

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅವರ ಆಪ್ತ ಪವಿತ್ರ ಗೌಡ ಸೇರಿದಂತೆ ಪೊಲೀಸರು 19 ಮಂದಿ ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ತೀವ್ರಗೊಂಡಂತೆ ಹೊಸ ವಿಚಾರಗಳು ಬೆಳಕಿಗೆ ಬರುತ್ತಿದ್ದು, ಪ್ರಕರಣ ಸಂಬಂಧಿಸಿದಂತೆ ಸ್ಫೋಟಕ ವಿಚಾರ ಒಂದು ಬೆಳಕಿಗೆ ಬಂದಿದೆ.
ನಟ ದರ್ಶನ್ ಆಪ್ತೆ ಪವಿತ್ರಾ ಗೌಡಗೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮೆಸ್ಸೇಜ್ ಮಾಡಿದ್ದ ಎಂಬ ಕಾರಣಕ್ಕೆ ಆತನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ದೂರಲಾಗಿದೆ. ಇತ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ವಿಚಾರ ಒಂದು ಬೆಳಕಿಗೆ ಬಂದಿದ್ದು, ರೇಣುಕಸ್ವಾಮಿಗೆ ಮೆಸ್ಸೇಜ್ಗೆ ಪ್ರತಿಕ್ರಿಯಿಸಿದ್ದು, ಪವಿತ್ರಾ ಗೌಡ ಅಲ್ಲಾ ಮನೆ ಕೆಲಸದವ ಪವನ್ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಜೂನ್ 16ರಂದು ಪೊಲೀಸರು ರೇಣುಕಸ್ವಾಮಿ ಕೊಲೆ ಪ್ರಕರಣದ ಎ3 ಆರೋಪಿ ಪವನ್ ಹಾಗೂ ಎ1 ಆರೋಪಿ ಪವಿತ್ರಾಗೌಡನನ್ನು ಕೆರೆದುಕೊಂಡು ಹೋಗಿ ಅವರ ಮನೆಯಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಎ3 ಆರೋಪಿ ಪವನ್ ಪವಿತ್ರಾಗೌಡ ಅವರ ಮನೆಯಲ್ಲಿ ಕೆಲಸದವನಾಗಿದ್ದು, ಅಲ್ಲಿನ ನಾಯಿಗಳನ್ನು ನೋಡಿಕೊಳ್ಳುತ್ತಿದ್ದ. ಆದ್ದರಿಂದ ಈತನಿಗೆ ಗ್ರೌಂಡ್ ಫ್ಲೋರ್‌ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು ಎನ್ನುವ ಮಾಹಿತಿ ತನಿಖೆ ವೇಳೆ ಬಹಿರಂಗವಾಗಿದೆ.
ಕೊಲೆಯಾದ ರೇಣುಕಸ್ವಾಮಿ ಫೆಬ್ರವರಿಯಲ್ಲಿ ಮೊದಲ ಬಾರಿಗೆ ಪವಿತ್ರಾ ಗೌಡಗೆ ಸಾಮಾಜಿಕ ಜಾಲತಾಣದಲ್ಲಿ ಮೆಸ್ಸೇಜ್ ಮಾಡಿದ್ದ ಎಂದು ತಿಳಿದು ಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಪವಿತ್ರಾಗೆ ರೇಣುಕಸ್ವಾಮಿಗೆ ಬೈದಿದ್ದ ಎಂದು ವರದಿಯಾಗಿದೆ. ಬಳಿಕ ಈ ವಿಚಾರವನ್ನು ಪವಿತ್ರಾ ದರ್ಶನ್ ಮನೆಯಲ್ಲಿ ಕೆಲಸಕ್ಕಿದ್ದ ಪವನ್ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಉಪಾಯ ಮಾಡಿದ ಆರೋಪಿ ಪವನ್ ಪವಿತ್ರಾ ಗೌಡಳ ಬದಲಾಗಿ ತಾನು ಚಾಟ್ ಮಾಡಲು ಶುರು ಮಾಡಿದ್ದಾನೆ.
ಇದಾದ ಬಳಿಕ ಆರೋಪಿ ರೇಣುಕಸ್ವಾಮಿ ನಂಬರ್ ಪಡೆದು ವಾಟ್ಸ್ಆರ್ಯಪ್ನಲ್ಲಿ ಚಾಟ್ ಮಾಡಲು ಶುರು ಮಾಡಿದ್ದು, ಹುಡುಗಿಯಂತೆ ಮಾತನಾಡಿ ಆತನ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾನೆ. ಚಾಟಿಂಗ್ ವೇಳೆ ರೇಣುಕಸ್ವಾಮಿ ಎಲ್ಲಾ ಮಾಹಿತಿ ನೀಡಿದ್ದ ಎಂದು ವರದಿಯಾಗಿದೆ. ಬಳಿಕ ಈ ವಿಚಾರವನ್ನು ದರ್ಶನ್ ಗಮನಕ್ಕೆ ತಂದ ಆರೋಪಿಗಳು ಚಿತ್ರದುರ್ಗ ಜಿಲ್ಲಾ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಗಮನಕ್ಕೆ ತಂದಿದ್ದು, ಬೆಂಗಳೂರಿಗೆ ಕರೆ ತರುವಂತೆ ಸೂಚಿಸಿದ್ದಾರೆ. ಅದರಂತೆ ರೇಣುಕಸ್ವಾಮಿಯನ್ನು ಪಟ್ಟಣಗೆರೆ ಶೆಡ್ಗೆ ಕರೆದುಕೊಂಡು ಬಂದ ಮತ್ತೋರ್ವ ಆರೋಪಿ ರಾಘವೇಂದ್ರ ಸಂತ್ರಸ್ತನ ಹತ್ಯೆಗೆ ಸಹಕರಿಸಿದ್ದಾನೆ ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.