ಬೆಂಗಳೂರು: ವ್ಯಾಸಂಗಕ್ಕಾಗಿ ಕೊಡಗಿನಿಂದ ನಗರಕ್ಕೆ ಬಂದು ನಾಪತ್ತೆಯಾಗಿದ್ದ ಬಾಲಕಿಯನ್ನು ಬರೋಬ್ಬರಿ 250 ಸಿಸಿ ಕ್ಯಾಮರಾ ಪರಿಶೀಲಿಸಿ ಪತ್ತೆ ಹಚ್ಚಿರುವ ಬನಶಂಕರಿ ಪೊಲೀಸರು ಕುಟುಂಬ ಸದಸ್ಯರಿಗೆ ಒಪ್ಪಿಸಿದ್ದಾರೆ. ತ್ಯಾಗರಾಜನಗರದ ನಿವಾಸಿ 15 ವರ್ಷದ ಬಾಲಕಿ ನಾಪತ್ತೆಯಾದವಳು.
ಕೊಡಗಿನ ವಿರಾಜಪೇಟೆಯ ಅಯ್ಯಪ್ಪ ಕಳೆದ 9 ವರ್ಷಗಳಿಂದ ಬೆಂಗಳೂರಿನ ತ್ಯಾಗರಾಜನಗರದಲ್ಲಿ ವಾಸಿಸುತ್ತಿದ್ದಾರೆ. ಕೊಡಗಿನಲ್ಲಿರುವ ತಮ್ಮ ಮನೆಯಲ್ಲಿ ಕೆಲಸ ಮಾಡುವ ನೌಕರನ ಮೊಮ್ಮಗಳು 15 ವರ್ಷದ ಬಾಲಕಿಯನ್ನು ಓದಿಸಲು ಅಯ್ಯಪ್ಪ ಬೆಂಗಳೂರಿಗೆ ಕರೆ ತಂದಿದ್ದರು. ಬಾಲಕಿ ಯಡಿಯೂರಿನ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ.
ಇದನ್ನೂ ಓದಿ: ಪತಿಯನ್ನು ಬಿಟ್ಟು ಹೊರಟಿದ್ದ ಪತ್ನಿಯನ್ನು ಮತ್ತೆ ಮನೆಗೆ ಸೇರಿಸಿದ ಚಾರ್ಜರ್; ಮನೆ ಬಿಡುವಂತೆ ಮಾಡಿದ್ದು ಗಂಡನ ಫೋನಲ್ಲಿದ್ದ ಆ ಆಟ!
ಆ.21ರಂದು ಮಧ್ಯಾಹ್ನ ಬಾಲಕಿ ಮನೆಯಿಂದ ಏಕಾಏಕಿ ಹೊರ ಹೋಗಿದ್ದಳು. ನಂತರ ಊರಿಗೂ ತೆರಳದೆ, ಮನೆಗೂ ಹಿಂದಿರುಗದೆ ನಾಪತ್ತೆಯಾಗಿದ್ದಳು. ಅಯ್ಯಪ್ಪ ಈ ಬಗ್ಗೆ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶೇಷ ತಂಡ ರಚಿಸಿ ನಾಪತ್ತೆಯಾದ ಬಾಲಕಿ ಪತ್ತೆ ಕಾರ್ಯದಲ್ಲಿ ತೊಡಗಿದ್ದರು. ಬಸವನಗುಡಿ, ಚಾಮರಾಜಪೇಟೆ, ಮೈಸೂರು ರಸ್ತೆ, ಕೆಂಗೇರಿಯಲ್ಲಿ ರಸ್ತೆ ಬದಿಯಲ್ಲಿರುವ ಅಂಗಡಿಗಳಲ್ಲಿ ಅಳವಡಿಸಿದ್ದ 250ಕ್ಕೂ ಅಧಿಕ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ್ದರು.
ಕೊಮ್ಮಘಟ್ಟ ರಸ್ತೆಯಲ್ಲಿ ಪರಿಶೀಲಿಸಿದ್ದ ಸಿಸಿ ಕ್ಯಾಮರಾವೊಂದರಲ್ಲಿ ಬಾಲಕಿ ನಡೆದುಕೊಂಡು ಹೋಗುವುದು ಸೆರೆಯಾಗಿತ್ತು. ಬಳಿಕ ಕುಂಬಳಗೋಡು ಹಾಗೂ ತಾವರೆಕೆರೆ ರಸ್ತೆಯ ಸುತ್ತ-ಮುತ್ತ ಬಾಲಕಿಯ ಭಾವಚಿತ್ರ ಹಿಡಿದು ಸ್ಥಳೀಯರ ಬಳಿ ವಿಚಾರಿಸಿದಾಗ ಕೊಮ್ಮಘಟ್ಟ ಮುಖ್ಯರಸ್ತೆಯ ಕಟ್ಟಡ ಕಾರ್ಮಿಕ ಮಹಿಳೆಯೊಬ್ಬರ ಮನೆಯಲ್ಲಿ ಬಾಲಕಿ ಪತ್ತೆಯಾಗಿದ್ದಳು.
ಇದನ್ನೂ ಓದಿ: ‘ರಾಣಿ’ಯನ್ನು ಕೊಂದು ಹೂತಿಟ್ಟ ಭೂಪ; ದೇವಸ್ಥಾನದಲ್ಲೂ ಕದ್ದು ಸಿಕ್ಕಿಬಿದ್ದ; ಇಂದು ಆಕೆಯ ಶವ ಹೊರತೆಗೆದ ಪೊಲೀಸರು..
ಬಾಲಕಿಯನ್ನು ಈ ಬಗ್ಗೆ ವಿಚಾರಿಸಿದಾಗ, ಆಕೆ ತನ್ನ ಸ್ವಂತ ಊರಾದ ಕೊಡಗಿನಲ್ಲಿರುವ ಅಜ್ಜಿ-ತಾತನನ್ನು ಕಾಣುವ ಉದ್ದೇಶದಿಂದ ವಿರಾಜಪೇಟೆಗೆ ನಡೆದುಕೊಂಡು ಹೋಗಲು ನಿರ್ಧರಿಸಿರುವುದಾಗಿ ತಿಳಿಸಿದ್ದಾಳೆ. ಅದರಂತೆ ತಾನು ವಾಸಿಸುತ್ತಿದ್ದ ಮನೆಯಲ್ಲಿ ಯಾರಿಗೂ ಹೇಳದೆ ಮೈಸೂರು ರಸ್ತೆಯಲ್ಲಿ ಕೊಮ್ಮಘಟ್ಟ ರಸ್ತೆಯವರೆಗೂ 30 ಕಿ.ಮೀ. ನಡೆದುಕೊಂಡು ಹೋಗಿದ್ದು, ನಂತರ ಕಾಲು ನೋವು ಬಂದು ಕಟ್ಟಡ ಕಾರ್ಮಿಕ ಮಹಿಳೆಯ ಬಳಿ ತನಗೆ ಪಾಲಕರಿಲ್ಲ. ಸಂಬಂಧಿಕರು ಇಲ್ಲಿಗೆ ಬಂದು ನನ್ನನ್ನು ಕರೆದುಕೊಂಡು ಹೋಗುತ್ತಾರೆ ಎಂದು ಹೇಳಿದ್ದಳು. ಕಟ್ಟಡ ನಿರ್ಮಾಣ ಮಾಡುವ ಮಹಿಳೆಗೆ ಬಾಲಕಿ ಮೇಲೆ ಕನಿಕರ ಹುಟ್ಟಿ 10 ದಿನಗಳ ಕಾಲ ಆಶ್ರಯ ನೀಡಿದ್ದಳು ಎಂದು ತಿಳಿದು ಬಂದಿದೆ.