ಡಾಕ್ಟರ್​ ಆಗ್ತೀನಿ, ಫಾರಿನ್ನಲ್ಲೇ ಸೆಟ್ಲ್​ ಆಗ್ತೀನಿ, ಮದ್ವೆನೇ ಆಗಲ್ಲ ಎಂದಿದ್ದ ಅಪ್ಪು; ಬಾಲ್ಯದ ಆ ಸಂದರ್ಶನ ವೈರಲ್

Puneeth - Final
Puneeth
Published on

ಬೆಂಗಳೂರು: ಸಾಕಷ್ಟು ತರಬೇತಿ ಬಳಿಕವೂ ಕ್ಯಾಮರಾ ಎದುರಿಸುವಾಗ ಬಹಳಷ್ಟು ನಟ-ನಟಿಯರಿಗೆ ಭಯವಾಗುವುದು ಸಾಮಾನ್ಯ. ಅದನ್ನು ಹಲವರು ಹೇಳಿಕೊಂಡಿದ್ದಾರೆ ಕೂಡ. ಆದರೆ ಬಾಲ್ಯದಲ್ಲೇ ರಾಷ್ಟ್ರಪ್ರಶಸ್ತಿ ಗಿಟ್ಟಿಸಿಕೊಂಡಿದ್ದ ಪವರ್​ ಸ್ಟಾರ್ ಪುನೀತ್ ರಾಜಕುಮಾರ್​ ಅವರಿಗೆ ಚಿಕ್ಕವಯಸ್ಸಿನಲ್ಲಿ ನಟಿಸಿದ್ದರೂ ಕ್ಯಾಮರಾ ಭಯವಿರಲಿಲ್ಲ. ಇದನ್ನು ಅವರೇ ಸ್ವತಃ ಹೇಳಿಕೊಂಡಿದ್ದಾರೆ.

ಲೋಹಿತ್ ಅರ್ಥಾತ್​ ಪುನೀತ್​ಗೆ ಎಂಟು ವರ್ಷ ತುಂಬಿದಾಗ ಕನ್ನಡದ ನಿಯತಕಾಲಿಕವೊಂದು ಅವರ ಸಂದರ್ಶನ ಮಾಡಿತ್ತು. ಅದರಲ್ಲಿ 'ನಿನಗೆ ಕ್ಯಾಮರಾ ಮುಂದೆ ನಿಂತಾಗ ಭಯವಾಗುವುದಿಲ್ಲವೇ?' ಎಂದು ಕೇಳಿದ್ದಕ್ಕೆ ಪುನೀತ್​, 'ಯಾಕೆ ಹೆದರಬೇಕು, ಭಕ್ತ ಪ್ರಹ್ಲಾದ ಚಿತ್ರದಲ್ಲಿ ಮೈಮೇಲೆ ಹಾವುಗಳನ್ನು ಹಾಕಿಕೊಂಡು ಅಭಿನಯಿಸಿದ್ದೇನೆ' ಎಂದು ಉತ್ತರಿಸಿದ್ದರು. 'ಅಪ್ಪಾಜಿ ಹಿರಣ್ಯಕಶಿಪು ಪಾತ್ರದಲ್ಲಿ ಕೋಪದಿಂದ ಮಾತನಾಡುವಾಗಲೂ ಭಯವಾಗಲಿಲ್ಲವೇ?' ಎಂದು ಕೇಳಿದಾಗಲೂ, 'ಇಲ್ಲವೇ ಇಲ್ಲ' ಎಂದು ಉತ್ತರಿಸಿದ್ದರು.
ಆ ಸಂದರ್ಶನಲ್ಲಿ ಅವರು ಸಾಕಷ್ಟು ಅಂಶಗಳನ್ನು ಹೇಳಿಕೊಂಡಿದ್ದು ಅದರ ಕೆಲವು ಸ್ವಾರಸ್ಯಕರ ತುಣುಕುಗಳು ಇಲ್ಲಿದೆ.

ನಿನಗೆ ಏನಾದರೂ ಬೇಕಾದರೆ ಅಪ್ಪಾಜಿಯನ್ನು ಕೇಳ್ತೀಯೋ ಅಮ್ಮನನ್ನು ಕೇಳ್ತಿಯೋ?
- ನಾನು ಅಪ್ಪಾಜಿಯನ್ನೇ ಕೇಳ್ತೇನೆ, ಅಮ್ಮನನ್ನು ಕೇಳಿದ್ರೆ ನಾಳೆ ನೋಡೋಣ ಅಂತಾರೆ, ಅಪ್ಪಾಜಿ ಕೇಳಿದ ತಕ್ಷಣ ಕೊಡಿಸ್ತಾರೆ.

ಅಪ್ಪಾಜಿ ನಿಮ್ಮ ಮೇಲೆ ರೇಗ್ತಾರೇನು?
- ಎಲ್ಲಿಗಾದರೂ ಹೊರಡುವಾಗ ತಡವಾದರೆ ರೇಗ್ತಾರೆ. ಯಾರನ್ನಾದರೂ ನಾವು ಬೈದರೆ ಹಾಗೆ ಮಾಡಬಾರದು ಅಂತಾರೆ. ಒಂದೊಂದು ಸಲ ತಮಾಷೆಗೆ ಅಯ್ಯೋ ಬಡ್ಡಿಮಗನೆ ಅಂತ ಬೈತಾರೆ.

ಅಪ್ಪಾಜಿ ಯಾವಾಗಲಾದರೂ ನಿನಗೆ ಹೊಡೆದಿದ್ದಾರೇನು?
- 'ಶಂಕರ್​ ಗುರು' ಸಿನಿಮಾ ಶೂಟಿಂಗ್​ಗೆ ಕಾಶ್ಮೀರಕ್ಕೆ ಹೋಗಿದ್ದಾಗ ನಾನು ನನ್ನ ಸ್ನೇಹಿತ ಸತೀಶ್​ನನ್ನು ಹೊಡೆದಿದ್ದೆ. ಆಗ ಅಪ್ಪಾಜಿ ನನಗೆ ಹೊಡೆದು ಹಾಗೆಲ್ಲ ಮಾಡಬಾರದು ಅಂತ ಬುದ್ಧಿ ಹೇಳಿದ್ದರು.

ಅಪ್ಪಾಜಿ ಎಂಥ ಚಿತ್ರಗಳಲ್ಲಿ ಅಭಿನಯಿಸಬೇಕು?
- ಅವರು ಸಾಯೋವಂಥ ಪಾತ್ರ ನನಗೆ ಇಷ್ಟ ಆಗಲ್ಲ.

'ಭಕ್ತ ಪ್ರಹ್ಲಾದ'ದಲ್ಲಿ ನರಸಿಂಹ ನಿಮ್ಮ ತಂದೆಯ ಹೊಟ್ಟೆ ಬಗೀತಾನಲ್ಲ?!
- ಅದು ದೇವರ ಕಥೆ, ಆದ್ದರಿಂದ ಅದು ಪರವಾಗಿಲ್ಲ..

ಅಪ್ಪಾಜಿ ಜೊತೆ ಬೇರೆ ನಾಯಕಿಯರು ಪಾತ್ರ ಮಾಡುವುದು ನಿನಗೆ ಇಷ್ಟವೇ?
- ಸರಿತಾ ನನಗೆ ಒಪ್ಪಿಗೆಯಾಗಲ್ಲ, ಆಕೆ ಕಪ್ಪು, ಸರಿಯಾಗಿ ಕನ್ನಡ ಬರಲ್ಲ. ಲಕ್ಷ್ಮಿ, ಅಂಬಿಕಾ, ಮಾಧವಿಯಾದರೆ ಚೆನ್ನಾಗಿರುತ್ತೆ.

ನಿಮ್ಮ ತಾಯಿ ಕಪ್ಪಗಿಲ್ಲವೇ?
- ಅವರು ನಮ್ಮ ಅಮ್ಮ, ಹೇಗಿದ್ದರೂ ಸರಿ.

ನಿನಗೆ ಮುಂದೆ ಏನಾಗ್ಬೇಕಂತ ಆಸೆ?
- ಎರಡು ಮೂರು ಸಿನಿಮಾದಲ್ಲಿ ಮಾಡಿ ಆಮೇಲೆ ಓದೋಕೆ ಹೋಗ್ತೀನಿ, ಆಗ ನಟಿಸಲ್ಲ. ಕಾಲೇಜಿಗೆ ಹೋಗ್ತೀನಿ, ಡಾಕ್ಟರ್ ಆಗ್ತೀನಿ. ಫಾರಿನ್​ಗೆ ಹೋಗಿ ಅಲ್ಲೇ ಇದ್ಬಿಟ್ಟು, ಅಲ್ಲೇ ಕನ್ನಡ ಪಿಕ್ಚರ್ ಮಾಡ್ತೀನಿ. ನಾನು ಮದ್ವೆನೇ ಆಗಲ್ಲ, ಬ್ರಹ್ಮಚಾರಿಯಾಗೇ ಇರ್ತೀನಿ, ಅಪ್ಪನ ಥರ ಫೇಮಸ್ ಆಗ್ತೀನಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net