ಜಿಲ್ಲೆ

ಶಾಲೆ ಆರಂಭದ ಮೊದಲ ದಿನವೇ ಅವಘಡ: ತರಗತಿಯಲ್ಲಿ ವಿದ್ಯಾರ್ಥಿಯನ್ನು ಕಚ್ಚಿದ ಹಾವು!

ಬೆಳಗಾವಿ: ಒಂದೂವರೆ ವರ್ಷಗಳಿಂದ ಮುಚ್ಚಿದ್ದ ಪ್ರಾಥಮಿಕ ಶಾಲೆಗಳ ಬಾಗಿಲು ಸೋಮವಾರದಿಂದ ತೆರೆದಿವೆ. ಈ ಉತ್ಸಾಹದ ಸನ್ನಿವೇಶದಲ್ಲಿ ಶಾಲೆಯ ಮೊದಲ ದಿನ ವಿದ್ಯಾರ್ಥಿಯೊಬ್ಬನಿಗೆ ಹಾವು ಕಚ್ಚಿ ಆತಂಕ ಮೂಡಿಸಿದ ಪ್ರಸಂಗ ತಡವಾಗಿ ಬೆಳಕಿಗೆ ಬಂದಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮದಮಕ್ಕನಾಳ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಸರಕಾರಿ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮಲ್ಲಿಕಾರ್ಜುನ ಹರಿಜನ ಎಂಬುವನಿಗೆ ನಿನ್ನೆ ಶಾಲಾ ಆವರಣದಲ್ಲಿ ಹಾವು ಕಚ್ಚಿದೆ.

ಬಾಲಕನನ್ನು ಕೂಡಲೇ ಹುಕ್ಕೇರಿ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಯಿತು. ವಿಷ ಕಡಿಮೆ ಇರುವ ಹಾವು ಕಚ್ಚಿದ್ದರಿಂದ ವಿದ್ಯಾರ್ಥಿಯು ಸಾವಿನ ದವಡೆಯಿಂದ ಪಾರಾಗಿದ್ದಾನೆ. ಅದೇ ಬಾಲಕನಿಗೆ ಕಚ್ಚಿದ ಹಾವನ್ನು ಸ್ಥಳೀಯರು ಮತ್ತು ಶಾಲೆಯ ಶಿಕ್ಷಕರು ಹುಡುಕಿ ಸಾಯಿಸಿದ್ದಾರೆ.