More

    ಜೇಮ್ಸ್​ಗೆ ಯಾವುದೇ ಸಮಸ್ಯೆ ಇಲ್ಲ; ಚಿತ್ರ ಬಿಡುಗಡೆ ಖಂಡಿತಾ ಎನ್ನುತ್ತಾರೆ ಚೇತನ್

    ಬೆಂಗಳೂರು: ಪುನೀತ್ ನಿಧನರಾದ ಸುದ್ದಿ ಹೊರಬೀಳುತ್ತಿದ್ದಂತೆಯೇ, ಮೊದಲು ಕೇಳಿಬಂದ ಪ್ರಶ್ನೆ ಏನೆಂದರೆ, ‘ಜೇಮ್್ಸ’ ಚಿತ್ರದ ಕಥೆಯೇನು ಎಂದು. ಏಕೆಂದರೆ, ಆ ಚಿತ್ರ ಇನ್ನೂ ಪೂರ್ತಿಯಾಗಿಲ್ಲ. ಹೀಗಿರುವಾಗ ಚಿತ್ರ ಬಿಡುಗಡೆಯಾಗುತ್ತದೋ ಇಲ್ಲವೋ? ಎಂಬ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಆದರೆ, ಚಿತ್ರ ಬಿಡುಗಡೆಗೆ ಯಾವುದೇ ಸಮಸ್ಯೆ ಇಲ್ಲ, ಚಿತ್ರ ಖಂಡಿತಾ ಬಿಡುಗಡೆಯಾಗುತ್ತದೆ ಎಂದು ನಿರ್ದೇಶಕ ಚೇತನ್ ಕುಮಾರ್ ಹೇಳಿದ್ದಾರೆ.

    ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು, ‘ಚಿತ್ರದ ಬಿಡುಗಡೆಗೆ ಯಾವುದೇ ಸಮಸ್ಯೆ ಇಲ್ಲ. ಒಂದು ಹಾಡು ಮತ್ತು ಎರಡು ದಿನದ ಪ್ಯಾಚ್​ವರ್ಕ್ ಮಾತ್ರ ಬಾಕಿ ಇದೆ. ಅವೆರೆಡನ್ನೂ ಬಿಡಬಹುದು. ಮಿಕ್ಕಂತೆ ಪುನೀತ್ ಎಲ್ಲವನ್ನೂ ಮುಗಿಸಿಕೊಟ್ಟಿದ್ದಾರೆ. ನಿಧನರಾಗುವುದಕ್ಕೆ ಮುನ್ನ ಅವರ ಮನೆಯಲ್ಲೇ ಫೋಟೋಶೂಟ್ ಸಹ ಮುಗಿಸಿಕೊಟ್ಟಿದ್ದರು. ನಮ್ಮ ಹಾಡಿನ ಚಿತ್ರೀಕರಣ ಮುಗಿಸಿ, ‘ದ್ವಿತ್ವ’ ಚಿತ್ರೀಕರಣಕ್ಕೆ ಹೋಗುವುದಾಗಿ ಹೇಳಿದ್ದರು. ಈ ಸಂಬಂಧ ಮಾತನಾಡುವುದಕ್ಕೆ ಶುಕ್ರವಾರ ನನ್ನನ್ನೂ, ನಿರ್ವಪಕರನ್ನೂ ಕರೆದಿದ್ದರು. ಆದರೆ, ಅಷ್ಟರಲ್ಲಿ ಏನೇನೋ ಆಗಿಹೋಯ್ತು’ ಎನ್ನುತ್ತಾರೆ ಚೇತನ್.

    ಮಿಕ್ಕೆಲ್ಲವನ್ನು ಮುಗಿಸಿಕೊಟ್ಟಿದ್ದರೂ, ಪುನೀತ್ ಅವರ ಡಬ್ಬಿಂಗ್ ಮಾತ್ರ ಇನ್ನೂ ಬಾಕಿ ಇದೆ. ಅವರ ಪಾತ್ರಕ್ಕೆ ಶಿವರಾಜಕುಮಾರ್ ಡಬ್ ಮಾಡಬೇಕು ಎಂಬ ಒತ್ತಾಯ ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಚೇತನ್, ‘ಡಬ್ಬಿಂಗ್ ಬಗ್ಗೆ ಸದ್ಯಕ್ಕೆ ಯೋಚನೆ ಮಾಡಿಲ್ಲ. ಅಭಿಮಾನಿಗಳು ಶಿವಣ್ಣ ಅವರಿಂದ ಡಬ್ಬಿಂಗ್ ಮಾಡಿಸಿ ಎಂದು ಕೇಳುತ್ತಿದ್ದಾರೆ. ಈ ವಿಷಯವಾಗಿ, ಇನ್ನೂ ಯಾವ ನಿರ್ಧಾರವನ್ನೂ ತೆಗೆದುಕೊಂಡಿಲ್ಲ. ಚಿತ್ರೀಕರಣ ಸಮಯದಲ್ಲಿ ಮಾತನಾಡಿದ್ದನ್ನೇ ಉಳಿಸಿಕೊಳ್ಳಬಹುದು. ಇವತ್ತು ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಹಾಗಾಗಿ, ಈ ಕುರಿತು ಮುಂದಿನ ದಿನಗಳಲ್ಲಿ ರ್ಚಚಿಸಿ ಆ ನಂತರ ತೀರ್ಮಾನ ತೆಗೆದುಕೊಳ್ಳುತ್ತೇವೆ. ಒಂದಂತೂ ಸತ್ಯ, ಸಿನಿಮಾ ಬಿಡುಗಡೆಗೆ ಯಾವುದೇ ಸಮಸ್ಯೆ ಇಲ್ಲ. ಖಂಡಿತಾ ಸಿನಿಮಾ ಬಿಡುಗಡೆಯಾಗುತ್ತದೆ’ ಎನ್ನುತ್ತಾರೆ.

    ಪುನೀತ್ ಹುಟ್ಟುಹಬ್ಬವಾದ ಮಾರ್ಚ್ 17ರಂದು ಚಿತ್ರ ಬಿಡುಗಡೆಯಾಗುತ್ತದಾ? ಎಂದರೆ, ಈ ಬಗ್ಗೆ ಇನ್ನಷ್ಟೇ ತೀರ್ಮಾನ ತೆಗೆದುಕೊಳ್ಳಬೇಕಿದೆ ಎನ್ನುತ್ತಾರೆ ಚೇತನ್.

    ಹೆಮ್ಮೆಯ ವಿಷಯ: ಪುನೀತ್ ಪಾತ್ರಕ್ಕೆ ಡಬ್ಬಿಂಗ್ ಮಾಡುವ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಶಿವರಾಜಕುಮಾರ್, ‘ಇನ್ನೂ ಅದರ ಬಗ್ಗೆ ಮಾತುಕತೆಯಾಗಿಲ್ಲ. ಅಂಥದ್ದೊಂದು ಪ್ರಸ್ತಾಪ ಬಂದರೆ, ಖಂಡಿತಾ ಮಾಡುತ್ತೇನೆ. ಅದರಲ್ಲಿ ಯಾವುದೇ ತಪ್ಪಿಲ್ಲ. ತಮ್ಮನಿಗಾಗಿ ಡಬ್ ಮಾಡುವುದು ನಿಜಕ್ಕೂ ಹೆಮ್ಮೆಯ ವಿಷಯ’ ಎನ್ನುತ್ತಾರೆ.

    ಡಾಕ್ಟರ್​ ಆಗ್ತೀನಿ, ಫಾರಿನ್ನಲ್ಲೇ ಸೆಟ್ಲ್​ ಆಗ್ತೀನಿ, ಮದ್ವೆನೇ ಆಗಲ್ಲ ಎಂದಿದ್ದ ಅಪ್ಪು; ಬಾಲ್ಯದ ಆ ಸಂದರ್ಶನ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts