More

    ಕರೊನಾ ಮೂರನೇ ಅಲೆ ತಡೆಗೆ ಕಾರ್ಯಪಡೆ ರಚಿಸಲು ಸಜ್ಜಾದ ಸಿಎಂ; ಲಸಿಕೆ ಕಾರ್ಯತಂತ್ರಕ್ಕೂ ಸಲಹೆಗಾರರ ನೇಮಕ

    ಬೆಂಗಳೂರು: ಕರೊನಾ ಎರಡನೆಯ ಅಲೆ ಹಾವಳಿ ಇಡುತ್ತಿರುವ ನಡುವೆಯೇ ಅದು ಸದ್ಯಕ್ಕೆ ತಹಬದಿಗೆ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇದೀಗ ಮೂರನೇ ಅಲೆಯನ್ನು ಎದುರಿಸಲು ಸಜ್ಜಾಗಿದೆ. ರಾಜ್ಯದಲ್ಲಿನ ಕೋವಿಡ್-19 ಪರಿಸ್ಥಿತಿ ಕುರಿತ ಮಾಹಿತಿ ನೀಡಲು ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ವಿಷಯ ತಿಳಿಸಿದ್ದಾರೆ.

    ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಏ. 24ರಿಂದ ಕೆಲವು ನಿರ್ಬಂಧಗಳನ್ನು ಹೇರಲಾಗಿತ್ತು. ಅಲ್ಲದೆ, ಮೇ 10ರಿಂದ ಇನ್ನಷ್ಟು ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಯಿತು. ಪರಿಣಾಮವಾಗಿ ಕರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ರಾಜ್ಯದಲ್ಲಿ ಮೇ 5ರಂದು ಗರಿಷ್ಠ 50,112 ಪ್ರಕರಣಗಳು ವರದಿಯಾಗಿದ್ದು, ಸರ್ಕಾರದ ಕಠಿಣ ಕ್ರಮಗಳಿಂದಾಗಿ ವರದಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ನಿನ್ನೆ 39,900ಕ್ಕೆ ಇಳಿದಿದೆ ಎಂಬುದು ಸಮಾಧಾನಕರ ಸಂಗತಿ. ಬೆಂಗಳೂರಿನಲ್ಲಿ ಮೇ 5 ರಂದು 23,106 ಪ್ರಕರಣಗಳಿದ್ದಿದ್ದು, ನಿನ್ನೆಗೆ 16,286 ಸಂಖ್ಯೆಗೆ ಇಳಿಕೆಯಾಗಿದೆ.

    ಇದು ನಿರ್ಬಂಧಗಳ ಜಾರಿ ನಂತರ ಪರಿಸ್ಥಿತಿ ಸುಧಾರಿಸುತ್ತಿರುವುದಕ್ಕೆ ನಿದರ್ಶನ ಎಂದು ಸಿಎಂ ತಿಳಿಸಿದರು. ಪ್ರಾರಂಭದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರ ಏರುಗತಿಯಲ್ಲಿದ್ದ ಬೆಂಗಳೂರು, ಬೀದರ್ ಮತ್ತು ಕಲಬುರಗಿಯಲ್ಲಿ ಪ್ರಕರಣಗಳ ಸಂಖ್ಯೆ ಹಾಗೂ ಪಾಸಿಟಿವಿಟಿ ದರ ಕಡಿಮೆಯಾಗುತ್ತಿದೆ. ಕಠಿಣ ನಿಯಮಾವಳಿಗಳನ್ನು ಜಾರಿಗೆ ತಂದ ನಂತರ ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಿದೆ. ಯಾರೂ ಆತಂಕ ಪಡಬೇಕಾದ ಅಗತ್ಯವಿಲ್ಲ. ಜನತೆ ಎಲ್ಲ ನಿರ್ಬಂಧಗಳನ್ನೂ ಮುಕ್ತವಾಗಿ ಸ್ವೀಕರಿಸಿ ಅನುಸರಿಸಿದಾಗ ಮಾತ್ರ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯ. ಆದ್ದರಿಂದ ರಾಜ್ಯದ ಜನತೆ ಸಹಕರಿಸಬೇಕು ಎಂದು ಕೋರಿದರು.

    ಇದನ್ನೂ ಓದಿ: ಶವಗಳು ಹುಟ್ಟುಹಾಕಿದ ಚಿಂತೆ!?: ಕರೊನಾ ಸೋಂಕು ಹರಡುವಿಕೆ ಬಗ್ಗೆ ಕಾಡುತ್ತಿವೆ ಈ 2 ಪ್ರಮುಖ ಪ್ರಶ್ನೆಗಳು!

    ಕಳೆದ ವರ್ಷ ಮಾರ್ಚ್‍ನಲ್ಲಿ ಆರೋಗ್ಯ ಇಲಾಖೆ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ 1970 ಆಕ್ಸಿಜನೇಟೆಡ್ ಬೆಡ್‍ಗಳು, 444 ಐಸಿಯು ಹಾಗೂ 610 ವೆಂಟಿಲೇಟರ್ ಸಹಿತ ಐಸಿಯುಗಳ ಸೌಲಭ್ಯವಿತ್ತು. ಈ ಎಲ್ಲ ಸೌಲಭ್ಯಗಳನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಪ್ರಸ್ತುತ ಇಲಾಖೆ ವ್ಯಾಪ್ತಿಯ ಆರೋಗ್ಯ ಸಂಸ್ಥೆಗಳಲ್ಲಿ 24 ಸಾವಿರ ಆಕ್ಸಿಜನೇಟೆಡ್ ಬೆಡ್‍ಗಳು, 1145 ಐಸಿಯು ಬೆಡ್‍ಗಳು, 2059 ವೆಂಟಿಲೇಟರ್ ಬೆಡ್‍ಗಳು ಹಾಗೂ 1248 ಹೆಚ್‍ಎಫ್‍ಎನ್‍ಸಿ ಸೌಲಭ್ಯಗಳು ಲಭ್ಯ ಇವೆ ಎಂದರು. ಅಂತೆಯೇ ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಆಕ್ಸಿಜನೇಟೆಡ್ ಬೆಡ್‍ಗಳ ಸಂಖ್ಯೆ ದ್ವಿಗುಣಗೊಳಿಸಿ, 4700ರಿಂದ 9405ಕ್ಕೆ ಹೆಚ್ಚಿಸಲಾಗಿದೆ. ವೆಂಟೆಲೇಟೆಡ್ ಬೆಡ್‍ಗಳ ಸಂಖ್ಯೆ 341ರಿಂದ 646ಕ್ಕೆ, ಎಚ್‍ಎಫ್‍ಎನ್‍ಸಿಗಳ ಸಂಖ್ಯೆ 15 ರಿಂದ 570ಕ್ಕೆ ಹೆಚ್ಚಿಸಲಾಗಿದೆ ಎಂದರು.

    ಆಮ್ಲಜನಕ ಪೂರೈಕೆಗಾಗಿ ಮೂರಂಶಗಳ ಕಾರ್ಯತಂತ್ರ: ರಾಜ್ಯದಲ್ಲಿ ಹೆಚ್ಚುತ್ತಿರುವ ಆಮ್ಲಜನಕದ ಬೇಡಿಕೆ ಸರಿದೂಗಿಸಲು 3 ಅಂಶಗಳ ಕಾರ್ಯತಂತ್ರ ರೂಪಿಸಿದೆ. ಅದರಂತೆ ಲಿಕ್ವಿಡ್ ಆಕ್ಸಿಜನ್ ಪೂರೈಕೆ ಹೆಚ್ಚಳ, ಆಕ್ಸಿಜನ್ ಜನರೇಟರುಗಳ ಮೂಲಕ ಸ್ಥಳೀಯವಾಗಿ ಆಮ್ಲಜನಕ ಉತ್ಪಾದನೆ ಹೆಚ್ಚಳ ಹಾಗೂ ಆಕ್ಸಿಜನ್ ಕಾನ್ಸಂಟ್ರೇಟರುಗಳು ಹಾಗೂ ಸಿಲಿಂಡರುಗಳನ್ನು ಹೆಚ್ಚಾಗಿ ಖರೀದಿಸುವ ಮೂಲಕ ಆಮ್ಲಜನಕ ಕೊರತೆ ನೀಗಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

    ಇದನ್ನೂ ಓದಿ: ಸೋಂಕಿತ ಹಿಂದು ವೃದ್ಧೆಯ ಶವಸಂಸ್ಕಾರಕ್ಕೆ ಹಿಂಜರಿದ ಸಂಬಂಧಿಕರು; ಕೊನೆಗೆ ಮುಸ್ಲಿಂ ಯುವಕರಿಂದ ಅಂತಿಮಸಂಸ್ಕಾರ

    2 ಕೋಟಿ ಡೋಸ್ ಲಸಿಕೆಗಾಗಿ ಜಾಗತಿಕ ಟೆಂಡರು: ಕೇಂದ್ರ ಸರ್ಕಾರ ಈ ವರೆಗೆ 1.10 ಕೋಟಿ ಡೋಸ್‍ ಲಸಿಕೆಗಳನ್ನು ಒದಗಿಸಿದ್ದು, ಅದರಲ್ಲಿ 99.5 ಲಕ್ಷ ಕೋವಿಶೀಲ್ಡ್, 10.9 ಲಕ್ಷ ಕೋವ್ಯಾಕ್ಸಿನ್. ರಾಜ್ಯ ಸರ್ಕಾರ 18ರಿಂದ 44 ವರ್ಷದೊಳಗಿನವರಿಗೆ ಲಸಿಕೆ ನೀಡಲು 3 ಕೋಟಿ ಡೋಸ್ ಲಸಿಕೆಗಳ ಖರೀದಿಗೆ ಆದೇಶ ನೀಡಿದೆ. ಅದರಲ್ಲಿ 2 ಕೋಟಿ ಡೋಸ್ ಕೋವಿಶೀಲ್ಡ್ ಹಾಗೂ 1 ಕೋಟಿ ಡೋಸ್ ಕೊವ್ಯಾಕ್ಸಿನ್ ಸೇರಿದೆ. ಅಲ್ಲದೆ ಹೆಚ್ಚುವರಿಯಾಗಿ 2 ಕೋಟಿ ಡೋಸ್ ಇಂಜೆಕ್ಷನ್ ಸರಬರಾಜು ಮಾಡಲು ಜಾಗತಿಕ ಟೆಂಡರು ಕರೆಯಲಾಗಿದೆ ಎಂದು ಸಿಎಂ ಹೇಳಿದರು.

    ರಾಜ್ಯದಲ್ಲಿ ಕೋವಿಡ್ 19ರ ಸಂಭವನೀಯ ಮೂರನೇ ಅಲೆಯನ್ನು ಎದುರಿಸಲು ಸಿದ್ಧತೆಗಾಗಿ ನಾರಾಯಣ ಹೆಲ್ತ್​ ಛೇರ್‍ಮನ್ ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಲಾಗುವುದು. ಅಲ್ಲದೆ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಮೈಕ್ರೋ ಬಯಾಲಜಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೊ. ಗಗನ್‍ದೀಪ್ ಕಾಂಗ್ ಅವರನ್ನು ರಾಜ್ಯದ ವ್ಯಾಕ್ಸಿನೇಷನ್ ಕಾರ್ಯತಂತ್ರದ ಸಲಹೆಗಾರರಾಗಿ ರಾಜ್ಯ ಸರ್ಕಾರವು ನೇಮಿಸುತ್ತಿದೆ. ಇವರು ವ್ಯಾಕ್ಸಿನ್‍ಗಳ ಸಂಶೋಧನೆ ಮತ್ತು ಅವುಗಳ ಬಳಕೆ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ ರಚಿಸಿರುವ ಸಲಹಾ ಸಮಿತಿಗಳ ಸದಸ್ಯರಾಗಿರುತ್ತಾರೆ ಎಂದು ಬಿಎಸ್​ವೈ ತಿಳಿಸಿದರು.

    ವೈದ್ಯರೇ ಕರೊನಾಗೆ ಬಲಿ; ಆಸ್ಪತ್ರೆಗೆ ಬರಲು ಹಿಂಜರಿಯುತ್ತಿರುವ ಸಾರ್ವಜನಿಕರು!

    ಸೋಂಕಿತ ತಾಯಿ ತೀರಿಹೋದ ಮೂರೇ ದಿನಕ್ಕೆ ಅಣ್ಣ-ತಮ್ಮನೂ ಕರೊನಾಗೆ ಬಲಿ; ಅಮ್ಮಂದಿರ ದಿನವೇ ಇಬ್ಬರೂ ಏಕಕಾಲಕ್ಕೇ ನಿಧನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts