

ಬೆಂಗಳೂರು: ಕೆಲವು ದಿನಗಳ ಹಿಂದಷ್ಟೇ ಹೊಂಬಾಳೆ ಫಿಲಂಸ್ ಸಂಸ್ಥೆಯು ಸದ್ಯದಲ್ಲೇ ಹೊಸ ಚಿತ್ರದ ಬಗ್ಗೆ ಪ್ರಕಟಣೆ ಹೊರಬೀಳಲಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಿತ್ತು. ಎರಡೇ ದಿನಗಳ ಅಂತರದಲ್ಲಿ ಪ್ರಭಾಸ್ ಅಭಿನಯದ 'ಸಲಾರ್' ಎಂಬ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ಹೇಳಿತು.
ಈಗ ಹೊಂಬಾಳೆ ಫಿಲಂಸ್ನಿಂದ ಹೊಸದೊಂದು ಪ್ರಕಟಣೆ ಹೊರಬಿದ್ದಿದೆ. ಡಿಸೆಂಬರ್ 17ರಂದು, ಬೆಳಿಗ್ಗೆ 11.59ಕ್ಕೆ ಸಂಸ್ಥೆಯ ನಿರ್ಮಾಣದ ಎಂಟನೇ ಚಿತ್ರವನ್ನು ಘೋಷಿಸುವುದಾಗಿ ಹೇಳಲಾಗಿದೆ. ಆ ಚಿತ್ರದಲ್ಲಿ ಯಾರು ನಟಿಸುತ್ತಾರೆ? ಯಾರು ನಿರ್ದೇಶಿಸುತ್ತಾರೆ ಎಂಬ ವಿಷಯಗಳೆಲ್ಲಾ ಗುರುವಾರ ಗೊತ್ತಾಗಲಿದೆ.
ಈ ಪ್ರಕಟಣೆ ಹೊರಬೀಳುತ್ತಿದ್ದಂತೆಯೇ, ಇದು ಯಾವ ಚಿತ್ರ ಮತ್ತು ಯಾರು ಅಭಿನಯಿಸಬಹುದು ಎಂಬ ಲೆಕ್ಕಾಚಾರಗಳು ಶುರುವಾಗಿವೆ. ಮೂಲಗಳ ಪ್ರಕಾರ, ಈ ಚಿತ್ರದಲ್ಲಿ ಶ್ರೀಮುರಳಿ ಅಭಿನಯಿಸುತ್ತಿದ್ದಾರಂತೆ. ಆದರೆ, ಸದ್ಯಕ್ಕೆ ಈ ವಿಷಯವನ್ನು ಗೌಪ್ಯವಾಗಿಡಲಾಗಿದೆ ಎಂದು ಹೇಳಲಾಗುತ್ತಿದೆ. ಕಾರಣ, ಡಿಸೆಂಬರ್ 17ರ ಗುರುವಾರ ಮುರಳಿ ಅವರ ಹುಟ್ಟುಹಬ್ಬ. ಅದೇ ಸಂದರ್ಭದಲ್ಲಿ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಘೋಷಿಸುವ ಯೋಜನೆಯನ್ನು ಸಂಸ್ಥೆ ಹಾಕಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಇದು ಸುಳ್ಳುಸುದ್ದಿ ಎಂದು ಹೇಳುವುದು ಕಷ್ಟ. ಏಕೆಂದರೆ, ಶ್ರೀಮುರಳಿ ಅಭಿನಯದ 'ಮದಗಜ' ಚಿತ್ರದ ಚಿತ್ರೀಕರಣ ಈಗಾಗಲೇ ಶೇ 60ರಷ್ಟು ಮುಗಿದಿದ್ದು, ಫೆಬ್ರವರಿ ಹೊತ್ತಿಗೆ ಸಂಪೂರ್ಣವಾಗಲಿದೆ ಎಂದು ಹೇಳಲಾಗುತ್ತಿದೆ. ಆ ನಂತರ ಮುರಳಿ ಅಭಿನಯದ ಯಾವ ಚಿತ್ರವೂ ಘೋಷಣೆಯಾಗಿಲ್ಲ. ಈಗ ಹೊಂಬಾಳೆ ಫಿಲಂಸ್ಗಾಗಿ ಮುರಳಿ ಚಿತ್ರ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೆ.
ಹೊಂಬಾಳೆ ಫಿಲಂಸ್ ನಿರ್ಮಾಣದ ಎಂಟನೇ ಚಿತ್ರದಲ್ಲಿ ಶ್ರೀಮುರಳಿ ನಟಿಸುತ್ತಾರೋ, ಇಲ್ಲವೋ ಎಂಬುದನ್ನು ಗುರುವಾರದವರೆಗೂ ಕಾದು ನೋಡಬೇಕಿದೆ.