Jayam Ravi : ಕಾಲಿವುಡ್ ಸ್ಟಾರ್ ಹೀರೋ ಜಯಂ ರವಿ (ರವಿ ಮೋಹನ್) ಮತ್ತು ಅವರ ಪತ್ನಿ ಆರತಿ ರವಿ ನಡುವಿನ ವಿಚ್ಛೇದನ ಪ್ರಕರಣ ತಮಿಳು ಚಿತ್ರರಂಗದಲ್ಲಿ ಬಿಸಿ ಚರ್ಚೆಯ ವಿಷಯವಾಗಿದೆ. 2009ರಲ್ಲಿ ವಿವಾಹವಾದ ಈ ದಂಪತಿ 18 ವರ್ಷಗಳ ದಾಂಪತ್ಯದ ನಂತರ ಬೇರೆಯಾಗಿದ್ದಾರೆ. ಇಬ್ಬರು ಬೇರ್ಪಡುತ್ತಿರುವುದಾಗಿ ಜಯಂ ರವಿ ಕಳೆದ ವರ್ಷ ಘೋಷಿಸಿದರು. ಆದಾಗ್ಯೂ, ಆರತಿ ಅವರು ಈ ಘೋಷಣೆಗೆ ವಿರುದ್ಧವಾಗಿದ್ದಾರೆ. ರವಿ ಅವರು ಏಕಪಕ್ಷೀಯವಾಗಿ ವಿಚ್ಛೇದನವನ್ನು ಘೋಷಿಸಿದ್ದಾರೆ. ಈಗಲೂ ನನ್ನ ಪತಿ ರವಿ ಅವರೇ ಎಂದು ಹೇಳುತ್ತಿದ್ದಾರೆ. ನನ್ನನ್ನು ಮಾಜಿ ಪತ್ನಿ ಎಂದೆಲ್ಲ ಬರೆಯಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದರ ಮಧ್ಯೆ ಆರತಿ ಮತ್ತು ಜಯಂ ರವಿ ನಡುವೆ ಪತ್ರದ ಸಮರ ಮುಂದುವರಿದಿದೆ.
ಇಬ್ಬರ ನಡುವಿನ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜಯಂ ರವಿ ಅವರು ನಮ್ಮನ್ನನು ಮನೆಯಿಂದ ಹೊರಗೆ ಹಾಕಿದ್ದಾರೆ. ನಮ್ಮ ಇಬ್ಬರು ಗಂಡು ಮಕ್ಕಳ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಆರತಿ ಆರೋಪ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಯಂ ರವಿ, ಆರತಿ ಮಕ್ಕಳನ್ನು ಬಳಸಿಕೊಂಡು ಸಹಾನುಭೂತಿ ಗಳಿಸುತ್ತಿದ್ದಾರೆ. ಮಕ್ಕಳನ್ನು ನೋಡಲು ಬಿಡುತ್ತಿಲ್ಲ ಎಂದು ಪ್ರತಿ ಆರೋಪ ಮಾಡಿದ್ದಾರೆ.
ಇದೀಗ ಇನ್ಸ್ಟಾಗ್ರಾಂನಲ್ಲಿ ಮತ್ತೊಂದು ಸುದೀರ್ಘ ಪತ್ರವನ್ನು ಹಂಚಿಕೊಂಡಿರುವ ಆರತಿ, ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ. ನಮ್ಮಿಬ್ಬರ ಬೇರ್ಪಡುವಿಕೆಗೆ ಹಣ ಅಥವಾ ಅಧಿಕಾರ ಕಾರಣವಲ್ಲ, ಬದಲಿಗೆ ಮೂರನೇ ವ್ಯಕ್ತಿ (ಗಾಯಕಿ ಕೆನಿಶಾ ಫ್ರಾನ್ಸಿಸ್ ಅವರೊಂದಿಗಿನ ರವಿ ಅವರ ಸಂಬಂಧ) ಎಂದು ನೇರವಾಗಿ ಆರೋಪಿಸಿದ್ದಾರೆ. ಈ ವಿಷಯದ ಬಗ್ಗೆ ತನ್ನ ಬಳಿ ಪುರಾವೆಗಳು ಸಹ ಇವೆ ಮತ್ತು ಇದ್ಯಾವುದೂ ಊಹಾಪೋಹವಲ್ಲ ಎಂದು ಆರತಿ ಹೇಳಿದ್ದಾರೆ. ಅಲ್ಲದೆ, ಜಯಂ ರವಿ ನನ್ನ ವಿರುದ್ಧ ಮಾಡಿರುವ ಆರೋಪಗಳೆಲ್ಲ ಸುಳ್ಳು ಎಂದಿದ್ದಾರೆ.
ಇನ್ನು ಇತ್ತೀಚೆಗೆ ಜಯಂ ರವಿ ಅವರು ಗಾಯಕಿ ಕೆನಿಶಾ ಜೊತೆ ಮದುವೆಯಲ್ಲಿ ಕಾಣಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಆರತಿ ಅವರು ತುಂಬಾ ಭಾವುಕರಾಗಿ ಪ್ರತಿಕ್ರಿಯಿಸಿದರು. 18 ವರ್ಷಗಳ ಕಾಲ ನನ್ನೊಂದಿಗಿದ್ದ ವ್ಯಕ್ತಿ ಈಗ ಸುಲಭವಾಗಿ ದೂರ ಸರಿದಿದ್ದಾರೆ. ಮಕ್ಕಳ ಜವಾಬ್ದಾರಿ ನನ್ನ ಹೆಗಲ ಮೇಲಿದೆ. ನಾನು ಮಾತನಾಡದಿರಲು ಕಾರಣ ನನ್ನ ಪ್ರಾಮಾಣಿಕತೆ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಯಂ ರವಿ, ಆರತಿ ನನ್ನ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿಯಂತ್ರಿಸುವ ಮೂಲಕ ಮತ್ತು ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ನನಗೆ ಕಿರುಕುಳ ನೀಡಿದರು. ನನ್ನ ಜೀವನವನ್ನು ನಿಯಂತ್ರಿಸುತ್ತಿದ್ದರು. ನನಗೆ ನನ್ನದೇಯಾದ ಸ್ವಾತಂತ್ರ್ಯ ಇರಲಿಲ್ಲ. ಅಪ್ಪ-ಅಮ್ಮನನ್ನು ನೋಡಲು ಸಹ ಬಿಡುತ್ತಿರಲಿಲ್ಲ. ನನ್ನ ಅವರ ಕೈಗೊಂಬೆಯನ್ನಾಗಿ ಮಾಡಿಕೊಂಡಿದ್ದರು. ಇದರಲ್ಲಿ ಆರತಿ ಅವರ ತಾಯಿಯ ಪಾತ್ರವೂ ಇದೆ. ನನ್ನ ಕಷ್ಟಕಾಲದಲ್ಲಿ ಕನಿಶಾ ಬೆಳಕಾದಳು. ಆಕೆ ನನ್ನ ಜೀವನಾಡಿ ಎಂದು ರವಿ ಹೇಳಿದ್ದಾರೆ.
ಆರತಿಯ ತಾಯಿ ಮತ್ತು ನಿರ್ಮಾಪಕಿ ಸುಜಾತಾ ವಿಜಯಕುಮಾರ್ ಕೂಡ ವಿವಾದಕ್ಕೆ ಸಿಲುಕಿದ್ದು, ಜಯಂ ರವಿ ಮಾಡಿದ ಆರೋಪಕ್ಕೆ ಪತ್ರದ ಮೂಲಕ ಪ್ರತಿಕ್ರಿಯಿಸಿದರು. ನಾನು ಜಯಂ ರವಿಯನ್ನು ಮಗನಂತೆ ನೋಡಿಕೊಂಡೆ ಮತ್ತು ಆತನಿಗಾಗಿ 100 ಕೋಟಿ ರೂ. ಸಾಲ ಕೂಡ ಮಾಡಿದೆ. ಆದರೆ, ರವಿ ನನ್ನ ವಿರುದ್ಧ ಸುಳ್ಳು ಹೇಳುತ್ತಿದ್ದಾರೆ. ಅವನ ಕುಟುಂಬದ ಈ ಸ್ಥಿತಿಗೆ ನಾನು ಕಾರಣವಲ್ಲ, ಯಾರಾದರೂ ಮಗಳ ಕುಟುಂಬವನ್ನು ಹಾಳು ಮಾಡುತ್ತಾರಾ ಎಂದು ಹೇಳಿದ್ದಾರೆ.
ವಿಚ್ಛೇದನ ಪ್ರಕರಣವು ಪ್ರಸ್ತುತ ಚೆನ್ನೈ ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಇದೆ, ಆದರೆ ಎರಡೂ ಗುಂಪುಗಳ ನಡುವಿನ ಮಾತಿನ ಯುದ್ಧ ಸಾಮಾಜಿಕ ಮಾಧ್ಯಮದಲ್ಲಿ ಮಾತ್ರ ಜೋರಾಗಿದೆ ಮತ್ತು ಮುಂದುವರಿದಿದೆ. (ಏಜೆನ್ಸೀಸ್)