ಸಿನಿವಾಣಿ

ನಿನ್ನೆ 'ಮೀಟ್​ ಮಾಡಣ ಇಲ್ಲ ಡೇಟ್ ಮಾಡಣ', ಇಂದು 'ನೋಡುತ.. ಸುಮ್ಮನೇ..'; ಮತ್ತೆ ಟಾಪ್​ಗೆ ಹೋದ ರಚಿತಾ ರಾಮ್​

ಬೆಂಗಳೂರು: ನಿನ್ನೆ ಎಲ್ಲ 'ಮೀಟ್ ಮಾಡಣ ಇಲ್ಲ ಡೇಟ್ ಮಾಡಣ' ಎಂದು ತರಹೇವಾರಿ ರೂಪದಲ್ಲಿ ಹೆಜ್ಜೆ ಹಾಕಿದ್ದ ಡಿಂಪಲ್ ಕ್ವೀನ್​ ನಟಿ ರಚಿತಾ ರಾಮ್ ಇಂದು 'ನೋಡುತ.. ಸುಮ್ಮನೆ..' ಟಾಪ್​ಗೆ ಹೋಗಿದ್ದಾರೆ. ಅರ್ಥಾತ್, ನಿನ್ನೆ 'ಏಕ್​ ಲವ್ ಯಾ' ಸಿನಿಮಾದಲ್ಲಿ ರಚಿತಾ ಹೆಜ್ಜೆ ಹಾಕಿರುವ 'ಮೀಟ್ ಮಾಡಣ ಎಲ್ಲ ಡೇಟ್ ಮಾಡಣ' ಹಾಡು ಬಿಡುಗಡೆ ಆಗಿದ್ದರೆ ಇಂದು ಅವರದೇ ಅಭಿನಯದ 'ಲವ್ ಯೂ ರಚ್ಚು' ಸಿನಿಮಾದ 'ನೋಡುತ ನನ್ನನೇ.. ಕೂತಿರು ಸುಮ್ಮನೇ..' ಸಾಂಗ್ ರಿಲೀಸ್ ಆಗಿದೆ.

ವಿಶೇಷವೆಂದರೆ ರಕ್ಷಿತಾ ಪ್ರೇಮ್ ನಿರ್ಮಾಣ, ಪ್ರೇಮ್​ ನಿರ್ದೇಶನ ಹಾಗೂ ರಾಣಾ ಅಭಿನಯದ 'ಏಕ್​ ಲವ್​ ಯಾ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ರಚಿತಾ ರಾಮ್​ ನಿನ್ನೆ ಬಿಡುಗಡೆಯಾದ ಐದನೇ ಸಾಂಗ್​ 'ಮೀಟ್ ಮಾಡಣ ಇಲ್ಲ ಡೇಟ್ ಮಾಡಣ'ದಲ್ಲಿ ವಿಭಿನ್ನ ಗೆಟಪ್​ಗಳಲ್ಲಿ ಕಾಣಸಿಕೊಂಡಿದ್ದಾರೆ.

ಅದರಲ್ಲೂ 'ಏಕ್​ ಲವ್ ಯಾ' ಸಿನಿಮಾದ ಮೂರನೇ ಹಾಡು ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಭಗವಂತ.. ಸಾಂಗ್​ನಲ್ಲೂ ರಚಿತಾ ರಾಮ್​ ಕಾಣಿಸಿಕೊಂಡಿದ್ದು, ಒಂದು ತಿಂಗಳ ಹಿಂದೆ ಬಿಡುಗಡೆ ಆಗಿದ್ದು, ಸುಮಾರು ಒಂದು ವಾರ ಯೂಟ್ಯೂಬ್​ ಮ್ಯೂಸಿಕ್​ನ ಟಾಪ್​ ಟ್ರೆಂಡಿಂಗ್​ನಲ್ಲಿತ್ತು. ಈ ಗೀತೆಗೆ ನಿರ್ದೇಶಕ ಪ್ರೇಮ್​ ಸಾಹಿತ್ಯ, ಅರ್ಜುನ್​ ಜನ್ಯ ಸಂಗೀತ ಸಂಯೋಜನೆ ಇದ್ದು, ಮಂಗ್ಲಿ ಹಾಗೂ ಕೈಲಾಶ್​ ಖೇರ್ ಹಾಡಿದ್ದರು. ಈ ಗೀತೆ ಈಗಾಗಲೇ 1 ಕೋಟಿಗೂ ಅಧಿಕ ವೀಕ್ಷಣೆ ಕಂಡಿದೆ.

ಇದೀಗ ನಿನ್ನೆ ಬಿಡುಗಡೆ ಆಗಿರುವ 'ಮೀಟ್ ಮಾಡಣ ಇಲ್ಲ ಡೇಟ್ ಮಾಡಣ' ಕೂಡ ಯೂಟ್ಯೂಬ್​ ಮ್ಯೂಸಿಕ್​ನ ಟ್ರೆಂಡಿಂಗ್​ನಲ್ಲಿದ್ದು, ಟಾಪ್​-3 ಸ್ಥಾನದಲ್ಲಿದ್ದು, ಒಂದೇ ದಿನದಲ್ಲಿ 15 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.

ಇನ್ನು ಗುರುದೇಶಪಾಂಡೆ ನಿರ್ಮಾಣ, ಎಸ್​. ಶಂಕರ್​ ರಾಜ್ ನಿರ್ದೇಶನದಲ್ಲಿ ನಟ ಅಜೇಯ್​ ರಾವ್​ಗೆ ರಚಿತಾ ಜೋಡಿಯಾಗಿ ಅಭಿನಯಿಸಿರುವ 'ಲವ್ ಯೂ ರಚ್ಚು' ಸಿನಿಮಾದ 'ನೋಡುತ ನನ್ನನೇ.. ಕೂತಿರು ಸುಮ್ಮನೇ..' ಸಾಂಗ್ ಇಂದು ಬಿಡುಗಡೆ ಆಗಿದೆ. ಇದಕ್ಕೆ ಆರ್. ಪುನೀತ್ ಆರ್ಯ ಸಾಹಿತ್ಯ, ಕದ್ರಿ ಮಣಿಕಾಂತ್ ಸಂಗೀತವಿದ್ದು, ಅನುರಾಧಾ ಭಟ್​ ಗಾಯನವಿದೆ.