More

    ಸಂತಸದಲ್ಲೇ ಶಾಲೆಗೆ ಬಂದ ಮಕ್ಕಳು ; 1 ರಿಂದ 5ನೇ ತರಗತಿ ಆರಂಭ

    ತುಮಕೂರು: ಸೋಮವಾರ 1 ರಿಂದ 5ನೇ ತರಗತಿ ಆರಂಭವಾಗಿದ್ದು, ಚಿಣ್ಣರು ಖುಷಿ, ಉತ್ಸಾಹದಿಂದ ಶಾಲೆಗಳಿಗೆ ಆಗಮಿಸಿದರು. ಶಾಲೆಗಳು ಮಾವಿನ ತೋರಣ, ಹೂವುಗಳಿಂದ ಸಿಂಗಾರಗೊಂಡು ಚಿಣ್ಣರನ್ನು ಸ್ವಾಗತಿಸಿದವು.

    ನಗರದ ಮರಳೂರಿನ ಸರ್ಕಾರಿ ಪ್ರಾಥಮಿಕ ಪಾಠ ಶಾಲೆ, ಸರಸ್ವತಿಪುರಂನ ವಿದ್ಯಾನಿಕೇತನ ಶಾಲೆ, ಶೇಷಾದ್ರಿಪುರಂ ಪ್ರಾಥಮಿಕ ಶಾಲೆ ಸೇರಿ ಎಲ್ಲ ಶಾಲೆಗಳಲ್ಲಿಯೂ ಪುಟಾಣಿಗಳು ಮೊದಲದಿನ ಖುಷಿಯಿಂದಲೇ ಶಾಲೆಗೆ ಬಂದರು. 20 ತಿಂಗಳ ಬಳಿಕ ಶಾಲೆ ಆವರಣಗಳಲ್ಲಿ ಮಕ್ಕಳು ಒಟ್ಟಾಗಿ ಕಾಣಿಸಿಕೊಂಡರು, ಚಿಕ್ಕ ಮಕ್ಕಳಲ್ಲಿ ದೈಹಿಕ ಅಂತರ ಕಾಪಾಡಿಕೊಳ್ಳುವುದು ಕಷ್ಟ ಎಂಬುದು ಮೊದಲ ದಿನವೇ ಅನುಭವವಾದರೂ ಸರ್ಕಾರದ ಮಾರ್ಗಸೂಚಿ ಪಾಲನೆಗೆ ಶಿಕ್ಷಕರು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಒಂದು ಕೊಠಡಿಯಲ್ಲಿ ಗರಿಷ್ಟ 20 ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡಲಾಗುತ್ತಿದೆ, ಮಕ್ಕಳ ಸಂಖ್ಯೆ ಹೆಚ್ಚಿದ್ದು ಕೊಠಡಿ ಸಂಖ್ಯೆ ಕಡಿಮೆ ಇದ್ದರೆ ಪಾಳಿ ಪ್ರಕಾರ ತರಗತಿ ನಡೆಸಲು ಸರ್ಕಾರ ಆಯಾ ಶಾಲಾ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ.

    ಮಾರ್ಗಸೂಚಿ ಪಾಲನೆಗೆ ಸೂಚನೆ: ಸರ್ಕಾರದ ಮಾರ್ಗಸೂಚಿ ಅನ್ವಯ ಸರ್ಕಾರಿ, ಅನುದಾನ ರಹಿತ, ಖಾಸಗಿ ಶಾಲೆಗಳಿಗೆ ಎಲ್ಲ ಶಾಲಾ ಕೊಠಡಿಗಳಿಗೆ ಸ್ಯಾನಿಟೈಸ್ ಮಾಡಿ ಎಸ್‌ಓಪಿ ಅನುಸರಿಸುವ ಮೂಲಕ ತರಗತಿಗಳನ್ನು ನಡೆಸುವಂತೆ ಸೂಚನೆ ನೀಡಲಾಗಿದ್ದು, ಅದರಂತೆ ಎಲ್ಲ ಶಾಲೆಗಳಲ್ಲೂ 1 ರಿಂದ 5ನೇ ತರಗತಿ ಆರಂಭವಾಗಿವೆ ಎಂದು ಡಿಡಿಪಿಐ ಸಿ.ನಂಜಯ್ಯ ಹೇಳಿದರು.

    ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳು ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಪಾಡಿಕೊಂಡು ಕುಳಿತುಕೊಳ್ಳಬೇಕು. ಹಾಗೆಯೇ ಪಾಲಕರ ಒಪ್ಪಿಗೆ ಪತ್ರವೂ ಕಡ್ಡಾಯವಾಗಿರುತ್ತದೆ. ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸುಸಜ್ಜಿತ ಶೌಚಗೃಹ ವ್ಯವಸ್ಥೆ ಮಾಡಿರುವಂತೆಯೂ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ ಎಂದರು. ಕರೊನಾ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಶಾಲೆಗಳನ್ನು ಆರಂಭಿಸಲಾಗಿದೆ. ಮಕ್ಕಳಿಗೆ ಹ್ಯಾಂಡ್ ಗ್ಲೌಸ್, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಕೂರಿಸಿ ತರಗತಿಗಳನ್ನು ನಡೆಸಲಾಗುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts