More

    ಮಾವು ಬೆಳೆಗಾರರಿಗೆ ನಷ್ಟ ಪರಿಹಾರಕ್ಕೆ ಪಟ್ಟು

    * ಮಾವು-ತೆಂಗು ಬೆಳೆ ರೈತ ಉತ್ಪಾದಕರ ನಿಯೋಗ ಒತ್ತಾಯ

    ರಾಮನಗರ
    ಬರದ ಜತೆಗೆ ಅತಿಯಾದ ಬಿಸಿಲಿನ ಹಿನ್ನೆಲೆಯಲ್ಲಿ ಮಾವು ಬೆಳೆ ನೆಲ ಕಚ್ಚಿದೆ. ಸರ್ಕಾರ ಬೆಳೆಗಾರರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಒದಗಿಸಿ ನೆರವಾಗಬೇಕೆಂದು ಒತ್ತಾಯಿಸಿ ಜಿಲ್ಲಾ ಮಾವು ಮತ್ತು ತೆಂಗು ಬೆಳೆ ರೈತ ಉತ್ಪಾದಕರ ಕಂಪನಿಯ ನಿಯೋಗವು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರಿಗೆ ಮನವಿ ಸಲ್ಲಿಸಿತು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಬೆಳಗ್ಗೆ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ ನಿಯೋಗ ಮನವಿ ಸಲ್ಲಿಸಿ, ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ಹಂಚಿಕೊಂಡಿತು. ನಿರೀಕ್ಷಿತ ಮಟ್ಟದ ಇಳುವರಿ ಬಾರದೆ ಬೆಳೆಗಾರರು ಈಗಾಗಲೇ ನಷ್ಟದ ಸುಳಿಗೆ ಸಿಲುಕಿದ್ದಾರೆ. ಇದರ ಜತೆಗೆ ಬಿಸಿಲ ಬೇಗೆಯಿಂದ ಒಣಗುತ್ತಿರುವ ಮಾವಿನ ಮರಗಳು ಗಾಯದ ಮೇಲೆ ತುಪ್ಪ ಸವರಿದಂತೆ ಮಾಡಿವೆ ಎಂದು ರೈತರ ಸಂಕಷ್ಟಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದಿತು.

    ಕಳೆದ 6 ವರ್ಷಗಳಿಂದಲೂ ಮಾವು ಫಸಲು ಕೈಗೆ ಸಿಕ್ಕಿಲ್ಲ, ಈ ಬಾರಿಯೂ 40 ಡಿಗ್ರಿವರೆಗೆ ತಾಪಮಾನ ಇರುವ ಕಾರಣ ಬೆಳೆ ಮೇಲೆ ಭಾರೀ ಪರಿಣಾಮ ಬೀರಿದೆ. ಈ ಕುರಿತು ವೈಜ್ಞಾನಿಕ ವಿಶ್ಲೇಷಣೆಗೆ ತೋಟಗಾರಿಕೆ ವಿಶ್ವವಿದ್ಯಾನಿಲಯ, ತೋಟಗಾರಿಕಾ ತಜ್ಞರು ಹಾಗೂ ವಿಜ್ಞಾನಿಗಳ ನೇತೃತ್ವದಲ್ಲಿ ಪ್ರದೇಶವಾರು ಆಯ್ಕೆ ಮಾಡಿ ಸಮಗ್ರ ಅಧ್ಯಯನ ನಡೆಸಬೇಕು. ಒಣಗುತ್ತಿರುವ ಮಾವಿನ ಮರಗಳ ಪರಿಸ್ಥಿತಿಗೆ ಕಾರಣವೇನು ಎಂಬುದನ್ನು ತಿಳಿಯಲು ಮುಂದಾಗಬೇಕು.
    ಅನಧಿಕೃತವಾಗಿ ಬೇರೆ ಬೇರೆ ರಾಜ್ಯಗಳಿಂದ ಬರುತ್ತಿರುವ ಕಳಪೆ ರಾಸಾಯನಿಕ ಔಷಧಗಳ ಬಗ್ಗೆ ನಿಗಾ ವಹಿಸದಿರಲು ಕಾರಣವೇನು? ಒಟ್ಟಾರೆ ಮಾವು ಬೆಳೆಗೆ ಸಿಂಪಡಿಸಲಾದ ಔಷಧಗಳ ವೈಜ್ಞಾನಿಕ ಗುಣಮಟ್ಟ ಪರಿಶೋಧನೆ ನಡೆಸಬೇಕು. ಮಾವು ಬೆಳೆಗಾರರು ಶೇ. 90 ಪ್ರಮಾಣದಲ್ಲಿ ಫಸಲು ನಷ್ಟ ಮತ್ತು ಶೇ 1520 ಪ್ರಮಾಣದ ಮಾವು ವೃಕ್ಷಗಳನ್ನೇ ಕಳೆದುಕೊಂಡಿದ್ದಾರೆ. ಇದನ್ನು ರಾಷ್ಟ್ರೀಯ ವಿಪತ್ತು ಪರಿಹಾರದಡಿ ಪರಿಗಣಿಸಬೇಕು. ರಾಜ್ಯ ಸರ್ಕಾರ ಮಾವು ಬೆಳೆಗಾರರ ರಕ್ಷಣೆಗೆ ವಿಶೇಷ ಆರ್ಥಿಕ ನೆರವು ನೀಡಬೇಕು.

    ಮಳೆ ಆಧಾರಿತ ಮಾವು ಬೆಳೆ ಉಳಿಸಿಕೊಳ್ಳಲು ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ವಿಜ್ಞಾನಿಗಳಿಂದ ವೈಜ್ಞಾನಿಕ ವಿಧಾನಗಳ ಬಗ್ಗೆ ಬೆಳೆಗಾರರಿಗೆ ಕಾರ್ಯಾಗಾರ ಹಮ್ಮಿಕೊಳ್ಳಬೇಕು. ಪ್ರಸಕ್ತ ಸಾಲಿನಲ್ಲಿ ಅತಿಯಾದ ತಾಪಮಾನದಿಂದ ಪೂರ್ಣ ಪ್ರಮಾಣದಲ್ಲಿ ಮತ್ತು ಭಾಗಶಃ ಒಣಗಿ ಹಾಳಾಗಿರುವ ಹಾಗೂ ಹಾಳಾಗುತ್ತಿರುವ ಮಾವಿನ ಮರಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂಬ ಬೇಡಿಕೆಗಳನ್ನು ನಿಯೋಗ ಜಿಲ್ಲಾಧಿಕಾರಿ ಮುಂದಿಟ್ಟಿತು.

    ಜಿಲ್ಲಾ ಮಾವು ಮತ್ತು ತೆಂಗು ಬೆಳೆ ರೈತ ಉತ್ಪಾದಕರ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆರ್. ಚಿಕ್ಕ ಭೈರೇಗೌಡ, ನಿರ್ದೇಶಕರಾದ ಸಿ. ಪುಟ್ಟಸ್ವಾಮಿ, ಲಿಂಗೇಗೌಡ, ಧರಣೇಶ್ ರಾಂಪುರ, ತೋಟಗಾರಿಕೆ ಇಲಾಖೆಯು ಉಪ ನಿರ್ದೇಶಕ ರಾಜು ಎಂ.ಎಸ್ ಹಾಗೂ ಇತರರು ಇದ್ದರು.

    ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈಗಾಗಲೇ ಮಾವು ಬೆಳೆ ನಷ್ಟದ ವರದಿ ಸಲ್ಲಿಸಿದ್ದು, ಸರ್ಕಾರದ ಗಮನಕ್ಕೆ ತಂದು ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು.
    ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾಧಿಕಾರಿ, ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts