ಬ್ಯಾಡಗಿ: ಸ್ಥಳೀಯ ಮಾರುಕಟ್ಟೆಯಲ್ಲಿ ಗುರುವಾರದ ಟೆಂಡರ್‌ನಲ್ಲಿ ಡಬ್ಬಿ ತಳಿಯ ಮೆಣಸಿನಕಾಯಿ ಕ್ವಿಂಟಾಲ್‌ಗೆ 36,999 ರೂಪಾಯಿಗೆ ಮಾರಾಟವಾಗಿ ದಾಖಲೆ ಸೃಷ್ಟಿಸಿದೆ. ಕರೊನಾ ವೈರಸ್ ಹಾವಳಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಗದ್ದಲ, ಅತಿವೃಷ್ಟಿ ಮುಂತಾದ ಸಮಸ್ಯೆಗಳಿದ್ದರೂ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಯಾವುದೇ ಅಡ್ಡಿ-ಆತಂಕವಿಲ್ಲದೆ ಆವಕ ಏರಿಕೆಯಿಂದ ರೈತರಿಗೆ ಬಂಪರ್ ದರ ಸಿಗುತ್ತಿದೆ.
ಅಲ್ಲದೆ, ಕಳೆದ ವಾರ ಮೆಣಸಿನಕಾಯಿಗೆ 35,555 ರೂ. ದರದಲ್ಲಿ ಮಾರಾಟವಾಗಿತ್ತು. ಗುರುವಾರ ಇಲ್ಲಿನ ವಿ.ಎ. ಬಾಗೋಜಿ ದಲಾಲಿ ಅಂಗಡಿಯಲ್ಲಿ ಟೆಂಡರ್‌ಗೆ ಇಟ್ಟಿದ್ದ ಅನಂತಪುರ ಜಿಲ್ಲಾ ಅವಲಗಟ್ಟ ಗ್ರಾಮದ ಹನುಮರೆಡ್ಡಿ ಎಂಬ ರೈತರ 28 ಚೀಲ ಸುಮಾರು 9 ಕ್ವಿಂಟಾಲ್‌ನ ಮೆಣಸಿನಕಾಯಿ ಒಂದೇ ಲಾಟ್ ಅನ್ನು ಕಿಶೋರ ಆ್ಯಂಡ್ ಕಂಪನಿಯು ಕ್ವಿಂಟಾಲ್‌ಗೆ 36,999 ರೂ. ನಂತೆ ಅತಿ ಹೆಚ್ಚಿನ ದರದಲ್ಲಿ ಖರೀದಿಸಿದ್ದು, ಹಿಂದಿನ ದಾಖಲೆಯನ್ನು ಮುರಿದಿದೆ.
ಗುಣಮಟ್ಟದ ಒಣಮೆಣಸಿನಕಾಯಿಗೆ ಮಾರುಕಟ್ಟೆಯಲ್ಲಿ ಹೆಚ್ಚು ದರ ಸಿಗಲಿದೆ. ರೈತರು ನೀರು ಸಿಂಪಡಿಸದೆ, ಸ್ವಚ್ಛ ಹಾಗೂ ಒಣಕಾಯಿಗಳನ್ನು ಟೆಂಡರ್‌ಗೆ ಹಾಕಿದಲ್ಲಿ ಖರೀದಿದಾರರು ಉತ್ತಮ ದರ ನೀಡುತ್ತಾರೆ. ಗುರುವಾರ ಡಬ್ಬಿ ತಳಿ 36,999 ರೂ. ನಂತೆ ಖರೀದಿಯಾಗಿರುವುದು ರೈತರಿಗೆ ಖುಷಿ ತಂದಿದೆ. ಮಾರುಕಟ್ಟೆಯಲ್ಲಿ ಈ ದರ ಒಂದು ದಾಖಲೆ ಎಂದು ಎಪಿಎಂಸಿ ಕಾರ್ಯದರ್ಶಿಎಸ್.ಬಿ. ನ್ಯಾಮಗೌಡ್ರ ತಿಳಿಸಿದ್ದಾರೆ.