More

    ರೇಷ್ಮೆ ಹುಳುಗಳಿಗೆ ಬಿಸಿಲ ಬಾಧೆ

    ಗಂಗಾಧರ್ ಬೈರಾಪಟ್ಟಣ ರಾಮನಗರ
    ಮಾವು, ತೆಂಗು ಬೆಳೆಗಾರರ ನಂತರ ಈಗ ಬಿಸಿಲ ಬೇಗೆಗೆ ಬಸವಳಿಯುವವರ ಸರದಿ ರೇಷ್ಮೆ ಬೆಳೆಗಾರರದ್ದು. ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನ ರೇಷ್ಮೆ ಹುಳುಗಳು ರೋಗಕ್ಕೆ ತುತ್ತಾಗುವಂತೆ ಮಾಡುತ್ತಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

    ಬೆಲೆ ಕುಸಿತ, ಇಳುವರಿ ಕುಸಿತ, ಸಣ್ಣಪುಟ್ಟ ರೋಗಳಿಂದ ಆಗಾಗ ನಷ್ಟಕ್ಕೆ ಒಳಗಾಗುವ ರೇಷ್ಮೆ ಬೆಳೆಗಾರರು ಕಳೆದ 5-6 ವರ್ಷಗಳಿಂದಲೂ ರೇಷ್ಮೆ ತೋಟಗಳಿಗೆ ಹಬ್ಬುವ ಥ್ರಿಪ್ಸ್, ಮೈಟ್ಸ್ ಮತ್ತು ಎಲೆ ಸುರಳಿ ರೋಗದಿಂದ ಮುಕ್ತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರ ಜತೆಗೆ 40 ಡಿಗ್ರಿ ದಾಟಿರುವ ಬಿಸಿಲ ಬೇಗೆಯಿಂದ ರೇಷ್ಮೆ ಹುಳುಗಳು ಸಪ್ಪೆ ಮತ್ತು ಹಾಲು ರೋಗಕ್ಕೆ ತುತ್ತಾಗಿ ಅಂತಿಮ ಹಂತದಲ್ಲಿ ಬೆಳೆ ಕೈ ತಪ್ಪುವಂತಾಗಿದೆ.

    ಹೆಚ್ಚಿದ ಬೇಗೆ:

    ವಾಸ್ತವವಾಗಿ ರೇಷ್ಮೆ ಬೆಳೆಗೆ 26-27 ಡಿಗ್ರಿ ಉಷ್ಣಾಂಶ ಸೂಕ್ತ. ಸಾಮಾನ್ಯವಾಗಿ ರಾಮನಗರ ಸೇರಿ ದಕ್ಷಿಣ ಕರ್ನಾಟಕ ಭಾಗದಲ್ಲಿ ಬೇಸಿಗೆಯಲ್ಲಿ 30-32 ಡಿಗ್ರಿ ಇರುತ್ತಿದ್ದ ಉಷ್ಣಾಂಶ ಇತ್ತೀಚಿನ ವರ್ಷಗಳಲ್ಲಿ 40ರ ಆಸುಪಾಸಿಗೆ ಬಂದಿತ್ತು. ಆದರೆ, ಈ ಬಾರಿ 40ರ ಗಡಿ ದಾಟಿದ್ದು, ಇದು ರೇಷ್ಮೆ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಮೊದಲು ಮೂರು ಹಂತ (ಜ್ವರ)ಗಳಲ್ಲಿ ಚೆನ್ನಾಗಿಯೇ ಇರುವ ರೇಷ್ಮೆ ಹುಳುಗಳು ನಾಲ್ಕನೇ ಜ್ವರಕ್ಕೆ ಬಂದ ತಕ್ಷಣ ಸಪ್ಪೆ ಮತ್ತು ಹಾಲು ರೋಗಕ್ಕೆ ತುತ್ತಾಗುತ್ತಿವೆ. ಇದರಿಂದ ಅನಿವಾರ್ಯವಾಗಿ ಹುಳುಗಳನ್ನು ತಿಪ್ಪೆಗೆ ಎಸೆಯುವಂತಾಗಿದೆ.

    ಕಷ್ಟವಾಗುತ್ತಿದೆ ನಿಯಂತ್ರಣ

    ವಾತಾವರಣದಲ್ಲಿ ಎಷ್ಟೇ ಉಷ್ಣಾಂಶವಿದ್ದರೂ ಅದನ್ನು ನಿಯಂತ್ರಿಸಿ, ರೇಷ್ಮೆ ಹುಳುಗಳ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಲು ರೈತರು ಹರಸಾಹಸ ಪಡುತ್ತಿದ್ದಾರೆ. ರೇಷ್ಮೆ ಸಾಕಾಣಿಕೆ ಮನೆಯ ಛಾವಣಿಗೆ ತೆಂಗಿನಗರಿ ಅಳವಡಿಕೆ, ಆಗಾಗ ಛಾವಣಿಗೆ ನೀರು ಹಾಕುವುದು ಸೇರಿ ಹಲವು ಕ್ರಮ ಅನುರಿಸಿದ ಹೊರತಾಗಿಯೂ ರೋಗ ನಿಯಂತ್ರಣ ಕಷ್ಟವಾಗಿದೆ. ಅದರಲ್ಲೂ ಇತ್ತೀಚಿಗೆ ರೋಗ ಹೆಚ್ಚಳವಾಗುತ್ತಲೇ ಇದ್ದು, ಶೇ.10 ಬೆಳೆ ಕೈಗೆ ಸಿಗುತ್ತಿಲ್ಲ. ಎಲ್ಲವನ್ನೂ ಗೊಬ್ಬರಕ್ಕೆ ಹಾಕುವಂತೆ ಆಗಿದೆ ಎನ್ನುವುದು ರೈತರ ಅಳಲು.

    ಸರ್ಕಾರ ಸ್ಪಂದಿಸಲಿ

    ಸರ್ಕಾರ, ನಷ್ಟಕ್ಕೆ ಪರಿಹಾರ ತುಂಬಿಕೊಡುವ ಕೆಲಸ ಮಾಡಬೇಕೆನ್ನುವುದು ರೈತರ ಆಗ್ರಹವಾಗಿದೆ. ನಷ್ಟಕ್ಕೆ ಒಳಗಾಗಿರುವ ರೈತರ ಮಾಹಿತಿ ಪಡೆದುಕೊಂಡು ಎಷ್ಟು ನಷ್ಟ ಅನುಭವಿಸಿದ್ದಾರೆ ಎನ್ನುವುದನ್ನು ಖಾತ್ರಿಪಡಿಸಿಕೊಂಡು ಉತ್ಪಾದನೆ ವೆಚ್ಚಕ್ಕೆ ಅನುಗುಣವಾಗಿ ಪರಿಹಾರ ನೀಡಬೇಕು. ಈ ಬಗ್ಗೆ ಕೂಡಲೇ ರೇಷ್ಮೆ ಸಚಿವರು ಗಮನ ಹರಿಸಬೇಕು ಎಂದು ರೇಷ್ಮೆ ಬೆಳೆಗಾರರು ಒತ್ತಾಯಿಸಿದ್ದಾರೆ.

    ಇಲಾಖೆ ಸಲಹೆ

    * ಹುಳು ಸಾಕಣೆ ಮನೆ ಸುತ್ತ ಗೋಡೆಗಳ ಮೇಲೆ ನೇರವಾಗಿ ಬಿಸಿಲು ಬೀಳದಂತೆ ಕ್ರಮವಹಿಸಬೇಕು
    * ಮನೆ ಮೇಲೆ ಶೇಡ್ ನೆಟ್ ಹಾಕಿ, ತೆಂಗಿನಗರಿಯಿಂದ ಮುಚ್ಚಬೇಕು, ಹನಿ ನೀರಾವರಿ ಮೂಲಕ ನೀರು ಹಾಕಿ ತಂಪು ಕಾಪಾಡಬೇಕು.
    * ಆರ್‌ಸಿಸಿ ಛಾವಣಿ ಇದ್ದರೆ ಕೂಲ್ ಸಮ್ ಅಥವಾ ಸುಣ್ಣ ಬಳಿಯಬೇಕು
    * ಸೊಪ್ಪನ್ನು ತಂಪುಹೊತ್ತಿನಲ್ಲಿ ಕಟಾವು ಮಾಡಬೇಕು, ಬೆಳಗ್ಗಿನ ಹೊತ್ತಿನಲ್ಲಿ ಕಡಿಮೆ ಪ್ರಮಾಣದ ಸೊಪ್ಪನ್ನು ಎರಡು ಬಾರಿ ನೀಡಿದರೆ ಉತ್ತಮ
    * ಮಡಕೆಗಳಲ್ಲಿ ನೀರು ತುಂಬಿಸಿ ಹುಳು ಸಾಕಾಣಿಕೆ ಮನೆಯಲ್ಲಿ ಇಡುವುದು

    ರೇಷ್ಮೆ ಹುಳುಗಳಿಗೆ ಬಿಸಿಲ ಬಾಧೆಬೇಸಿಗೆ ಹೆಚ್ಚಿರುವ ಕಾರಣ ರೇಷ್ಮೆ ಹುಳುಗಳಲ್ಲಿ ಹಾಲು ಮತ್ತು ಸಪ್ಪೆ ರೋಗ ಕಾಣಿಸಿಕೊಂಡಿದೆ. ರೋಗ ನಿಯಂತ್ರಣ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ರೈತರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ.
    ಬಸವರಾಜು,
    ಉಪನಿರ್ದೇಶಕರು, ರೇಷ್ಮೆ ಇಲಾಖೆ ರಾಮನಗರ

    ರೇಷ್ಮೆ ಹುಳುಗಳಿಗೆ ಬಿಸಿಲ ಬಾಧೆಉಷ್ಣಾಂಶ ಹೆಚ್ಚಳದಿಂದ ಸಪ್ಪೆ ರೋಗ ಕಾಣಿಸಿಕೊಂಡಿದೆ. ಇದರಿಂದ ರೈತರಿಗೆ ಅಂತಿಮ ಹಂತದಲ್ಲಿ ಬೆಳೆ ಸಿಗುತ್ತಿಲ್ಲ. ಇಲಾಖೆ ಮತ್ತು ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು.

    ಕೆ.ರವಿ, ಕಾರ್ಯದರ್ಶಿ, ರೇಷ್ಮೆ ಬೆಳಗಾರರ ಹಿತ ರಕ್ಷಣಾ ಸಮಿತಿ

    ರೇಷ್ಮೆ ಬೆಳೆಗಾರರ ವಿವರ
    ತಾಲೂಕು    ಗ್ರಾಮಗಳು   ರೈತರು     ಭೂ ಪ್ರದೇಶ
    ಕನಕಪುರ     399     12121   8644.62 (ಹೆ)
    ಹಾರೋಹಳ್ಳಿ  202       4781   4063.51 (ಹೆ)
    ಚನ್ನಪಟ್ಟಣ   219       5617    4789.99 (ಹೆ)
    ರಾಮನಗರ   267       4884    3769.56 (ಹೆ)
    ಒಟ್ಟು       1087     27403    21274.68

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts