ಜಿಲ್ಲೆ

'ಮೈತ್ರಿ ಸರ್ಕಾರ ಪತನ ಆಗಿದ್ದೇ ಕೊನೆ ಅಂದಿನಿಂದಲೂ ನಾನು, ಕುಮಾರಸ್ವಾಮಿ ಮಾತನಾಡಿಲ್ಲ'

ರಮೇಶ್​ ಕುಮಾರ್​​ ಬಿ ಎಡಮೋಳೆ

ಮೈಸೂರು: ಮೈತ್ರಿ ಸರ್ಕಾರ ಪತನ ಆಗಿದ್ದೇ ಕೊನೆ, ಅಂದಿನಿಂದಲೂ ನಾನು ಮತ್ತು ಕುಮಾರಸ್ವಾಮಿ ಮಾತನಾಡಿಲ್ಲ ಎಂದು ಜೆಡಿಎಸ್​ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.

ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುಮಾರಸ್ವಾಮಿ ಅವರಿಗೆ ಮೊದಲಿನಿಂದಲೂ ನನ್ನ ಬಗ್ಗೆ ಬೇರೆ ರೀತಿಯ ಅಭಿಪ್ರಾಯ ಇದೆ. ಧರ್ಮಸಿಂಗ್ ಸಂಪುಟದಲ್ಲೂ ನನ್ನನ್ನು ಮಂತ್ರಿ ಮಾಡುತ್ತೇನೆ ಅಂತ ಹೇಳಿದ್ದರು. ಯಡಿಯೂರಪ್ಪ ಮೊದಲ ಬಾರಿಗೆ ಸಿಎಂ ಆಗಿದ್ದಾಗಲೂ ಮಂತ್ರಿ ಮಾಡುತ್ತೇನೆ ಎಂದಿದ್ದರು. ಆದರೆ ಮಾಡಲಿಲ್ಲ ಎಂದು ಹಳೆಯ ಅಸಮಾಧಾನ ಹೊರಹಾಕಿದರು.

ಕಳೆದ ಮೈತ್ರಿ ಸರ್ಕಾರದ ಸಂಪುಟ ರಚನೆ ಮಾಡುವಾಗಲೂ ದೇವೇಗೌಡರು, ಕುಮಾರಸ್ವಾಮಿ ಹಾಗೂ ಎಚ್.ಡಿ.ರೇವಣ್ಣ ನನ್ನನ್ನು ಇನ್‌ಫೋಸಿಸ್ ಗೆಸ್ಟ್​ಹೌಸ್‌ಗೆ ಕರೆಸಿಕೊಂಡು ಸಹಕಾರ ಖಾತೆ ಕೊಡುವುದಾಗಿ ಹೇಳಿದ್ದರು. ಆದರೆ, ಬಂಡೆಪ್ಪ ಕಾಶೆಂಪೂರ್ ಒಪ್ಪುತ್ತಿಲ್ಲ ಎಂದು ಅಬಕಾರಿ ಕೊಡುತ್ತೇವೆಂದರು. ಅದನ್ನೂ ಕೊಡಲಿಲ್ಲ ಎಂದರು.

ಕೊನೆಗೆ ಬೇರೊಬ್ಬರು ನನಗೆ ಕರೆ ಮಾಡಿ, ನಿಮ್ಮನ್ನು ಸಂಪುಟದಿಂದ ಹೊರಗೆ ಹಾಕಲು ಪ್ಲ್ಯಾನ್ ಮಾಡಿದ್ದಾರೆ, ಮೊದಲು ಹೋಗಿ ಖಾತೆ ಸ್ವೀಕರಿಸಿ ಅಂದರು. ಅನಿವಾರ್ಯವಾಗಿ ಉನ್ನತ ಶಿಕ್ಷಣ ಖಾತೆ ಪಡೆದುಕೊಂಡೆ. ಯಾವ್ಯಾವ ಕಾಲದಲ್ಲಿ ಏನೇನು ಆಗಿದೆ ಅನ್ನೋದು ನನಗೆ ಚನ್ನಾಗಿ ಗೊತ್ತು. ಅದೆಲ್ಲವನ್ನೂ ನಾನು ಮನಸ್ಸಿನೊಳಗೆ ಇಟ್ಟುಕೊಂಡು ಸುಮ್ಮನಿದ್ದೇನೆಂದು ಹೇಳಿದರು. (ದಿಗ್ವಿಜಯ ನ್ಯೂಸ್​)