ಬಕ್ರೀದ್ ದಿನ ರಸ್ತೆಯಲ್ಲಿ ನಮಾಜ್ ಮಾಡುವಂತಿಲ್ಲ: ನಿಷೇಧ ಹೇರಿದ ಯೋಗಿ ಸರ್ಕಾರ!

namaj
Published on

ಲಖನೌ: ನಿಗದಿತ ಸ್ಥಳದಲ್ಲಿ ಮಾತ್ರ ನಮಾಜ್ ನಡೆಸಬೇಕು. ರಸ್ತೆಗಳನ್ನು ಬಂದ್​ ಮಾಡಿ ಪ್ರಾರ್ಥನೆ ಮಾಡಬಾರದು. ನಂಬಿಕೆಯನ್ನು ಗೌರವಿಸಿ ಆದರೆ ಯಾವುದೇ ಹೊಸ ಸಂಪ್ರದಾಯವನ್ನು ಪ್ರೋತ್ಸಾಹಿಸಬೇಡಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮುಂದಿನ ಕೆಲವು ದಿನಗಳಲ್ಲಿ ಬರುವ ಹಬ್ಬಗಳ ಹಿನ್ನೆಲೆಯಲ್ಲಿ ಯಾವುದೇ ಅವ್ಯವಸ್ಥೆ ಆಗದಂತೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿದರು.

ಜೂನ್ 16 ರಂದು ಗಂಗಾ ದಸರಾ, ಜೂ.17 ರಂದು ಬಕ್ರೀದ್, ಜೂ.18 ರಂದು ಜ್ಯೇಷ್ಠ ಮಾಸದ ಮಂಗಲೋತ್ಸವ ಮತ್ತು ಜೂ. 21 ರಂದು ಅಂತರಾಷ್ಟ್ರೀಯ ಯೋಗ ದಿನವನ್ನು ಆಯೋಜಿಸಲಾಗುವುದು. ಜುಲೈ ತಿಂಗಳಿನಲ್ಲಿ ಮೊಹರಂ ಮತ್ತು ಕನ್ವರ್ ಯಾತ್ರೆಯಂತಹ ಕಾರ್ಯಕ್ರಮಗಳಿವೆ. ಈ ಎಲ್ಲಾ ಹಬ್ಬಗಳ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕಿದೆ. ಅಧಿಕಾರಿಗಳು 24×7 ಸಕ್ರಿಯ ಮೋಡ್‌ನಲ್ಲಿರಬೇಕು ಎಂದು ಸಿಎಂ ಆದಿತ್ಯನಾಥ್ ಹೇಳಿದರು.

ಬಕ್ರೀದ್ ದಿನದಂದು ಬಲಿ ನೀಡುವ ಸ್ಥಳವನ್ನು ಮೊದಲೇ ಗುರುತಿಸಬೇಕು. ಇದನ್ನು ಬಿಟ್ಟರೆ ಬೇರೆಲ್ಲೂ ಬಲಿಯಾಗಬಾರದು. ವಿವಾದಿತ/ಸೂಕ್ಷ್ಮ ಸ್ಥಳಗಳಲ್ಲಿ ಬಲಿಯಾಗಬಾರದು. ಪ್ರತಿಯೊಂದು ಸಂದರ್ಭದಲ್ಲೂ, ಯಾವುದೇ ನಿಷೇಧಿತ ಪ್ರಾಣಿಯನ್ನು ಎಲ್ಲಿಯೂ ಬಲಿ ನೀಡುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಪ್ರತಿ ಜಿಲ್ಲೆಯಲ್ಲಿ ಬಲಿ ನಂತರ ತ್ಯಾಜ್ಯ ವಿಲೇವಾರಿಗೆ ವ್ಯವಸ್ಥಿತ ಕ್ರಿಯಾ ಯೋಜನೆ ಆಗಬೇಕು ಎಂದು ಸಿಎಂ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅಷ್ಟೇ ಅಲ್ಲ, ನಿಗದಿತ ಸ್ಥಳದಲ್ಲಿ ಮಾತ್ರ ನಮಾಜ್ ನಡೆಸಬೇಕು. ರಸ್ತೆಗಳನ್ನು ತಡೆದು ನಮಾಜ್ ನಡೆಸಬಾರದು. ಯಾರಾದರೂ ಕಾನೂನನ್ನು ಕೈಗೆ ತೆಗೆದುಕೊಳ್ಳಲು ಪ್ರಯತ್ನಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net