More

    WEB EXCLUSIVE | ಆದಿವಾಸಿಗಳಿಗೆ ಉರುಳಾದ ಪೋಕ್ಸೋ ಕಾಯ್ದೆ!

    WEB EXCLUSIVE | ಆದಿವಾಸಿಗಳಿಗೆ ಉರುಳಾದ ಪೋಕ್ಸೋ ಕಾಯ್ದೆ!| ಶಿವು ಹುಣಸೂರು
    ದೆಹಲಿಯ ನಿರ್ಭಯ ಅತ್ಯಾಚಾರ ಪ್ರಕರಣದ ನಂತರ 2012ರಲ್ಲಿ ಜಾರಿಗೆ ಬಂದ ಪೋಕ್ಸೋ ಕಾಯ್ದೆಯು ಹೆಣ್ಣು ಮಕ್ಕಳ ಪಾಲಿಗೆ ರಕ್ಷಾ ಕವಚವಾಗಿದೆ. ಆದರೆ ಆದಿವಾಸಿ ಸಮುದಾಯದ ಯುವಕ-ಯುವತಿಯರಿಗೆ ಅರಿವಿನ ಕೊರತೆಯಿಂದ ಈ ಕಾಯ್ದೆಯೇ ಉರುಳಾಗಿ ಪರಿಣಿಮಿಸಿದೆ!

    ಮೈಸೂರು ಜಿಲ್ಲೆಯ ಹುಣಸೂರು, ಎಚ್.ಡಿ.ಕೋಟೆ ಮತ್ತು ಪಿರಿಯಾಪಟ್ಟಣ ತಾಲೂಕುಗಳ ವ್ಯಾಪ್ತಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿಗೊಂಡ ಆದಿವಾಸಿ ಗಿರಿಜನ ಸಮುದಾಯದ ಜನರಿಗೆ ಪೋಕ್ಸೋ ಕಾಯ್ದೆ ಇದೆ ಎಂಬುದೇ ತಿಳಿದಿಲ್ಲ. ಕಾಯ್ದೆ ಏನನ್ನು ತಿಳಿಸುತ್ತಿದೆ ಎನ್ನುವುದರ ಬಗ್ಗೆಯೂ ಗೊತ್ತಿಲ್ಲ. ಪರಿಣಾಮ ಆದಿವಾಸಿ ಯುವಕರು ತಮ್ಮ ಸಾಂಪ್ರದಾಯಿಕ ಪದ್ಧತಿಯನ್ನು ಪಾಲಿಸಲು ಹೋಗಿ ಪೋಕ್ಸೋ ಕಾಯ್ದೆ ಉಲ್ಲಂಘನೆ ಆರೋಪದಡಿ ಜೈಲು ಪಾಲಾಗುತ್ತಿದ್ದಾರೆ.

    ಪೋಕ್ಸೋ ಕಾಯ್ದೆ ಉದ್ದೇಶ: ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸಲು 2012ರಲ್ಲಿ ಪೋಕ್ಸೋ ಕಾಯ್ದೆಯನ್ನು ಜಾರಿಗೆ ತರಲಾಯಿತು. 18 ವರ್ಷದ ಕೆಳಗಿನ ಎಲ್ಲ ವಯಸ್ಸಿನವರನ್ನು ಮಗು ಎಂದು ಕಾಯ್ದೆ ವ್ಯಾಖ್ಯಾನಿಸುತ್ತದೆ. ಆ ಮಗುವಿನ ದೈಹಿಕ, ಭಾವನಾತ್ಮಕ, ಬೌದ್ಧಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಕಾಯ್ದೆಯು ಪ್ರತಿ ಹಂತದಲ್ಲೂ ಆದ್ಯತೆ ನೀಡಿ ಖಾತ್ರಿಪಡಿಸುತ್ತದೆ.

    ಸಮಸ್ಯೆ ಏನು?: ದೇಶದಲ್ಲಿ ಹೆಣ್ಣು ಮಕ್ಕಳು 18 ವರ್ಷ ಮತ್ತು 19 ವರ್ಷ ತುಂಬಿದ ಗಂಡು ಮಕ್ಕಳನ್ನು ಪ್ರಾಪ್ತರು ಎನ್ನಲಾಗುತ್ತದೆ. ಈ ವಯೋಮಾನ ದಾಟಿದ ಮಕ್ಕಳಿಗೆ ಮದುವೆ ಮಾಡಬಹುದು. ಆದರೆ ಆದಿವಾಸಿಗಳಲ್ಲಿ ಹೆಣ್ಣು ಮಕ್ಕಳಿಗೆ 13-14 ವರ್ಷ ಮತ್ತು ಗಂಡು ಮಕ್ಕಳಿಗೆ 16-17 ವರ್ಷಕ್ಕೆ ಮದುವೆ ಮಾಡುವುದು ವಾಡಿಕೆ. ಇದಕ್ಕೆ ಕಾರಣ ಅವರು ಅನುಸರಿಸಿಕೊಂಡು ಬಂದಿರುವ ಸಂಪ್ರದಾಯ.

    ಆದಿವಾಸಿಗಳಲ್ಲಿ ಹೆಣ್ಣು ಮಕ್ಕಳು ಸಾಮಾನ್ಯವಾಗಿ 14 ವಯಸ್ಸಿಗೆ ಮೈನೆರೆಯುತ್ತಾರೆ. 16ನೇ ವಯಸ್ಸಿನಲ್ಲೇ ಕಾಡಿನಲ್ಲಿ ಬೇಟೆಯಾಡಿ ಪ್ರಾಣಿಗಳನ್ನು ತರುವ ವ್ಯಕ್ತಿಯನ್ನು ಪ್ರಾಯದ ಗಂಡಸು ಎಂದು ತೀರ್ಮಾನಿಸುತ್ತಾರೆ. ಆದಿವಾಸಿಗಳ ಪೈಕಿ ಜೇನುಕುರುಬರು, ಯರವರು, ಸೋಲಿಗ, ಬೆಟ್ಟಕುರುಬ ಸಮುದಾಯದಲ್ಲಿ ಅತಿಬೇಗ ಮೈನೆರೆಯುವ ಯುವಕರು, ಅಷ್ಟೇ ಬೇಗ ಮುದುಕರಾಗುವ ಪರಿಸ್ಥಿತಿ ಇದೆ. 55 ವರ್ಷಕ್ಕೆ ಮುಪ್ಪಾಗಿ ಮೃತರಾಗುತ್ತಿದ್ದಾರೆ.

    ಮದುವೆಯಾಗ ಬಯಸುವ ಯುವಕ-ಯುವತಿ ಜೋಡಿಗೆ ಯಜಮಾನರ ಕೈಯಿಂದ ವೀಳ್ಯೆದೆಲೆ -ಅಡಕೆ ಕೊಡಿಸಿ ಕೂಡಿ ಬಾಳಲು ತಿಳಿಸಿ ಊರಿನವರು ಕಾಡಿಗಟ್ಟುತ್ತಾರೆ. ಅಲ್ಲಿಂದ ಆ ಜೋಡಿ ಜೀವಂತವಾಗಿ ಒಂದಾಗಿ ಬಂದಲ್ಲಿ ಅವರು ಸತಿಪತಿಯಾಗಿ ಬದುಕಬಹುದು ಎನ್ನುವುದು ಅವರು ಅನುಸರಿಸಿಕೊಂಡು ಬಂದಿರುವ ಸಂಪ್ರದಾಯ.

    ಮುಳುವಾಗಿರುವ ಸಂಪ್ರದಾಯ: ಆದಿವಾಸಿಗಳು ಅನುಸರಿಸುತ್ತಿರುವ ಈ ಸಂಪ್ರದಾಯವೇ ಅವರಿಗೆ ಮುಳುವಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ 2 ವರ್ಷಗಳಲ್ಲಿ ಈ ರೀತಿಯಾಗಿ ಪೋಕ್ಸೋ ಕಾಯ್ದೆಯಡಿ ಬಂಧನಕ್ಕೊಳಗಾದವರ ಸಂಖ್ಯೆ 20 ದಾಟುತ್ತದೆ ಎನ್ನುತ್ತಾರೆ ಗಿರಿಜನ ಮುಖಂಡರು.

    ಹಿರಿಯರ ಅನುಮತಿ ಪಡೆದು ಮದುವೆಯಾದ ನಂತರ ಹೆಣ್ಣು ಗರ್ಭವತಿಯಾಗಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದಾಗ ವಯಸ್ಸು ಕೇಳಿ ಅವಳ ಪತಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿ ಜೈಲು ಪಾಲಾಗಿಸುತ್ತಾರೆ. ಹಿರಿಯರು ಮಾಡಿದ ತಪ್ಪಿಗೆ ಏನೂ ಆರಿಯದ ಎರಡು ಮುಗ್ಧ ಜೀವಗಳು ಶಿಕ್ಷೆ ಅನುಭವಿಸುವಂತಾಗಿದೆ ಎನ್ನುವುದು ಗಿರಿಜನರ ಅಭಿಪ್ರಾಯ.

    ಇಲಾಖೆಗಳು ವಿಫಲ: ಪೋಕ್ಸೋ ಅದ್ಭುತ ಕಾಯ್ದೆಯಾಗಿದ್ದು, ಇದರಲ್ಲಿ ಯಾವುದೇ ಬದಲಾವಣೆ ಅಗತ್ಯವಿಲ್ಲ. ಆದರೆ, ಇಲಾಖೆಗಳು ಆದಿವಾಸಿಗಳಲ್ಲಿ ಈ ಕುರಿತು ಅರಿವು ಮೂಡಿಸುವಲ್ಲಿ ವಿಫಲರಾಗಿರುವುದು ಎದ್ದು ಕಾಣುತ್ತಿದೆ. ಹೀಗಾಗಿ ಆದಿವಾಸಿಗಳಿಗೆ ಕಾಯ್ದೆ ಕುರಿತು ಸೂಕ್ತ ರೀತಿಯಲ್ಲಿ ಮನವರಿಕೆ ಮಾಡುವ ಅಗತ್ಯವಿದೆ ಎನ್ನುತ್ತಾರೆ ಗಿರಿಜನ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಎಂ.ಬಿ.ಪ್ರಭು.

    ಶಿಕ್ಷಣದಲ್ಲಿ ಮಾರ್ಪಾಟು: ಕೇರಳ ಮತ್ತು ತೆಲಂಗಾಣ ರಾಜ್ಯದ ಮಾದರಿಯಲ್ಲಿ ಕರ್ನಾಟಕದಲ್ಲೂ 1ನೇ ತರಗತಿಯಿಂದ ಪಿಯುಸಿವರೆಗೂ ಒಂದೇ ಕ್ಯಾಂಪಸ್​ನಲ್ಲಿ ಶಿಕ್ಷಣ ನೀಡುವ ವ್ಯವಸ್ಥೆ ಆಗಬೇಕು. ಗುಣಾತ್ಮಕ ಶಿಕ್ಷಣದೊಂದಿಗೆ ಅರಿವು ಮೂಡಿಸುವ ಶಿಕ್ಷಣ ಸಿಕ್ಕಲ್ಲಿ ಇಂತಹ ಅನಾಹುತಗಳನ್ನು ತಡೆಗಟ್ಟಲು ಸಾಧ್ಯವಿದೆ ಎನ್ನುತ್ತಾರೆ ರಾಜ್ಯ ಆದಿವಾಸಿ ಬುಡಕಟ್ಟು ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಶೈಲೇಂದ್ರ ಕುಮಾರ್.

    WEB EXCLUSIVE | ಆದಿವಾಸಿಗಳಿಗೆ ಉರುಳಾದ ಪೋಕ್ಸೋ ಕಾಯ್ದೆ!ಸರ್ಕಾರ ಈ ಜನರ ವಂಶಾವಳಿ, ಶರೀರ ಶಾಸ್ತ್ರ ಕುರಿತಾಗಿ ತಜ್ಞರಿಂದ ಅಧ್ಯಯನ ನಡೆಸಲಿ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಪೋಕ್ಸೋ ಕಾಯ್ದೆಯ ಬಗ್ಗೆ ಇನ್ನಷ್ಟು ಪರಿಣಾಮಕಾರಿಯಗಿ ಅರಿವು ಮೂಡಿಸುವ ಕಾರ್ಯ ಮಾಡಬೇಕು. 10 ವರ್ಷಗಳ ಕಾಲ ಪೋಕ್ಸೋ ಕಾಯ್ದೆಯಲ್ಲಿ ಆದಿವಾಸಿಗಳಿಗೆ ಸಡಿಲಗೊಳಿಸಲಿ.
    | ಡಾ.ಎಸ್.ಶ್ರೀಕಾಂತ್ ನಿರ್ದೇಶಕ, ಡೀಡ್ ಸಂಸ್ಥೆ, ಹುಣಸೂರು

    ಹಾಡಿಗಳಲ್ಲಿ ಆಯೋಜನೆಗೊಳ್ಳುವ ಪ್ರತಿಯೊಂದು ಕಾರ್ಯಕ್ರಮ ಇನ್ನಿತರ ಯೋಜನೆ ಜಾರಿ ಸಮಯದಲ್ಲಿ ಇಲಾಖೆ ವತಿಯಿಂದ ಬಾಲ್ಯ ವಿವಾಹ ತಡೆ ಮತ್ತು ಪೋಕ್ಸೋ ಕಾಯ್ದೆಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಆದಿವಾಸಿಗಳು ಈ ಕುರಿತು ಇಲಾಖೆಯೊಂದಿಗೆ ಕೈಜೋಡಿಸಿದಲ್ಲಿ ಅಮಾಯಕ ಯುವಕ-ಯುವತಿಯರು ಶಿಕ್ಷೆ ಅನುಭವಿಸುವುದು ತಪ್ಪುತ್ತದೆ.
    | ಪದ್ಮಾ ಜಿಲ್ಲಾ ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈಸೂರು

    WEB EXCLUSIVE | ಆದಿವಾಸಿಗಳಿಗೆ ಉರುಳಾದ ಪೋಕ್ಸೋ ಕಾಯ್ದೆ!ಪೋಕ್ಸೋ ಕಾಯ್ದೆಯಡಿ ಹುಡುಗ ಜೈಲುಪಾಲಾಗುತ್ತಿದ್ದಾನೆ. ಹುಡುಗಿ ಬೀದಿಪಾಲಾಗುತ್ತಿದ್ದಾಳೆ. ಅದಿವಾಸಿಗಳಿಗೆ ಕಾಯ್ದೆ ಕುರಿತಾಗಿ ಮಾಹಿತಿ ಇಲ್ಲವಾಗಿದೆ. ಬಾಳಿ ಬದುಕಬೇಕಾದ ಅಮಾಯಕರು ಶಿಕ್ಷೆ ಅನುಭವಿಸುವಂತಾಗಿದೆ. ಮೊದಲು ಅರಿವು ಮೂಡಿಸಿ ನಂತರ ಕಾಯ್ದೆ ಜಾರಿಗೊಳಿಸಲಿ.
    | ಹರ್ಷ ಆದಿವಾಸಿ ಮುಖಂಡ, ಹೆಮ್ಮಿಗೆ ಹಾಡಿ

    54ರ ಫಾಸ್ಟರ್ ಜತೆ 24ರ ಯುವತಿ ಮದುವೆ: ಇಲ್ಲಿದೆ ಎಕ್ಸ್​ಕ್ಲೂಸಿವ್​ ಫೋಟೋಸ್​

    ಕಿಡ್ನಿ ಮಾರಿ ಹಣ ಕೊಡಲು ಯತ್ನಿಸಿದೆ… ಆಗಲಿಲ್ಲ ಎನ್ನುತ್ತಲೇ ರೈಲಿಗೆ ತಲೆಕೊಟ್ಟ: ಡೆತ್​ನೋಟ್​ನಲ್ಲಿದೆ ಬೆಚ್ಚಿಬೀಳಿಸೋ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts