ಅಂಕಣ

ಅರಿವಿಲ್ಲದ ನಾಯಕರ ಇಲ್ಲಸಲ್ಲದ ಹೋಲಿಕೆಗಳು; ಪ್ರೇಮಶೇಖರರ ಅಂಕಣ

‘ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸುವುದನ್ನು ಮುಂದುವರಿಸಿದರೆ ಹಿಂದಿನ ಸೋವಿಯೆತ್ ಯೂನಿಯನ್ ವಿಭಜನೆಗೊಂಡಂತೆ ಭಾರತವೂ ವಿಭಜನೆಗೊಳ್ಳುತ್ತದೆ.’ ಇದು ವರದಿಗಳ ಪ್ರಕಾರ ಶಿವಸೇನೆಯ ನಾಯಕ ಸಂಜಯ್ ರಾವುತ್​ರ ಹೇಳಿಕೆ. ಭಾರತ ಛಿದ್ರವಾಗುವ ಬಗ್ಗೆ ಮಾತಾಡಿದವರಲ್ಲಿ ರಾವುತ್ ಮೊದಲಿಗರೇನಲ್ಲ. 1947ರಲ್ಲಿ ತಾವು ಹೊರಹೋಗುವ ಮೊದಲು ಈ ದೇಶವನ್ನು ಹದಿನೇಳು ಸ್ವತಂತ್ರ ರಾಷ್ಟ್ರಗಳಾಗಿ ವಿಭಜಿಸಿ ಹೋಗುವಂತೆ ಭಾರತೀಯ ಕಮ್ಯೂನಿಸ್ಟ್ ಪಕ್ಷ ಬ್ರಿಟಿಷರಿಗೆ ಮನವಿ ಮಾಡಿಕೊಂಡಿತ್ತು. ಸದ್ಯ, ಈ ದೇಶದ ಐಕ್ಯತೆಯ ಬಗ್ಗೆ ನಮ್ಮ ಕಮ್ಯೂನಿಸ್ಟರಿಗಿಂತಲೂ ಬ್ರಿಟಿಷರಿಗೇ ಹೆಚ್ಚು ನಿಷ್ಠೆಯಿದ್ದಂತಿತ್ತು, ಅವರು ಉಪಖಂಡವನ್ನು ಎರಡೇ ದೇಶಗಳಾಗಿ ವಿಭಜಿಸಿ ಹೊರಟುಹೋದರು. ಆದಾಗ್ಯೂ, ಎರಡಿರುವಾಗಲೇ ಹೀಗೆ, ಇನ್ನು ಹದಿನೇಳಿದ್ದರೆ ನಮ್ಮ ಬದುಕು ಅದೇನಾಗುತ್ತಿತ್ತೋ.

ನಂತರದ ದಿನಗಳಲ್ಲಿ, ಖ್ಯಾತ ವಿದ್ವಾಂಸ ಸೆಲಿಗ್ ಹ್ಯಾರಿಸನ್ ಸೇರಿದಂತೆ ಹಲವಾರು ವಿದೇಶೀಯರು ಭಾರತ ವಿಭಜನೆಗೊಳ್ಳುವ ಬಗ್ಗೆ ಮಾತಾಡಿದ್ದರು. ಅಮೆರಿಕನ್ ಕೊರವಂಜಿ ಜೀನ್ ಡಿಕ್ಸನ್ ಅಂತೂ ಭಾರತ ಛಿದ್ರವಾಗುತ್ತದೆ ಎಂದು ಭವಿಷ್ಯ ನುಡಿದೇಬಿಟ್ಟಿದ್ದಳು. ಇಲ್ಲೂ ಕೆಲವು ಅತೃಪ್ತ ವ್ಯಕ್ತಿಗಳು, ರಾಜಕೀಯ ಪಕ್ಷಗಳು ಈ ದೇಶವನ್ನು ತುಂಡರಿಸುವ ಮಾತಾಡಿದ್ದವು. ಈ ವಿಷಯವನ್ನೆತ್ತಿಕೊಂಡು ತಮಿಳುನಾಡು ತಳಮಳವನ್ನು, ಅಸ್ಸಾಂ ಅಶಾಂತಿಯನ್ನು, ಪಂಜಾಬ್ ರಕ್ತಪಾತವನ್ನು ದಶಕದವರೆಗೆ ಅನುಭವಿಸಿದ್ದವು. ಆದರೀಗ ಸಂಜಯ್ ರಾವುತ್ ತಾವು ಕಾರ್ಯನಿರ್ವಾಹಕ ಸಂಪಾದಕರಾಗಿರುವ ಶಿವಸೇನೆಯ ಮುಖವಾಣಿ ‘ಸಾಮ್ನಾ’ದಲ್ಲಿನ ವಾರದ ಅಂಕಣ ‘ರೋಕ್​ಠೋಕ್’ನಲ್ಲಿ ಪ್ರಸ್ತಾಪಿಸಿರುವ ವಿಷಯ ಎರಡು ಆಯಾಮದ್ದು; ಒಂದು- ಸೋವಿಯೆತ್ ಯೂನಿಯನ್ ಜತೆ ಭಾರತದ ಹೋಲಿಕೆ, ಎರಡು- ಕೇಂದ್ರ-ರಾಜ್ಯ ಸಂಬಂಧಗಳು. ಇವೆರಡೂ ಅರ್ಥಹೀನ. ಸರಿಸುಮಾರು ಮೂರು ದಶಕಗಳ ಹಿಂದೆ ಘಟಿಸಿದ, ‘ಸೋವಿಯೆತ್ ಛಿದ್ರೀಕರಣ’, ‘ಡಿಸ್​ಇಂಟೀಗ್ರೇಷನ್ ಆಫ್ ಸೋವಿಯೆತ್ ಯೂನಿಯನ್’ ಎಂದು ಸಾಮಾನ್ಯವಾಗಿ ವರ್ಣಿತಗೊಳ್ಳುವ ಪ್ರಕ್ರಿಯೆ ವಾಸ್ತವವಾಗಿ ರಶಿಯನ್ ವಸಾಹತುಶಾಹಿಯ ಅಂತ್ಯ.

1991ರವರೆಗೆ ಸೋವಿಯೆತ್ ಯೂನಿಯನ್ ಎಂಬ ಹೆಸರಿನಲ್ಲಿ 2.24 ಕೋಟಿ ಚದರ ಕಿಲೋಮೀಟರ್ ವಿಸ್ತಾರವಾಗಿದ್ದು; ಇಂದೂ 1.70 ಕೋಟಿ ಚದರ ಕಿಲೋಮೀಟರ್ ವಿಸ್ತಾರದೊಂದಿಗೆ ಜಗತ್ತಿನ ಅತಿ ದೊಡ್ಡ ದೇಶವಾಗಿರುವ ರಶಿಯಾ ಮೊಳಕೆಯೊಡೆದದ್ದು 9 ಶತಮಾನಗಳ ಹಿಂದೆ, ಇಂದಿನ ಮಾಸ್ಕೋ ನಗರವಿರುವ ಪುಟ್ಟ ಪ್ರದೇಶದಲ್ಲಿ. ಮುಂದಿನ 3 ಶತಮಾನಗಳಲ್ಲಿ ಈಶಾನ್ಯ ಯೂರೋಪಿನ ಜನವಿಹೀನ ಪ್ರದೇಶಗಳೆಲ್ಲವನ್ನೂ ತಮ್ಮದಾಗಿಸಿಕೊಂಡ ರೂಸ್ ಜನಾಂಗ ರೊಸ್ಸೀಯ ರಾಜ್ಯವನ್ನು (ಅದನ್ನೇ ನಾವು ರಶಿಯಾ ಅನ್ನುವುದು!) ನಿರ್ವಿುಸಿಕೊಂಡರು. ನಂತರ ರಶಿಯಾ ಭೌಗೋಳಿಕವಾಗಿ ದಿಕ್ಕುದಿಕ್ಕಿಗೆ ಅಗಾಧವಾಗಿ ವಿಸ್ತಾರಗೊಳ್ಳತೊಡಗಿದ್ದು ರೋಮನೋವ್ ವಂಶದ ಝಾರ್ ಅಂದರೆ ಚಕ್ರವರ್ತಿಗಳ ಕಾಲದಲ್ಲಿ.

ರೋಮನೋವ್ ರಾಜಮನೆತನವನ್ನು ಸ್ಥಾಪಿಸಿದವನು ಮೊದಲನೆಯ ಮಿಖಾಯಿಲ್ ರೋಮನೋವ್, 1613ರಲ್ಲಿ. ನಂತರದ ದಶಕಗಳಲ್ಲಿ ವಿವಿಧ ರೋಮನೋವ್ ಚಕ್ರವರ್ತಿ ಮತ್ತು ಚಕ್ರವರ್ತಿನಿಯರು ರಶಿಯಾ ಭೌಗೋಳಿಕವಾಗಿ ದಿಕ್ಕುದಿಕ್ಕುಗಳಲ್ಲಿ ವಿಸ್ತರಿಸುವಂತೆ ಮಾಡಿದರು. 1762ರಲ್ಲಿ ಸಿಂಹಾಸನವೇರಿದ ಕ್ಯಾಥರೀನ್ ದ ಗ್ರೇಟ್ ಮತ್ತು ನಂತರದ ಮೊದಲನೆಯ ಅಲೆಕ್ಸಾಂಡರ್, ಮೊದಲನೆಯ ನಿಕೋಲಾಸ್, ಎರಡನೆಯ ಅಲೆಕ್ಸಾಂಡರ್ ಒಟ್ಟಿಗೆ ಕೇವಲ ಒಂದು ಶತಮಾನದ ಅವಧಿಯಲ್ಲಿ ರಶಿಯಾವನ್ನು ವಿಶ್ವದ ಅತ್ಯಂತ ಬೃಹತ್ತಾದ ಸಾಮ್ರಾಜ್ಯವನ್ನಾಗಿ ಬೆಳೆಸಿದರು. ಇದಾದದ್ದು ಎರಡು ದಿಕ್ಕುಗಳಲ್ಲಿ ಮತ್ತು ಎರಡು ಹಂತಗಳಲ್ಲಿ.

ಪಶ್ಚಿಮ ಯೂರೋಪಿನ ಸ್ಪೇಯ್್ನ ಪೋರ್ಚುಗಲ್, ಇಂಗ್ಲೆಂಡ್, ಫ್ರಾನ್ಸ್ ಇರಲಿ, ಪುಟ್ಟ ಹಾಲೆಂಡ್ ಮತ್ತು ಬೆಲ್ಜಿಯಂ ಸಹ ಬೃಹತ್ ನೌಕಾದಳಗಳನ್ನು ಕಟ್ಟಿ, ಬೃಹತ್ ವಸಾಹತುಶಾಹಿ ಸಾಮ್ರಾಜ್ಯಗಳನ್ನು ಕಟ್ಟಲು ಸಹಾಯಕವಾದದ್ದು ಅವುಗಳಿದ್ದ ಸಮಶೀತೋಷ್ಣ ವಲಯ ಮತ್ತು ಅದು ಒದಗಿಸಿದ್ದ ಸರ್ವಋತು ಬಂದರುಗಳು. ರಶಿಯಾ ಭೌಗೋಳಿಕವಾಗಿ ಅವೆಲ್ಲವುಗಳಿಗಿಂತಲೂ ವಿಸ್ತಾರವಾಗಿದ್ದರೂ ಅದರ ಸಾಗರತೀರವೆಲ್ಲವೂ ಉತ್ತರದ ಶೀತವಲಯದಲ್ಲಿದ್ದುದರಿಂದ ಒಂದಾದರೂ ಸರ್ವಋತು ಬಂದರಿನ ಯೋಗವಿರಲಿಲ್ಲ. ಆದಾಗ್ಯೂ, ರಶಿಯನ್ನರ ವಸಾಹತುಶಾಹಿ ಹಸಿವನ್ನು ಮೊದಲ ಹಂತದಲ್ಲಿ ತಣಿಸಿದ್ದು ಏಶಿಯಾದ ಉತ್ತರಾರ್ಧ ಭಾಗವಾದ ಬಹುವೈಶಾಲ್ಯ ಸೈಬೀರಿಯಾ. ರಶಿಯನ್ನರು ತಮ್ಮ ರಶಿಯಾಗಿಂತಲೂ ನಾಲ್ಕೈದು ಪಟ್ಟು ವಿಸ್ತಾರವಾಗಿದ್ದ ಸೈಬೀರಿಯಾವನ್ನು ನಿರಾಯಾಸವಾಗಿ ಆಕ್ರಮಿಸಿಕೊಂಡರು ಮತ್ತು ಅಲ್ಲೆಲ್ಲಾ ರಶಿಯನ್ ಜನರೇ ವಲಸೆಹೋಗಿ ನೆಲೆಸಿದ್ದರಿಂದ ಇಡೀ ಉತ್ತರ ಏಶಿಯಾ ಸದ್ದುಗದಲ್ಲವಿಲ್ಲದೇ ರಶಿಯಾಕರಣಗೊಂಡಿತು. ಪಶ್ಚಿಮ ಯೂರೋಪಿಯನ್ನರು ತಮ್ಮಿಂದ ಭೌಗೋಳಿಕವಾಗಿ ದೂರದೂರದಲ್ಲಿದ್ದ ಪ್ರದೇಶಗಳನ್ನು ವಸಾಹತುಗಳನ್ನಾಗಿ ಮಾಡಿಕೊಂಡರೆ ರಶಿಯನ್ನರು ತಮ್ಮ ನೆಲಕ್ಕೇ ಅಂಟಿದ್ದ ವಿಶಾಲ ಸೈಬೀರಿಯಾವನ್ನು ಹೀಗೆ ತಮ್ಮ ವಸಾಹತನ್ನಾಗಿಸಿಕೊಂಡರು. ಇದು ಮೊದಲ ಹಂತ.

ಸೈಬೀರಿಯಾ ಮತ್ತದರಾಚೆಗೂ ದಾಟಿ ಅಲಾಸ್ಕಾವನ್ನೂ ತಮ್ಮದಾಗಿಸಿಕೊಂಡ ಮೇಲೆ ರಶಿಯನ್ನರ ಕಣ್ಣು ಜಗತ್ತಿನ ಇತರೆಡೆಗಳತ್ತ ತಿರುಗಿತು. ಆದರೆ ಅಗತ್ಯವಾಗಿದ್ದ ನೌಕಾದಳವನ್ನು ನಿರ್ವಿುಸಲು ಸರ್ವಋತು ಬಂದರೊಂದೂ ಇರಲಿಲ್ಲ. ಆಗ ರಶಿಯನ್ನರ ಕಣ್ಣು ಹೊರಳಿದ್ದು ಕಪ್ಪುಸಮುದ್ರದ ಕಡೆಗೆ. ಅದರ ಅಧಿಪತ್ಯ ಹೊಂದಿದ್ದ ಅಟೋಮಾನ್ ತುರ್ಕೀಯರನ್ನು ಹತ್ತೊಂಬತ್ತನೇ ಶತಮಾನದ ಮಧ್ಯಭಾಗದ ಹೊತ್ತಿಗೆ ದಕ್ಷಿಣಕ್ಕೆ ತಳ್ಳಿ, ಕಪ್ಪುಸಮುದ್ರದ ಉತ್ತರ ಭಾಗವನ್ನು ವಶಕ್ಕೆ ತೆಗೆದುಕೊಳ್ಳುವು ದರಲ್ಲಿ ಯಶಸ್ವಿಯಾದ ರಶಿಯನ್ನರು ಮತ್ತೂ ದಕ್ಷಿಣಕ್ಕೆ ಮುಂದೊತ್ತಿ ಬಂದು ಪೂರ್ವ ಮೆಡಿಟರೇನಿಯನ್ ಸಮುದ್ರತೀರವನ್ನು ತಮ್ಮದಾಗಿಸಿಕೊಂಡು, ಅಲ್ಲಿ ಸರ್ವಋತು ಬಂದರುಗಳನ್ನು ಗಳಿಸಿಕೊಳ್ಳುವ ಹಂಚಿಕೆ ಹಾಕಿದರು. ಆದರೆ ಅವರ ಪ್ರಯತ್ನವನ್ನು ಅಪಾಯಕಾರಿಯಾಗಿ ಪರಿಗಣಿಸಿದ್ದು ಈಗಾಗಲೇ ತಳವೂರಿದ್ದ ಬ್ರಿಟಿಷರು, ಫ್ರೆಂಚರು. ಅವೆರಡು ಶಕ್ತಿಗಳೂ ತುರ್ಕಿಯ ಪರವಾಗಿ ನಿಂತು 1853-56ರ ಕ್ರಿಮಿಯಾ ಯುದ್ಧದಲ್ಲಿ ರಶಿಯನ್ನರನ್ನು ಸೋಲಿಸಿ ಹಿಂದಕ್ಕಟ್ಟಿದರು.

ಮೆಡಿಟರೇನಿಯನ್ ಸಮುದ್ರದ ಹಾದಿ ಮುಚ್ಚಿಹೋದಾಗ ರಶಿಯನ್ನರು ತಿರುಗಿದ್ದು ಪರ್ಶಿಯನ್ ಕೊಲ್ಲಿ ಮತ್ತು ಅರಬ್ಬೀ ಸಮುದ್ರದ ಕಡೆಗೆ. ಮುಂದಿನ ಮೂರೇ ದಶಕಗಳಲ್ಲಿ ಅವರು ಇಡೀ ಮಧ್ಯ ಏಶಿಯಾವನ್ನು ಆಕ್ರಮಿಸಿಕೊಂಡು ಇರಾನ್ ಮತ್ತು ಭಾರತದ ಬಾಗಿಲಿಗೆ ಬಂದು ನಿಂತರು. ಅಲ್ಲಿಯೂ ಅವರನ್ನು ತಡೆದದ್ದು ಬ್ರಿಟಿಷರು. ಒಂದುವೇಳೆ ಅಂದು ಭಾರತದಲ್ಲಿ ಬ್ರಿಟಿಷರು ಅಥವಾ ಅವರಷ್ಟೇ ಬಲಿಷ್ಠವಾದ ಬೇರಾವುದೇ ಆಡಳಿತ ಇಲ್ಲದಿದ್ದಲ್ಲಿ ಇಡೀ ಭಾರತವಲ್ಲದಿದ್ದರೂ ಕೊನೇಪಕ್ಷ ಪಶ್ಚಿಮ ಭಾರತ ಅಂದರೆ ಈಗಿನ ಪಾಕಿಸ್ತಾನ ರಶಿಯನ್ನರ ವಶವಾಗಿ ಕರಾಚಿ ಸರ್ವಋತು ಬಂದರು ಅವರದಾಗುತ್ತಿದ್ದುದರಲ್ಲಿ ಅನುಮಾನವೇ ಇಲ್ಲ. ಕರಾಚಿ ಮೂಲಕ ರಶಿಯನ್ನರು ಹಿಂದೂ ಮಹಾಸಾಗರದಲ್ಲಿ ನೌಕಾ ದಂಡಯಾತ್ರೆ ಆರಂಭಿಸಿದ್ದರೆ ಇಂದು ಜಗತ್ತು ಹೀಗಿರುವಂತೆ ಇರುತ್ತಿರಲಿಲ್ಲ.

1867ರಲ್ಲಿ ಅಲಾಸ್ಕಾವನ್ನು ಅಮೆರಿಕಾಗೆ ಮಾರಿದ ಮೇಲೆ ರಶಿಯಾ ಪೂರ್ವ ಮತ್ತು ಈಶಾನ್ಯ ಯೂರೋಪ್ ಹಾಗೂ ಉತ್ತರ ಏಶಿಯಾಗೆ ಸೀಮಿತಗೊಂಡರೂ ಅಂದು ಪಶ್ಚಿಮದಲ್ಲಿ ಬಾಲ್ಟಿಕ್ ಸಮುದ್ರ, ಪೂರ್ವದಲ್ಲಿ ಬೇರಿಂಗ್ ಜಲಸಂಧಿ, ಉತ್ತರದಲ್ಲಿ ಆರ್ಕ್​ಟಿಕ್ ಸಾಗರ, ದಕ್ಷಿಣದಲ್ಲಿ ಅಫ್ಘಾನಿಸ್ತಾನದವರೆಗೆ ವಿಸ್ತರಿಸಿತ್ತು ಅಂದರೆ ಅದರ ಪೂರ್ವ-ಪಶ್ಚಿಮ ಅಂಚುಗಳು ಅರ್ಧ ಭೂಮಂಡಳವನ್ನೇ ಆವರಿಸಿದ್ದವು! ಅದರಲ್ಲಿ ಸಾಕಷ್ಟು ಭಾಗ ರಶಿಯನ್ ಅಲ್ಲದ ಪ್ರದೇಶಗಳು, ಅಂದರೆ ರಶಿಯನ್ ವಸಾಹತುಗಳು.

ತನ್ನ ಆಡಳಿತವ್ಯವಸ್ಥೆಯಲ್ಲಿ ರಶಿಯನ್ ಅಲ್ಲದ ಪ್ರದೇಶಗಳನ್ನು ಹೊರಗಿಡುವ ವ್ಯಾವಹಾರಿಕತೆಯನ್ನು ಮೊದಲಿಗೆ ಗುರುತಿಸಿದ ನೇತಾರರೆೆಂದರೆ ಲೆನಿನ್. ಹೀಗಾಗಿಯೇ ಅವರು 1917ರ ಕ್ರಾಂತಿಯ ನಂತರ ಬಾಲ್ಟಿಕ್ ರಾಜ್ಯಗಳಾದ ಫಿನ್​ಲ್ಯಾಂಡ್, ಲಾತ್ವಿಯಾ, ಲಿಥುವೇನಿಯಾ ಮತ್ತು ಎಸ್ತೋನಿಯಾಗಳಿಗೆ ಸ್ವಾತಂತ್ರ್ಯ ನೀಡಿದ್ದು. ಉಗ್ರ ರಾಷ್ಟ್ರೀಯವಾದದ ಸುಳಿಯಲ್ಲಿ ಸಿಲುಕಿದ್ದ ಅವುಗಳನ್ನು ತಾನು ಕಟ್ಟಿದ ಸೋವಿಯೆತ್ ಯೂನಿಯನ್​ನೊಳಗೇ ಇಟ್ಟುಕೊಂಡರೆ ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತಾಗುತ್ತದೆ ಎಂದು ಲೆನಿನ್ ಅರಿತಿದ್ದರು. ಸೈಬೀರಿಯಾ ರಶಿಯನ್ ವಸಾಹತಾಗಿದ್ದರೂ ಜನಾಂಗೀಯ, ಭಾಷಿಕ ಹಾಗೂ ಧಾರ್ವಿುಕವಾಗಿ ರಶಿಯನ್ನೇ ಆಗಿಹೋಗಿದ್ದು ರಶಿಯಾದ ವಿಸ್ತರಣದಂತೇ ಇದ್ದುದರಿಂದ ಅದಕ್ಕೆ ಸ್ವಾತಂತ್ರ್ಯ ನೀಡಿ ಹೊರಗಿಡುವ ಅಗತ್ಯವೇ ಇರಲಿಲ್ಲ. ಮಧ್ಯ ಏಶಿಯಾದ್ದು ತುಸು ಬೇರೆ ಕಥೆ. ತುರ್ಕ್​ಮೆನಿಸ್ತಾನ್, ಕಜಾಖ್​ಸ್ಥಾನ್, ತಾಜಿಕಿಸ್ತಾನ್, ಉಜ್ಬೇಕಿಸ್ತಾನ್ ಹಾಗೂ ಕಿರ್ಘೀಜಿಯಾ (ಇಂದಿನ ರ್ಕಿಘಿಸ್ತಾನ್) ವಸಾಹತುಗಳ ಜನತೆ ರಶಿಯನ್ನರಂತೆ ಸ್ಲಾವ್ ಜನಾಂಗದವರಲ್ಲವಾಗಿದ್ದರೂ, ಅವರ ಧರ್ಮ ಇಸ್ಲಾಮ್ ಆಗಿದ್ದರೂ ಯೂರೋಪಿನಲ್ಲಿ ಎದ್ದಿದ್ದ ರಾಷ್ಟ್ರೀಯವಾದದ ಅಲೆ ಇನ್ನೂ ಬಂದಿರಲಿಲ್ಲ. ಈ ಕಾರಣದಿಂದಾಗಿ ಅವುಗಳನ್ನು ಸೋವಿಯೆತ್ ಯೂನಿಯನ್​ನೊಳಗೇ ಇರಿಸಿಕೊಳ್ಳುವುದರಲ್ಲಿ ಲೆನಿನ್​ಗೆ ಯಾವ ಆಪತ್ತೂ ಕಾಣಲಿಲ್ಲ.

ಲೆನಿನ್​ರ ವಿವೇಕ ಸ್ಟಾಲಿನ್​ಗಿರಲಿಲ್ಲ. ಎರಡನೆಯ ಮಹಾಯುದ್ಧ ಆರಂಭವಾಗುತ್ತಿದ್ದಂತೇ ಅವರು ಲಾತ್ವಿಯಾ, ಲಿಥುವೇನಿಯಾ ಮತ್ತು ಎಸ್ತೋನಿಯಾಗಳನ್ನು ಆಕ್ರಮಿಸಿ ಕೊಂಡು ಸೋವಿಯೆತ್ ಯೂನಿಯನ್​ಗೆ ಸೇರಿಸಿಕೊಂಡರು. ಅಲ್ಲಿನ ಜನರು ರಶಿಯನ್ ಆಡಳಿತವನ್ನು ಎಂದೂ ಮನಸಾರೆ ಒಪ್ಪಿಕೊಳ್ಳಲಿಲ್ಲ. ನಾಲ್ಕೂವರೆ ದಶಕಗಳ ನಂತರ ಮಿಖಾಯಿಲ್ ಗೋರ್ಬಚೆವ್ ಕಾಲದಲ್ಲಿ ಕಮ್ಯೂನಿಸ್ಟ್ ನಿರಂಕುಶಾಧಿಕಾರ ಸಡಿಲಾಗಿ ಬದಲಾವಣೆಯ ಗಾಳಿ ಬೀಸತೊಡಗಿದ ಕೂಡಲೇ ಮೊದಲಿಗೆ ಸ್ವಾತಂತ್ರ್ಯದ ರಣಕಹಳೆ ಮೊಳಗಿಸಿದ್ದೇ ಅಲ್ಲಿನ ಜನತೆ. ಸೋವಿಯೆತ್ ಛಿದ್ರೀಕರಣ ಆರಂಭವಾದ್ದೇ ಲಿಥುವೇನಿಯಾದಿಂದ. ಅಲ್ಲಿ ಉದ್ಭವವಾದ ಜನನಾಯಕ ವೈತಾತಸ್ ಲ್ಯಾಂದ್ಸ್​ಬರ್ಗಿಸ್ ಜತೆ ಕೈಜೋಡಿಸಿದ್ದು ಲಿಥುವೇನಿಯನ್ ಕಮ್ಯೂನಿಸ್ಟ್ ಪಾರ್ಟಿಯ ನಾಯಕಿ ಕಾಜಿಮಿರಾ ಫ್ರುನ್ಸ್​ಕೇನೇ.

ವಾಸ್ತವವಾಗಿ ದ್ವಿತೀಯ ಜಾಗತಿಕ ಯುದ್ಧದ ನಂತರ ಪಶ್ಚಿಮ ಯೂರೋಪಿಯನ್ ದೇಶಗಳು ವಸಾಹತುಗಳನ್ನು ಕಳೆದುಕೊಳ್ಳುವ ಪ್ರಕ್ರಿಯೆ ಆರಂಭವಾಗಿ ಜಾಗತಿಕವಾಗಿ ವಸಾಹತುವಾದದ ಅಂತ್ಯವಾಗತೊಡಗಿದಂತೇ ರಶಿಯನ್ ವಸಾಹತುವಾದದ ಅಂತ್ಯವೂ ಆಗಬೇಕಾಗಿತ್ತು. ಆದರೆ ರಶಿಯನ್ ವಸಾಹತುಗಳು ರಶಿಯಾಗೆ ಭೌಗೋಳಿಕವಾಗಿ ಅಂಟಿಕೊಂಡಿದ್ದ ಕಾರಣ, ಸೋವಿಯೆತ್ ಯೂನಿಯನ್​ನಲ್ಲಿ ನಿರಂಕುಶಾಧಿಕಾರವಿದ್ದ ಕಾರಣ ಒಕ್ಕೂಟದಿಂದ ಹೊರಹೋಗಲು ಸಾಧ್ಯವಿರಲಿಲ್ಲ, ಆ ಸ್ವಾತಂತ್ರ್ಯವನ್ನು ಸೋವಿಯೆತ್ ಸಂವಿಧಾನ ಕೊಟ್ಟಿದ್ದರೂ ಸಹ.

ಇಷ್ಟಾಗಿಯೂ, ದ್ವಿತೀಯ ಜಾಗತಿಕ ಸಮರೋತ್ತರ ಕಾಲದಲ್ಲಿ ಮಧ್ಯ ಏಶಿಯಾದ ವಸಾಹತುಗಳಲ್ಲೂ ರಾಷ್ಟ್ರೀಯತಾ ಮನೋಭಾವ ಬೆಳೆಯತೊಡಗಿತು. 1979ರಲ್ಲಿ ಇರಾನ್​ನಲ್ಲಿ ಇಸ್ಲಾಮಿಕ್ ಕ್ರಾಂತಿ ಘಟಿಸಿದ ಮೇಲಂತೂ ಅದಕ್ಕೆ ಮತ್ತಷ್ಟು ಕಸು ತುಂಬಿಕೊಂಡಿತು. ಆದರೂ, ಅದಕ್ಕೆ ಕಮ್ಯೂನಿಸ್ಟ್ ಸತ್ತೆಯ ರಾಜಕೀಯ ನಿರಂಕುಶಾಧಿಕಾರ ಹಾಗೂ ಸೇನಾ ಸಾಮರ್ಥ್ಯಕ್ಕೆ ಸವಾಲೊಡ್ಡಿ ಗೆಲ್ಲುವಷ್ಟು ಚೈತನ್ಯವಿರಲಿಲ್ಲ. ಅಂತಿಮವಾಗಿ ರಶಿಯನ್ನರನ್ನು ಕಂಗೆಡಿಸಿದ್ದು ಮಧ್ಯ ಏಶಿಯಾದ ಜನಸಂಖ್ಯಾ ಸ್ಪೋಟ. ಅದು ಹಾಗೇ ಮುಂದುವರಿದರೆ ಸೋವಿಯೆತ್ ಯೂನಿಯನ್​ನಲ್ಲಿ ಕೆಲವೇ ದಶಕಗಳಲ್ಲಿ ರಶಿಯನ್ನರಿಗಿಂತಲೂ ಮಧ್ಯ ಏಶಿಯನ್ ಮುಸ್ಲಿಮರು ಅಧಿಕವಾಗುತ್ತಾರೆ ಎಂಬಂತಹ ವರದಿಗಳು 1980ರ ದಶಕದ ಆರಂಭದಲ್ಲೇ ಬರತೊಡಗಿದ್ದವು! ಕಮ್ಯೂನಿಸ್ಟ್ ಸತ್ತೆ ಕುಸಿದು, ತನ್ನ ಕೈಗೆ ಅಧಿಕಾರ ಬರುತ್ತಿದ್ದಂತೇ ರಶಿಯನ್ ನಾಯಕ ಬೋರಿಸ್ ಯೆಲ್ತ್​ಸಿನ್ ಮಧ್ಯ ಏಶಿಯಾದ ಆ ವಸಾಹತುಗಳನ್ನು ಹೊರಗಿಡದೇ ಗತ್ಯಂತರವಿಲ್ಲ ಎಂದರಿತು ಅದರಂತೆ ಅವುಗಳಿಗೆ ಸ್ವಾತಂತ್ರ್ಯ ನೀಡಿದರು.

ಹೀಗೆ ರೋಮನೋವ್ ಝಾರ್​ಗಳ ಮಾಜಿ ರಶಿಯನ್ ಸಾಮ್ರಾಜ್ಯದ, ರಶಿಯನ್ ಪ್ರಾಬಲ್ಯದ ಸೋವಿಯೆತ್ ಕಮ್ಯೂನಿಸ್ಟ್ ಸತ್ತೆಯ ಆಡಳಿತದ ಸೋವಿಯೆತ್ ಯೂನಿಯನ್​ನ ರಶಿಯೇತರ ಪ್ರದೇಶಗಳು ಅಂದರೆ ರಶಿಯಾದ ವಸಾಹತುಗಳು 1990-91ರಲ್ಲಿ ಸ್ವಾತಂತ್ರ್ಯ ಗಳಿಸಿದವು. ಪಶ್ಚಿಮ ಯೂರೋಪಿನ ವಸಾಹತುಗಳು 1950-60ರ ದಶಕಗಳಲ್ಲಿ ಸ್ವಾತಂತ್ರ್ಯ ಗಳಿಸಿದರೆ ರಶಿಯನ್ ವಸಾಹತುಗಳು ಭೌಗೋಳಿಕ, ರಾಜಕೀಯ, ಸೇನಾ ಹಾಗೂ ವೈಚಾರಿಕ ಕಾರಣಗಳಿಂದಾಗಿ 1990ರ ದಶಕದವರೆಗೆ ಕಾಯಬೇಕಾಯಿತು ಅಷ್ಟೇ. ಇಂದು ದಾಘಸ್ತಾನ್, ಚೆಚೆನ್ಯಾ ಸೇರಿದಂತೆ ಕೆಲವು ಪುಟ್ಟ ವಸಾಹತುಗಳ ಹೊರತಾಗಿ ರಶಿಯಾ ಕಳೆದ ಒಂದೂವರೆ ಶತಮಾನದಲ್ಲಿ ಗಳಿಸಿಕೊಂಡಿದ್ದ ತನ್ನೆಲ್ಲಾ ವಸಾಹತುಗಳನ್ನೂ ಕಳೆದುಕೊಂಡು ಏಕ ಜನಾಂಗದ ರಾಷ್ಟ್ರವಾಗಿದೆ, ಅಷ್ಟರ ಮಟ್ಟಿಗೆ ಸದೃಢವಾಗಿದೆ.

ಈ ಪ್ರಕ್ರಿಯೆಯನ್ನು ಭಾರತದ ಜತೆ ಹೋಲಿಸುವುದಾದರೂ ಹೇಗೆ? ಇಲ್ಲಿ ಭಾರತದ ವಸಾಹತುಗಳು ಯಾವುದಿವೆ? ಭಾರತವೇನಾದರೂ ಛಿದ್ರವಾದರೆ ಅದು ಭಾರತದ್ದೇ ಅಂಗಗಳನ್ನು ಕತ್ತರಿಸಿದಂತಲ್ಲವೇ? (1947ರಲ್ಲಿ ಅದು ಒಮ್ಮೆ ಆಗಿಹೋಗಿದೆ) ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ತಿಕ್ಕಾಟ ಯಾವುದೇ ಪಕ್ಷದ ಸರ್ಕಾರವಿದ್ದರೂ ನಡೆಯುತ್ತಲೇ ಇದೆ; ಹಾಗೇ ಶಮನಗೊಳ್ಳುತ್ತಲೂ ಇದೆ. ರಾಜಕೀಯ ಪಕ್ಷವೊಂದರ ನಾಯಕರು ಇತಿಹಾಸವನ್ನು ಅರಿಯದೇ, ವರ್ತಮಾನವನ್ನು ಅರ್ಥಮಾಡಿಕೊಳ್ಳದೇ, ಭವಿಷ್ಯವನ್ನು ಮುಂಗಾಣದೇ ಮಾತಾಡುವುದು ಬೇಜವಾಬ್ದಾರಿಯಷ್ಟೇ ಅಲ್ಲ, ಅಕ್ಷಮ್ಯ ಸಹ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)