ಬೆಂಗಳೂರು: ರಾಜ್ಯ ಮಾತ್ರವಲ್ಲದೆ ದೇಶವನ್ನೂ ಕಂಗೆಡಿಸಿರುವ ಕರೊನಾ ಎರಡನೇ ಅಲೆಯ ಪ್ರಭಾವ ಜೂನ್ನಲ್ಲಿ ತಗ್ಗಲಿದೆ. ಹಾಗಂತ ಸುಮ್ಮನಿರುವ ಹಾಗಿಲ್ಲ, ಮೂರನೇ ಅಲೆಯನ್ನು ಎದುರಿಸಲು ಈಗಿನಿಂದಲೇ ಸಜ್ಜಾಗಬೇಕಿದೆ. ಹೀಗೊಂದು ಅಭಿಪ್ರಾಯವನ್ನು ಮಣಿಪಾಲ್ ಆಸ್ಪತ್ರೆಗಳ ಚೇರ್ಮನ್ ಡಾ. ಸುದರ್ಶನ್ ಬಲ್ಲಾಳ್ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರ ಜವಾಬ್ದಾರಿ ಎಂಬ ವಿಷಯದ ಬಗ್ಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ಏರ್ಪಡಿಸಿದ್ದ ಜೂಮ್ ಸಂವಾದದಲ್ಲಿ ಅವರು ಮಾತನಾಡಿದರು. ಕೋವಿಡ್ ಮೊದಲ ಅಲೆ ಬಳಿಕ ಮುಂಜಾಗ್ರತೆಯ ಕ್ರಮಗಳನ್ನು ಎಲ್ಲರೂ ನಿರ್ಲಕ್ಷಿಸಿದ್ದರಿಂದ ಇಂದು ಸೋಂಕು ವ್ಯಾಪಕವಾಗಿ ಉಲ್ಬಣಿಸಿ ಸಾವು-ನೋವು ಹೆಚ್ಚಲು ಕಾರಣವಾಗಿದೆ ಎಂದರು.
ಎರಡನೇ ಅಲೆ ಸಂದರ್ಭದಲ್ಲಿ 20 ರಿಂದ 50 ವರ್ಷದೊಳಗಿನ ವಯೋಮಾನದವರಲ್ಲಿ ಸಾವು-ನೋವು ಹೆಚ್ಚಾಗಿರುವುದು ಕಂಡುಬಂದಿದೆ. ಆದರೆ ಮೂರನೇ ಅಲೆ ಮಕ್ಕಳ ಮೇಲೂ ಪರಿಣಾಮ ಬೀರಬಹುದು ಎನ್ನುವ ಅಭಿಪ್ರಾಯಗಳನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಮೂರನೇ ಅಲೆ ಕುರಿತು ಮುಂಜಾಗ್ರತೆಯೇ ದೊಡ್ಡ ಮದ್ದು ಎಂದು ಬಲ್ಲಾಳ್ ಕಿವಿಮಾತು ಹೇಳಿದರು.
ಕೋವಿಡ್ ಮೂರನೇ ಅಲೆಯ ಪರಿಣಾಮ ತಡೆಯಲು ಗ್ರಾಮೀಣ ಮಟ್ಟದ ತನಕ ಆರೋಗ್ಯ ವ್ಯವಸ್ಥೆ ಇನ್ನಷ್ಟು ಸುಧಾರಣೆ ಮಾಡಲು ಮೊದಲ ಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಸೇರಿ ಎಲ್ಲರ ಪ್ರಯತ್ನ ಮುಖ್ಯವಾಗಿದೆ. ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ಅಷ್ಟು ಮುಂದುವರಿದ ಅಮೇರಿಕದಲ್ಲಿ ಸೋಂಕಿತರಿಗೆ ಬೆಡ್ ನೀಡಲಾಗದಷ್ಟು ಪರಿಸ್ಥಿತಿ ಹದಗೆಟ್ಟಿತು. ಅಂತಹ ಸ್ಥಿತಿ ಈಗ ನಮಗೆ ಬಂದೊದಗಿದೆ. ಜನರು ಕಟ್ಟುನಿಟ್ಟಾಗಿ ಮುಂಜಾಗ್ರತೆ ವಹಿಸಲು ಸಹಕಾರ ನೀಡಬೇಕಿದೆ ಎಂದರು.
ಚೀನಾದಲ್ಲಿ ವೈರಸ್ ಕೃತಕವಾಗಿ ಸೃಷ್ಟಿ ಮಾಡಿದ್ದು ಎನ್ನುವುದಕ್ಕೆ ಯಾವುದೇ ವೈದ್ಯಕೀಯ ಪುರಾವೆಗಳಿಲ್ಲ. ಆದರೆ ಚೀನಾ ಈ ರೋಗದ ಹತೋಟಿ ತರುವಲ್ಲಿ ಪರಿಣಾಮಕಾರಿ ಕ್ರಮ ಕೈಗೊಂಡಿತು. ನಮ್ಮದು ಪ್ರಜಾಪ್ರಭುತ್ವ ದೇಶ. ಇಲ್ಲಿ ಅಷ್ಟು ಬಿಗಿ ನಿಲುವು ತೆಗೆದುಕೊಳ್ಳುವುದು ಸವಾಲಾಗಿದೆ ಎಂದು ಅಭಿಪ್ರಾಯಪಟ್ಟರು. ಕೋವಿಡ್ ಸೋಂಕು ಹೆಚ್ಚು ಜನಸಂದಣಿಯ ಪ್ರದೇಶದಲ್ಲಿ ಗಾಳಿ ಮೂಲಕ ಹರಡುತ್ತಿರುವುದು ದೃಢವಾಗಿದೆ. ಆದ್ದರಿಂದ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದ ಅವರು, ನಾವಿನ್ನು ಭವಿಷ್ಯದ ದಿನಗಳಿಗೆ ಗಮನ ನೀಡಬೇಕು. ಈ ನಿಟ್ಟಿನಲ್ಲಿ ಮಾಧ್ಯಮದ ಪಾತ್ರ ಮಹತ್ವದ್ದಾಗಿದೆ. ಜನರಿಗೆ ವೈದ್ಯಕೀಯ ಮಾಹಿತಿ ನೀಡಿ ಅವರನ್ನು ಮಾನಸಿಕವಾಗಿ ಸದೃಢಗೊಳಿಸುವುದು ಇಂದಿನ ತುರ್ತಾಗಿದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸುದ್ದಿಮನೆಯಲ್ಲಿ ಕೆಲಸ ಮಾಡುವ ಪತ್ರಕರ್ತರದ್ದು ಮಹತ್ವದ ಜವಾಬ್ದಾರಿ. ಸರ್ಕಾರ ಪತ್ರಕರ್ತರನ್ನು ಕೋವಿಡ್ ಫ್ರಂಟ್ಲೈನ್ ವಾರಿಯರ್ಸ್ ಎಂದು ಘೋಷಿಸಿರುವುದು ಸ್ವಾಗತಾರ್ಹ. ಈ ಹೊತ್ತಿನಲ್ಲಿ ಪತ್ರಕರ್ತರ ಹಿತದೃಷ್ಟಿಯಿಂದ ಈ ಮಾಧ್ಯಮ ಸಂವಾದ ಏರ್ಪಡಿಸಲಾಗಿದೆ ಎಂದರು. ಪತ್ರಕರ್ತರಾದ ಜೋಗಿ, ಚಂದ್ರಕಾಂತ ವಡ್ಡು, ಶ್ಯಾಮಸುಂದರ್, ಆರಾಧ್ಯ, ಕೆ.ವಿ. ಪರಮೇಶ್, ಎಸ್.ವಿ.ಲಕ್ಷ್ಮೀನಾರಾಯಣ, ಸಿರಾಜ್ ಬಿಸರಳ್ಳಿ, ಪ್ರಭಾ, ಪಂಕಜ, ಆಕಾಶವಾಣಿ ನಿರ್ದೇಶಕಿ ಡಾ.ನಿರ್ಮಲ ಎಲಿಗಾರ್, ಚಿತ್ರ ನಿರ್ದೇಶಕ ನಂಜುಂಡೇಗೌಡ, ಕೆಯುಡಬ್ಲ್ಯುಜೆ ಪದಾಧಿಕಾರಿಗಳು ಭಾಗವಹಿಸಿದ್ದರು.