ಮೈಸೂರು: ಗೋಡೆ ಕುಸಿದು ಗೃಹಿಣಿ ಸಾವಿಗೀಡಾದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಪತಿಯೇ ಕೊಲೆ ಮಾಡಿ ಗೋಡೆ ಕತೆ ಕಟ್ಟಿರುವುದು ಮಂಗಳವಾರ ಬೆಳಕಿಗೆ ಬಂದಿದೆ.
ಸಲ್ಮಾ(26) ಮೃತಪಟ್ಟ ಗೃಹಿಣಿ. ಪತಿ ನಯೀಂ ಪಾಷಾನಿಂದಲೇ ಪತ್ನಿ ಸಲ್ಮಾ ಕೊಲೆಯಾಗಿದೆ ಎನ್ನಲಾಗಿದೆ. ಎಚ್.ಡಿ.ಕೋಟೆ ತಾಲ್ಲೂಕಿನ ಹೊನ್ನಮ್ಮನ ಕಟ್ಟೆ ಗ್ರಾಮದಲ್ಲಿ ಡಿಸೆಂಬರ್ 13 ರಂದು ಘಟನೆ ನಡೆದಿತ್ತು.
ಪತ್ನಿ ಕೊಲೆ ಮಾಡಿದ ಬಳಿಕ ಪೊಲೀಸ್ ಠಾಣೆಗೆ ಹೋಗಿದ್ದ ನಯೀಂ ಪಾಷಾ ಮನೆಯ ಗೋಡೆ ಕುಸಿದು ಪತ್ನಿ ಸಾವನ್ನಪ್ಪಿದ್ದಾಳೆ. ಮರಣೋತ್ತರ ಪರೀಕ್ಷೆ ನಡೆಸುವುದು ಬೇಡ ಮತ್ತು ನಾನು ಸಹ ದೂರು ಕೊಡುವುದಿಲ್ಲ ಎಂದಿದ್ದ. ಆದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಇದಾದ ಬಳಿಕ ಪೊಲೀಸ್ ಠಾಣೆಗೆ ಅನಾಮಧೇಯನೊಬ್ಬನ ಕರೆ ಬಂದಿತ್ತು. ನಯೀಂ ಪಾಷನೇ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಅನಾಮಧೇಯ ವ್ಯಕ್ತಿ ದೂರು ನೀಡಿದ್ದ. ಕರೆಯ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರ ಮುಂದೆ ಎಲ್ಲವು ಬಯಲಾಗಿದೆ. ಪತ್ನಿಯ ನಡತೆ ಬಗ್ಗೆ ಅನುಮಾನಗೊಂಡು ಕೊಲೆ ಮಾಡಿರುವುದಾಗಿ ಸ್ವತಃ ಪಾಷಾನೇ ಒಪ್ಪಿಕೊಂಡಿದ್ದಾನೆ.
ಪತ್ನಿಯ ತಲೆಯನ್ನು ಕಲ್ಲು ಚಪ್ಪಡಿಗೆ ಹೊಡೆಸಿ ಕೊಲೆ ಮಾಡಿದ ಬಳಿಕ ಆಕೆಯ ಮೇಲೆ ಗೋಡೆ ಬೀಳಿಸಿದ್ದಾಗಿ ಪಾಷಾ ಒಪ್ಪಿಕೊಂಡಿದ್ದು, ಸದ್ಯ ಪಾಷಾನನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)