ಜಿಲ್ಲೆ

ಎಚ್​ಡಿಕೆ v/s ಸುಮಲತಾ: ಅಂಬಿ ಫೋಟೋ ಹಿಡಿದು ಅಭಿಮಾನಿಗಳ ಪ್ರತಿಭಟನೆ

ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ವಿರುದ್ಧದ ವಾಕ್ಸಮರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ನಿನ್ನೆಯೇ ವಿರಾಮ ಘೋಷಿಸಿದ್ದರೂ ಸುಮಲತಾ ಅಭಿಮಾನಿಗಳು ಹಾಗೂ ಜೆಡಿಎಸ್​ ಕಾರ್ಯಕರ್ತರು ತಮ್ಮ ನಾಯಕರ ಪರ ಜಿದ್ದಾಜಿದ್ದಿಗೆ ಬಿದ್ದವರಂತೆ ಪ್ರತಿಭಟನೆ ನಡೆಯುತ್ತ ಆಕ್ರೋಶ ಹೊರಹಾಕುತ್ತಲೇ ಇದೆ.

ಸುಮಲತಾ ಪರ ಬ್ಯಾಟಿಂಗ್​ ಬೀಸುತ್ತಾ, ಎಚ್​ಡಿಕೆ ವಿರುದ್ಧ ಮಾತಾನಡಿದ್ದನ್ನು ಖಂಡಿಸಿ ಶನಿವಾರ ಬೆಳಗ್ಗೆ ರಾಕ್​ಲೈನ್​ ವೆಂಕಟೇಶ್​ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದ ಜೆಡಿಎಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಇಂದು ಅಂಬಿ ಅಭಿಮಾನಿಗಳು ಎಚ್​ಡಿಕೆ ವಿರುದ್ಧ ಕಂಠೀರವ ಸ್ಟುಡಿಯೋ ಗೇಟ್ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಅಂಬರೀಶ್ ಫೋಟೋ ಹಿಡಿದು ಪ್ರತಿಭಟನೆ ನಡೆಸಿದ ಅಭಿಮಾನಿಗಳು ಕುಮಾರಸ್ವಾಮಿ ಮತ್ತು ರವೀಂದ್ರ ಶೀಕಂಠಯ್ಯ ವಿರುದ್ಧ ಧಿಕ್ಕಾರ ಕೂಗಿದರು.

ಇನ್ನು ಇದೇ ವೇಳೆ ಜೆಡಿಎಸ್ ಕಾರ್ಯಕರ್ತನೊಬ್ಬ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ನಾನು ಅಪ್ಪಟ ಜೆಡಿಎಸ್ ಕಾರ್ಯಕರ್ತ. ರಾಜಕೀಯವಾಗಿ ದೇವೇಗೌಡರ ಮನೆಯವರನ್ನ ಪೂಜಿಸುತ್ತೇನೆ. ಅದೇ ರೀತಿ ಸಿನಿಮಾ ರಂಗದಲ್ಲಿ ಅಂಬಿಯಣ್ಣನ ಅಭಿಮಾನಿ. ಆದ್ರೆ ಕೆಆರ್​ಎಸ್ ಅಕ್ಕಪಕ್ಕ ತೊಂದರೆ ಅಗಿದೆ ಅಂತ ಸುಮಲತಾ ಮೇಡಂ ಹೇಳಿದ್ದಾರೆ. ಮುಂದೆ ಮಂಡ್ಯಕ್ಕೆ ಯಾವುದೇ ತೊಂದರೆ ಆಗಬಾರದು ಅಂತ ಹೇಳಿಕೆ ಕೊಟ್ಟಿರಬಹುದು. ಅವರ ಜತೆಯಲ್ಲಿ ಇರೋರು ಇವರಿಬ್ಬರ ಮಧ್ಯೆ ತಂದಿಟ್ಟು ಬೇಳೆ ಬೇಯಿಸಿಕೊಳ್ಳಲು ಹೋಗಬೇಡಿ. ಸುಮಲತಾರ ಹೇಳಿಕೆ ತಪ್ಪಾಗಿದ್ರೆ ಅವರನ್ನು ಕರೆದು ಕುಮಾರಣ್ಣ ಮಾತನಾಡಬೇಕಿತ್ತು. ಮಾತಿನ ಮೂಲಕ ಸರಿ ಮಾಡಿಕೊಳ್ಳಬಹುದಾಗಿತ್ತು. ಇದು ಜಗಳದ ಮಟ್ಟಕ್ಕೆ ಹೋಗಿದ್ದು ವಿಪರ್ಯಾಸ. ಸದ್ಯ ಜಗಳಕ್ಕೆ ತೆರೆ ಎಳೆದಿದ್ದು ಸಂತೋಷದ ವಿಚಾರ. ನಮಗೆ ಕುಮಾರಣ್ಣ ಹಾಗೂ ಸುಮಲತಾ ಇಬ್ಬರೂ ಒಂದೇ. ಅಭಿಮಾನ ಅಂತ ಬಂದ್ರೆ ನಾವು ಅಂಬರೀಶ್ ಪರ ನಿಲ್ಲುತ್ತೇನೆ ಎಂದರು.