವಾಗಿ ಇಳಿಕೆಯಾಗಿದೆ. ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟುವುದರ ಜತೆಗೆ ಆರ್ಥಿಕ ಚೇತರಿಕೆಯನ್ನು ಪರಿಗಣಿಸಬೇಕಿದೆ. ಹಾಗಾಗಿ ರಾತ್ರಿ ಕರ್ಫ್ಯೂ ಸಂಪೂರ್ಣ ತೆಗೆದುಹಾಕಲು ಯೋಚಿಸಲಾಗಿದೆ. ನ. 8ರವರೆಗೆ ರಾತ್ರಿ ಕರ್ಫ್ಯೂ ಮುಂದುವರಿಸಲು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ. ಅಷ್ಟರಲ್ಲಿ ಕೋವಿಡ್ ನಿಯಮಗಳ ಜಾರಿ ಹಾಗೂ ಹೊಸ ಮಾರ್ಗಸೂಚಿ ಕುರಿತು ಸಮಿತಿ ಸಭೆ ಕರೆದು ರ್ಚಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಸದ್ಯ ಜಾರಿಯಲ್ಲಿರುವ ಕೋವಿಡ್ ಮಾರ್ಗಸೂಚಿ ನ. 8ರವರೆಗೆ ಮುಂದುವರಿಯಲಿದ್ದು, ಆ ನಂತರದ ಪ್ರಕರಣ ಪರಿಗಣಿಸಿ ರಾತ್ರಿ ಕರ್ಫ್ಯೂ ತೆರವಿಗೆ ಕ್ರಮ ವಹಿಸಲು ಸರ್ಕಾರಕ್ಕೆ ಸೂಚಿಸಲಾಗಿದೆ. ಅದಾಗಿಯೂ ಜನರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿದೆ.

    | ಡಾ. ಎಂ.ಕೆ. ಸುದರ್ಶನ್ ಅಧ್ಯಕ್ಷರು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ

    ಬೂಸ್ಟರ್ ಡೋಸ್ ಮೊರೆ: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಸಾಧ್ಯತೆ ಹಿನ್ನೆಲೆಯಲ್ಲಿ ವೈದ್ಯಕೀಯ ವಲಯದ ಬಹುತೇಕರು ಕೋವಿಡ್ ಲಸಿಕೆ ಬೂಸ್ಟರ್ ಡೋಸ್​ಗೆ ಮೊರೆ ಹೋಗುತ್ತಿದ್ದಾರೆ. ಈಗಾಗಲೇ ಬಹಳಷ್ಟು ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಆಂಟಿಬಾಡಿಸ್ ಪರೀಕ್ಷೆಗೆ ಒಳಗಾಗುತ್ತಿದ್ದು, ಯಾರಲ್ಲಿ ಲಸಿಕೆ ಪರಿಣಾಮ ತಗ್ಗಿ ರೋಗ ನಿರೋಧಕ ಶಕ್ತಿ ಕುಂದಿದೆಯೋ ಅಂತಹವರು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್) ಅನುಮತಿ ಇಲ್ಲದೆಯೇ ಬೂಸ್ಟರ್ ಡೋಸ್ ತೆಗೆದುಕೊಳ್ಳುತ್ತಿದ್ದಾರೆ. ಹೀಗೆ ಲಸಿಕೆ ಪಡೆಯುವವರ ಮಾಹಿತಿ ಕೋವಿಡ್ ಪೋರ್ಟಲ್​ನಲ್ಲಿ ದಾಖಲಾಗುವುದಿಲ್ಲ. ಅವರಿಗೆ ಪ್ರಮಾಣಪತ್ರವೂ ದೊರೆಯುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.

    ಕುಂದಿದೆ ರೋಗನಿರೋಧಕ ಶಕ್ತಿ: ನಾವು ಸದಾ ರೋಗಿಗಳ ಆರೈಕೆಯಲ್ಲಿ ಇರುತ್ತೇವೆ. ಹೀಗಾಗಿ ನಮಗೆ ರೋಗನಿರೋಧಕ ಶಕ್ತಿಯ ಅಗತ್ಯವಿದೆ. ದೇಶದಲ್ಲಿ ಕೋವಿಡ್ ಲಸಿಕೆ ಅಭಿಯಾನ ಆರಂಭವಾಗಿ 10 ತಿಂಗಳು ಕಳೆದಿದೆ. ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗೆ ಆದ್ಯತೆ ಮೇರೆಗೆ ಮೊದಲು ಲಸಿಕೆ ನೀಡಲಾಗಿತ್ತು. ಹಾಗಾಗಿ ನಮ್ಮಲ್ಲಿ ಕೆಲವರಿಗೆ ಲಸಿಕೆ ಪರಿಣಾಮ ತಗ್ಗಿದ್ದು, ರೋಗ ನಿರೋಧಕ ಶಕ್ತಿಯ ಕೊರತೆ ಎದುರಾಗಿದೆ. ನಮ್ಮ ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ ಆಂಟಿಬಾಡಿಸ್ ಪರೀಕ್ಷೆಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವಂತಹವರು ಮಾತ್ರ ಬೂಸ್ಟರ್ ಡೋಸ್ ಪಡೆದುಕೊಳ್ಳುತ್ತಿದ್ದಾರೆ’ ಎಂದು ಹೆಸರು ಹೇಳಲಿಚ್ಚಿಸದ ವೈದ್ಯರೊಬ್ಬರು ತಿಳಿಸಿದ್ದಾರೆ.

    • ದೀಪಾವಳಿ ಆಚರಣೆ ಸರಳವಾಗಿರಲಿ. ಅನಗತ್ಯವಾಗಿ ಗುಂಪುಗೂಡುವುದು ಬೇಡ
    • ಸಾಮಾಜಿಕ ಅಂತರ ಕಾಪಾಡುವುದು ಮತ್ತು ಮಾಸ್ಕ್ ಧರಿಸುವುದನ್ನು ಮುಂದುವರಿಸಿ
    • ಸಾಧ್ಯವಾದಷ್ಟೂ ಜನಸಂದಣಿ ಇರುವ ಕಡೆ ಹೋಗದಿರಿ
    • ಲಸಿಕೆ ಪಡೆಯದವರು ಕಡ್ಡಾಯವಾಗಿ ವ್ಯಾಕ್ಸಿನ್ ಪಡೆಯುವುದನ್ನು ಮರೆಯದಿರಿ
    • ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಬೇಕಾದ ಕ್ರಮಗಳನ್ನು ವೈದ್ಯರ ಸಲಹೆ ಮೇರೆಗೆ ಪಾಲಿಸಿ

    ಪಟಾಕಿ ಮೇಲೆ ಸಂಪೂರ್ಣ ನಿಷೇಧ ಹೇರಲು ಸಾಧ್ಯವಿಲ್ಲ

    ನವದೆಹಲಿ: ಕಾಳಿಪೂಜೆ, ದೀಪಾವಳಿ, ಛತ್ ಪೂಜೆ, ಜಗದ್ಧಾತ್ರಿ ಪೂಜೆ, ಗುರುನಾನಕ್ ಜನ್ಮದಿನ, ಕ್ರಿಸ್ಮಸ್, ಹೊಸ ವರ್ಷಾಚರಣೆ ವೇಳೆ ಪಟಾಕಿ ಬಳಕೆ ಮೇಲೆ ಸಂಪೂರ್ಣ ನಿಷೇಧ ಹೇರಿದ್ದ ಕೋಲ್ಕತ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದ್ದು, ಪಟಾಕಿ ಬಳಕೆ ಹಾಗೂ ನಿಷೇಧದ ಕುರಿತಂತೆ ತಾನು ಜಾರಿ ಮಾಡಿರುವ ನಿರ್ದೇಶನಗಳನ್ನು ಜಾರಿಗೆ ಸರ್ಕಾರ ಗಮನಹರಿಸಬೇಕು ಎಂದು ಹೇಳಿದೆ. ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಿಲ್ಲ. ಆದರೆ, ಪಟಾಕಿಯಲ್ಲಿ ಮಾಲಿನ್ಯಕಾರಕ ವಸ್ತುಗಳು ಇರದಂತೆ ನೋಡಿಕೊಳ್ಳಬೇಕು ಮತ್ತು ಹಸಿರು ಪಟಾಕಿಗಳ ಬಳಕೆಗೆ ಆದ್ಯತೆ ನೀಡಬೇಕು ಎಂದು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ನೇತೃತ್ವದ ಪೀಠ ಸ್ಪಷ್ಟಪಡಿಸಿದೆ. 2020ರ ಜುಲೈ ಮತ್ತು 2021ರ ಅಕ್ಟೋಬರ್ ಆದೇಶಗಳಲ್ಲಿ ಹಸಿರು ಪಟಾಕಿ ಬಳಕೆಗೆ ಅವಕಾಶ ನೀಡಿದ್ದ ಸುಪ್ರೀಂ ಕೋರ್ಟ್, ಪಟಾಕಿಗಳಲ್ಲಿ ಬೇರಿಯಮ್ ಉಪ್ಪಿನ ಅಂಶಗಳನ್ನು ಬಳಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿತ್ತು. ಆದರೆ, ಸಾಮಾನ್ಯ ಪಟಾಕಿ ಮತ್ತು ಹಸಿರು ಪಟಾಕಿ ನಡುವೆ ವ್ಯತ್ಯಾಸ ಗುರುತಿಸಿ ಕಾನೂನು ಉಲ್ಲಂಘನೆ ಮಾಡುವವರನ್ನು ಪತ್ತೆಹಚ್ಚುವುದು ಕಾರ್ಯಾಂಗಕ್ಕೆ ಅಸಾಧ್ಯವಾದ ಕೆಲಸವಾಗಿದ್ದು ಎಂದಿದ್ದ ಕೋಲ್ಕತ ಹೈಕೋರ್ಟ್, ರಾಜ್ಯದಲ್ಲಿರುವ ಕರೊನಾ ಪರಿಸ್ಥಿತಿ ಮತ್ತು ವಾಯು ಮಾಲಿನ್ಯ ಪ್ರಮಾಣ ಹೆಚ್ಚುತ್ತಿರುವುದನ್ನು ಗಮನಿಸಿ ಪಟಾಕಿಗಳ ಸಂಪೂರ್ಣ ನಿಷೇಧಕ್ಕೆ ಆದೇಶ ನೀಡಿತ್ತು.

    ಡಾಕ್ಟರ್​ ಆಗ್ತೀನಿ, ಫಾರಿನ್ನಲ್ಲೇ ಸೆಟ್ಲ್​ ಆಗ್ತೀನಿ, ಮದ್ವೆನೇ ಆಗಲ್ಲ ಎಂದಿದ್ದ ಅಪ್ಪು; ಬಾಲ್ಯದ ಆ ಸಂದರ್ಶನ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts