ಬೆಂಗಳೂರು: ಭ್ರಷ್ಟಾಚಾರದ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಬಿಜೆಪಿ ಶಾಸಕ ಎಸ್.ರಘು ಹಾಗೂ ಅವರ ಬೆಂಬಲಿಗರನ್ನು ಶೀಘ್ರವೇ ಬಂಧಿಸಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಪ್ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಎಚ್.ಡಿ. ಬಸವರಾಜು, “ತಿಪ್ಪಸಂದ್ರ ಮುಖ್ಯರಸ್ತೆಯ ಮಹಾದ್ವಾರದ ಬಳಿ ಪ್ರತಿಭಟನೆ ನಡೆಸುತ್ತಿದ್ದವರ ಪೈಕಿ ಐವರು ಆಮ್ ಆದ್ಮಿ ಪಾರ್ಟಿ ಮುಖಂಡರನ್ನು ಪೊಲೀಸರು ಬಂಧಿಸಿದ್ದರು. ಇದೇ ವೇಳೆ ಜೀವನ್ಬಿಮಾ ಪೊಲೀಸ್ ಠಾಣೆಗೆ ಆಗಮಿಸಿದ ಶಾಸಕ ರಘು ಆಪ್ತ ಸಹಾಯಕ ಉನ್ನಿಕೃಷ್ಣನ್ ಹಾಗೂ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರುಗಳು ಪೊಲೀಸ್ ಸಿಬ್ಬಂದಿಗಳೇ ಹೆದರುವಂತೆ ದಾಂಧಲೆ ಮಾಡಿದ್ದಾರೆ. ಠಾಣೆಯೊಳಗೆ ತೆರಳುತ್ತಿದ್ದ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆ ನಡೆದು ಒಂದು ದಿನವಾದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ. ರಘು ಬೆಂಬಲಿಗರ ಗೂಂಡಾಗಿರಿಯು ಪೊಲೀಸ್ ಸಿಬ್ಬಂದಿಯ ಫೋನ್‌ಗಳಲ್ಲಿ ರೆಕಾರ್ಡ್ ಆಗಿದ್ದು, ಅವುಗಳನ್ನು ಸಾಕ್ಷಿಯಾಗಿ ಬಳಸಿಕೊಂಡು ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು” ಎಂದು ಒತ್ತಾಯಿಸಿದರು.
ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಮಾತನಾಡಿ, “ಪೊಲೀಸ್ ಠಾಣೆಯಲ್ಲಿ ನಡೆದ ದಾಂಧಲೆಗೆ ಶಾಸಕ ರಘು ಅವರೇ ನೇರ ಹೊಣೆ. ಭ್ರಷ್ಟಾಚಾರವು ಜನರಿಗೆ ತಿಳಿಯುತ್ತದೆ ಎಂದು ಹೆದರಿದ ಅವರು ನಮ್ಮ ಮೇಲೆ ಗೂಂಡಾ ಬೆಂಬಲಿಗರನ್ನು ಛೂ ಬಿಟ್ಟಿದ್ದಾರೆ. ರಾಜ್ಯ ಸರ್ಕಾರ ಹಾಗೂ ಶಾಸಕರ ಪ್ರಭಾವದಿಂದಾಗಿ ಪೊಲೀಸ್ ಸಿಬ್ಬಂದಿ ಅಸಹಾಯಕತೆಯಿಂದ ಸುಮ್ಮನಿರಬೇಕಾಯಿತು. ಅಧಿಕಾರದಲ್ಲಿ ಮದದಲ್ಲಿರುವ ಬಿಜೆಪಿಯು ಪೊಲೀಸ್ ಇಲಾಖೆಯನ್ನು ಅಗೌರವಯುತವಾಗಿ ಬಳಸಿಕೊಳ್ಳುತ್ತಿರುವುದು ಖಂಡನೀಯ. ಇಂತಹ ಘಟನೆಗಳು ಪೊಲೀಸರ ನೈತಿಕ ಬಲವನ್ನು ಕುಗ್ಗಿಸುತ್ತದೆ. ಗೃಹ ಸಚಿವರು ಹಾಗೂ ನಗರ ಪೊಲೀಸ್ ಆಯುಕ್ತರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ರಘು ಹಾಗೂ ಅವರ ಬೆಂಬಲಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಖ್ಯಾತ ವಕೀಲ ಹಾಗೂ ಎಎಪಿ ಮುಖಂಡರಾದ ಜಗದೀಶ್ ಮಹಾದೇವ್ ಮಾತನಾಡಿ, “ಗೂಂಡಾಗಿರಿಯ ಮೂಲಕ ಆಮ್ ಆದ್ಮಿ ಪಾರ್ಟಿಯ ಧ್ವನಿಯನ್ನು ಹತ್ತಿಕ್ಕಬಹುದು ಎಂಬ ಭ್ರಮೆಯಿಂದ ಬಿಜೆಪಿ ನಾಯಕರು ಹೊರಬರಬೇಕು. ಭ್ರಷ್ಟಾಚಾರ ಮುಕ್ತ ಆಡಳಿತದ ನಿರ್ಮಾಣಕ್ಕೆಂದೇ ಹುಟ್ಟಿಕೊಂಡಿರುವ ಪಕ್ಷ ನಮ್ಮದು. ಅಕ್ರಮಗಳ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ. ಕರ್ನಾಟಕದ ಜನತೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಗೂಂಡಾ ವರ್ತನೆ ತೋರುವ ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ” ಎಂದು ಹೇಳಿದರು.
ಇದನ್ನೂ ಓದಿ: ನೀನೇ ಸಾಕಿದ ಗಿಣಿ ನಿನ್ನ ಹದ್ದಾಗಿ ಕುಕ್ಕಿತಲ್ಲೋ..; ಆರ್ಟಿಐ ಕಾರ್ಯಕರ್ತನನ್ನೇ ಇಕ್ಕಟ್ಟಿಗೆ ಸಿಲುಕಿಸಿದ ಮಹಿಳಾ ಅಧಿಕಾರಿ!?
ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಕುಶಲ ಸ್ವಾಮಿ ಮಾತನಾಡಿ, “ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಮ್ಮ ಕಾರ್ಯಕರ್ತೆಯರ ಮೇಲೆ ಬಿಜೆಪಿ ಶಾಸಕ ರಘು ಬೆಂಬಲಿಗರು ಅನುಚಿತವಾಗಿ ವರ್ತಿಸಿರುವುದು ಖಂಡನೀಯ. ಪೊಲೀಸ್ ಠಾಣೆಯೇ ಮಹಿಳೆಯರಿಗೆ ಸುರಕ್ಷಿತಲ್ಲವೆಂದರೆ, ಬೇರೆ ಕಡೆ ಹೇಗೆ ಸುರಕ್ಷತೆಯನ್ನು ನಿರೀಕ್ಷಿಸಲು ಸಾಧ್ಯ? ರಾಜ್ಯ ಸರ್ಕಾರ ಹಾಗೂ ರಾಜ್ಯ ಮಹಿಳಾ ಆಯೋಗಕ್ಕೆ ಮಹಿಳೆಯ ಮೇಲೆ ನಿಜವಾಗಿಯೂ ಕಾಳಜಿ ಇದ್ದರೆ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಿ” ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿ ಮುಖಂಡರಾದ ಜಗದೀಶ್ ವಿ. ಸದಂ, ಅಶೋಕ್ ಮೃತ್ಯುಂಜಯ, ಸುರೇಶ್ ರಾಥೋಡ್, ಉಷಾ ಮೋಹನ್, ಪ್ರಶಾಂತಿ, ಮಂಜು ರಾವ್ ಪಾಪಣ್ಣ, ಜಗದೀಶ್ ಬಾಬು, ಆನಂದ್ ವಾಸುದೇವನ್ ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.