

ಕೋಲ್ಕತ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲ ತಿಂಗಳುಗಳು ಬಾಕಿಯಿರುವಾಗಲೇ ಟಿಎಂಸಿ ಮತ್ತು ಬಿಜೆಪಿ ಪಕ್ಷಗಳು ಭರ್ಜರಿ ಪ್ರಚಾರ ಆರಂಭಿಸಿವೆ. ರಾಜ್ಯದಲ್ಲಿ 200 ಸೀಟು ಗೆದ್ದೇ ಗೆಲ್ಲುವುದಾಗಿ ಬಿಜೆಪಿ ಹೇಳಿದ್ದರೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿಗೆ ಸವಾಲೊಂದನ್ನು ಎಸೆದಿದ್ದಾರೆ.
ಬಿಜೆಪಿ ನಮ್ಮ ಪಶ್ಚಿಮ ಬಂಗಾಳದ 294 ಸೀಟುಗಳ ಪೈಕಿ 200 ಸೀಟು ಗೆಲ್ಲುವುದಾಗಿ ಹೇಳಿಕೊಂಡಿದೆ. 200 ಸೀಟು ಬದಿಗಿರಲಿ ಮೊದಲು ಅವರು 30 ಸೀಟು ಗೆದ್ದು ತೋರಿಸಲಿ ಎಂದು ಅವರು ಹೇಳಿದ್ದಾರೆ. ಬಿಜೆಪಿ ಹೊರಗಿನ ಪಕ್ಷ. ಇದೀಗ ಅವರು ಹೊರಗಿನ ಪಕ್ಷಗಳನ್ನು ಕರೆದುಕೊಂಡು ನಮ್ಮ ರಾಜ್ಯ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇಲ್ಲಿನ ಜನ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಹಲವು ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಆದರೆ ಅಲ್ಲಿ ಏನು ಅಭಿವೃದ್ಧಿ ಆಗಿದೆ. ದೇಶದ ರೈತರು ಬೀದಿಯಲ್ಲಿ ನಿಂತು ಹೋರಾಟ ನಡೆಸುತ್ತಿದ್ದಾರೆ. ಬಿಜೆಪಿ ನಮ್ಮ ಟಿಎಂಸಿಯ ಶಾಸಕರನ್ನು ಕೊಂಡುಕೊಳ್ಳುವುದರಲ್ಲಿ ನಿರತವಾಗಿದೆ. ನಮ್ಮ ಶಾಸಕರನ್ನು ಅವರ ಬಳಿ ಸೆಳೆದುಕೊಂಡ ಮಾತ್ರಕ್ಕೆ ಗೆದ್ದರೆಂದು ಅವರು ಭಾವಿಸಿದ್ದಾರೆ. ಆದರೆ ನಮ್ಮ ಪಕ್ಷ ಇನ್ನೂ ಶಕ್ತಿಯುತವಾಗುತ್ತಲೇ ಇರುತ್ತದೆ ಎಂದು ಮಮತಾ ಬ್ಯಾನರ್ಜಿ ನುಡಿದಿದ್ದಾರೆ. ಮಂಗಳವಾರದಂದು ಬೋಲ್ಪುರದಲ್ಲಿ ನಡೆದ ಪಕ್ಷದ ಪ್ರಚಾರ ಮೆರವಣಿಗೆಯಲ್ಲಿ ಭಾಗವಹಿಸಿದ ಅವರು ಈ ಮಾತನ್ನು ಹೇಳಿದ್ದಾರೆ. (ಏಜೆನ್ಸೀಸ್)