ಅಂಕಣ

ಆ ಕ್ಷಣ | ರಾಮಾಪುರ ಪೊಲೀಸ್ ಠಾಣೆ ಮೇಲೆ ಭೀಕರ ದಾಳಿ

1992ರ ಮೇ ತಿಂಗಳ 19-20ರ ನಡುವಿನ ರಾತ್ರಿ. ಇಂದಿನ ಚಾಮರಾಜನಗರ ಜಿಲ್ಲೆಯ ರಾಮಾಪುರ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ ಸುಬ್ಬಣ್ಣ, ಕಾನ್​ಸ್ಟೆಬಲ್ ಬಸವರಾಜು ಹಾಗೂ ಠಾಣೆಯ ಕಾವಲುಗಾರ ರಾಚಪ್ಪ ಕರ್ತವ್ಯದ ಮೇಲಿದ್ದು, ನರಹಂತಕ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯ ಪ್ರಯುಕ್ತ ಆ ಠಾಣೆಗೆ ಸಶಸ್ತ್ರ ಮೀಸಲು ಪಡೆಯ ತುಕಡಿಯೊಂದನ್ನು ಕೊಡಲಾಗಿತ್ತು. ಆ ಸಿಬ್ಬಂದಿಯೂ ಠಾಣೆಯ ಹೊರಗಿನ ವರಾಂಡಾದಲ್ಲಿ ಮಲಗಿದ್ದರು. ಆ ಕರಾಳ ರಾತ್ರಿ ವೀರಪ್ಪನ್ ಪೊಲೀಸ್ ಠಾಣೆಯ ಮೇಲೆಯೇ ಹಠಾತ್ತಾಗಿ ದಾಳಿ ಮಾಡಿದ. ದಾಳಿ ಹೇಗಾಯಿತೆಂದು ಪ್ರತ್ಯಕ್ಷದರ್ಶಿ ನಾಗೇಶ್ ನೆನಪಿಸಿಕೊಂಡದ್ದು ಹೀಗೆ: ‘ಮೇ 20ರ ಬೆಳಗಿನ ಜಾವ ಠಾಣೆಯ ಸೆಂಟ್ರಿ ಕರ್ತವ್ಯ ಮಾಡಬೇಕಾದ ಕಾರಣ ನಾನು ಠಾಣೆಯ ಮುಂದಿರುವ ವರಾಂಡದಲ್ಲಿ ಮಲಗಿದ್ದೆ. ನನ್ನ ಪಕ್ಕದಲ್ಲಿಯೇ ಮೈಸೂರಿನ ಮೀಸಲು ಪಡೆಯ ಮೂವರು ಕಾನ್​ಸ್ಟೆಬಲ್​ಗಳು ಮತ್ತು ಠಾಣೆಯ ಸಿದ್ದರಾಜು ಮಲಗಿದ್ದರು. ಕಾವಲುಗಾರ ರಾಚಪ್ಪ ಸ್ಟೂಲ್ ಮೇಲೆ ಕುಳಿತಿದ್ದ. ರಾತ್ರಿ ಸುಮಾರು 1 ಗಂಟೆಯ ವೇಳೆಗೆ ಠಾಣೆಯ ಎಡಭಾಗದಿಂದ ಗುಂಡಿನ ಶಬ್ದ ಕೇಳಿ ನಾನು ಎಚ್ಚರಗೊಂಡು ನೋಡಿದಾಗ ರಾಚಪ್ಪನಿಗೆ ಗುಂಡೊಂದು ಬಡಿದಿತ್ತು. ಅವನು ಗಾಬರಿಯಿಂದ ಮೇಲಕ್ಕೆದ್ದು ನಿಂತ. ಕೂಡಲೇ ಮೂರು ನಾಲ್ಕು ಜನರು ಅವನತ್ತ ಓಡಿ ಬಂದು ಬಂದೂಕುಗಳ ಹಿಂಭಾಗದಿಂದ ತಲೆಗೆ ಹೊಡೆದರು. ಏನಾಗುತ್ತಿದೆ ಅನ್ನುವಷ್ಟರಲ್ಲಿ ನಮ್ಮ ಪೊಲೀಸ್ ಠಾಣೆಯನ್ನು ಮೂರು ಕಡೆಗಳಿಂದ ಮೂರು ತಂಡಗಳು ಸುತ್ತುವರಿದವು. ನಾನು ಮೇಲೇಳಲು ಹೊರಟಾಗ ಯಾರೋ ಗುಂಡು ಹಾರಿಸಿದರು. ನನ್ನ ಹೊಟ್ಟೆ ಮತ್ತು ಎಡ ತೋಳಿನ ಮೇಲೆ ಗಾಯವಾಗಿ ಕೆಳಗೆ ಬಿದ್ದೆ. ಆದರೂ ಧೈರ್ಯಮಾಡಿ ಠಾಣೆಯ ಎದುರು ನಿಂತಿದ್ದ ಮೋಟರ್ ಸೈಕಲ್ ಬಳಿಗೆ ತೆವಳುತ್ತಾ ಹೋಗಿ ಅದರ ಹಿಂದೆ ಅಡಗಿಕೊಂಡೆ. ಅಷ್ಟರಲ್ಲಿ ಕೆಲವು ದಾಳಿಕೋರರು ಮುಚ್ಚಲಾಗಿದ್ದ ಪೊಲೀಸ್ ಠಾಣೆಯ ದ್ವಾರ ಒಡೆಯಲು ಪ್ರಯತ್ನಿಸಿದರು. ಒಳಗಿದ್ದ ಸಿಬ್ಬಂದಿ ಗುಂಡಿನ ಶಬ್ದ್ದ ಕೇಳಿದ ಕೂಡಲೇ ಠಾಣೆಯ ಮುಖ್ಯದ್ವಾರವನ್ನು ಮುಚ್ಚಿ ಒಳಗಿನಿಂದ ಅಗುಳಿ ಹಾಕಿಕೊಂಡಿದ್ದರು. ದಾಳಿಕೋರರು ಅದನ್ನು ಒಡೆಯಲು ಸಾಧ್ಯವಾಗದೆ ಗುಂಡು ಹಾರಿಸಿದರು. ಆದರೂ ಅದನ್ನು ತೆರೆಯಲಾಗಲಿಲ್ಲ.

ನಂತರ ದಾಳಿಕೋರರು ವರಾಂಡಾದಲ್ಲಿ ಮಲಗಿದ್ದವರೆಲ್ಲರಿಗೂ ಎದೆಯ ಮೇಲೆ ಬಂದೂಕಿನ ನಳಿಕೆಯನ್ನಿಟ್ಟು ಗುಂಡು ಹಾರಿಸತೊಡಗಿದರು. ಆಗ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಾನ್​ಸ್ಟೆಬಲ್ ಇಳಂಗೋವನ್ ತಾನು ಬಚಾವಾಗಲು ಮೈಮೇಲಿದ್ದ ಹೊದಿಕೆಯನ್ನು ಮುಖಕ್ಕೆ ಎಳೆದುಕೊಂಡ. ಅವನ ಮೇಲೆ ಕೂಡಲೇ ಗುಂಡು ಹಾರಿಸಿದರು. ಠಾಣೆಯ ಮುಂದಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ವಾಹನದಲ್ಲಿ ಚಾಲಕ ಮತ್ತು ಒಬ್ಬ ಕಾನ್​ಸ್ಟೆಬಲ್ ಮಲಗಿದ್ದರು. ಠಾಣೆಯ ಮೇಲೆ ದಾಳಿಯಾದದ್ದನ್ನು ಕಂಡ ಕಾನ್​ಸ್ಟೆಬಲ್ ನಾಗರಾಜ್ ವ್ಯಾನಿನ ಬಾಗಿಲು ತೆಗೆದು ಓಡಲು ಹೊರಟ. ಆಗ ಅವನತ್ತ ಯಾರೋ ಗುಂಡು ಹಾರಿಸಿದಾಗ ಕೆಳಗೆ ಬಿದ್ದ. ಪೊಲೀಸ್ ಠಾಣೆಯ ಒಳಗಿದ್ದ ಕಾನ್​ಸ್ಟೆಬಲ್ ಬಸವರಾಜು ವೀರಪ್ಪನ್ ತಂಡದಿಂದ ದಾಳಿಯಾಗಿದೆ ಎಂದು ವೈರ್​ಲೆಸ್​ನಲ್ಲಿ ಸಂಬಂಧಪಟ್ಟವರಿಗೆ ಮಾಹಿತಿಕೊಟ್ಟ.

ಅರ್ಧಗಂಟೆಯ ನಂತರ ಬೇರೆಡೆಯಿಂದ ಪೊಲೀಸರು ಬಂದು ನಮ್ಮನ್ನು ರಕ್ಷಿಸಿದರು. ನನ್ನ ದೇಹದಲ್ಲಿ ಆರು ಗುಂಡುಗಳು ಬಿದ್ದಿದ್ದವು. ನನಗೆ ಐದು ಬಾರಿ ಶಸ್ತ್ರಚಿಕಿತ್ಸೆ ಮಾಡಿದರು. ಈಗಲೂ ನನ್ನ ಮೈಯಲ್ಲಿ ಎರಡು ಗುಂಡುಗಳು ಇವೆ.’ ಅಂದು ರಾಮಾಪುರ ಠಾಣೆಯ ಪಿ.ಎಸ್.ಐ ಆಗಿದ್ದ ರಾಚಪ್ಪ ಠಾಣೆಯ ಮುಂದೆಯೇ ಇದ್ದ ತಮ್ಮ ಮನೆಯಲ್ಲಿ ಮಲಗಿದ್ದರು. ಘಟನೆಯ ಬಗ್ಗೆ ಅವರು ಹೇಳಿದ್ದು ಹೀಗೆ: ‘ರಾತ್ರಿ ಸುಮಾರು 1 ಗಂಟೆಯ ವೇಳೆಗೆ ಗುಂಡುಗಳು ಹಾರಿದ ಶಬ್ದಗಳು ಕೇಳಿದಾಗ ನಾನು ಎಚ್ಚರಗೊಂಡು ಬೆಡ್​ರೂಂನ ದೀಪ ಹಾಕಿದೆ. ತತ್​ಕ್ಷಣ ನನ್ನ ರೂಮಿನತ್ತ ಕೆಲವು ಗುಂಡುಗಳು ಹಾರಿ ಬಂದವು. ನಾನು ಕೂಡಲೇ ದೀಪವನ್ನು ಆರಿಸಿ ಕಿಟಕಿಯಿಂದ ಹೊರಗೆ ನೋಡಿದಾಗ ವೀರಪ್ಪನ್ ತಂಡದ ಸುಮಾರು 40 ಜನರು ಅರ್ಧಚಂದ್ರಾಕಾರದಲ್ಲಿ ಠಾಣೆಯನ್ನು ಸುತ್ತುವರಿದಿದ್ದರು. ಕೆಲವರು ಠಾಣೆಯ ಹಜಾರದಲ್ಲಿ ಮಲಗಿದ್ದ ಅಷ್ಟೂ ಪೊಲೀಸ್ ಪೇದೆಗಳ ಮೇಲೆ ಗುಂಡು ಹಾರಿಸಿ ಠಾಣೆಯ ಬಾಗಿಲನ್ನು ತೆರೆಯಲು ಪ್ರಯತ್ನಿಸುತ್ತಿದ್ದರು. ಆದರೆ ಸಾಧ್ಯವಾಗಲಿಲ್ಲ. ಏತನ್ಮಧ್ಯೆ ಒಳಗಿದ್ದ ಪೊಲೀಸರು ಗುಂಡು ಹಾರಿಸಲು ಪ್ರಾರಂಭಿಸಿದರು. ಆಗ ವೀರಪ್ಪನ್ ತಂಡ ವಿಚಲಿತವಾಯಿತು. ಠಾಣೆಯ ಒಳಗಿದ್ದ ಎಎಸ್​ಐ ಸುಬ್ಬಣ್ಣ ವೈರ್​ಲೆಸ್ ಮೂಲಕ ‘ವೀರಪ್ಪನ್ ತಂಡವು ಠಾಣೆಯ ಮೇಲೆ ಆಕ್ರಮಣ ಮಾಡಿದೆ, ಕೂಡಲೇ ಬನ್ನಿ’ ಎಂದು ಗಾಬರಿಯಿಂದ ಹೇಳತೊಡಗಿದ್ದು ನನಗೂ ಕೇಳಿಸಿತು. ಆನಂತರ ವೀರಪ್ಪನ್ ತಂಡದ ಕೆಲವರು ಠಾಣೆಯ ಹಿಂಬದಿಗಿದ್ದ ರೂಮಿಗೆ ನುಗ್ಗಿ ಅದರಲ್ಲಿ ನಾವು ಜಪ್ತಿ ಮಾಡಿಟ್ಟಿದ್ದ ಅಕ್ರಮ ಶಸ್ತ್ರಾಸ್ತ್ರಗಳಾದ ಹಲವಾರು ಡಬಲ್ ಬ್ಯಾರಲ್ ಕೋವಿಗಳನ್ನು ದೋಚಿಕೊಂಡು ಹೋದರು.

ಸುಮಾರು ಹತ್ತು ಹದಿನೈದು ನಿಮಿಷದಲ್ಲಿ ಅವರು ಕೆಲಸವನ್ನು ಮುಗಿಸಿ ಹೊರಟು ಹೋದರು. ಏತನ್ಮಧ್ಯೆ ನನ್ನ ಮನೆಗೆ ಬಂದು ಆಕ್ರಮಣ ಮಾಡಬಹುದು ಎಂಬ ಭೀತಿಯಿಂದ ನಾನು ಮನೆಯಿಂದ ಹೊರಬಂದು ಕಾಂಪೌಂಡನ್ನು ಹಾರಿ ಪೊದೆಯೊಂದರ ಹಿಂದೆ ಅವಿತು ಕುಳಿತಿದ್ದೆ. ವೀರಪ್ಪನ್ ತಂಡ ಹೋದ ನಂತರ ಪೊಲೀಸ್ ಠಾಣೆಗೆ ಹೋದೆ. ಠಾಣೆಯ ವರಾಂಡದಲ್ಲಿ ಮಲಗಿದ್ದ ಬಹುತೇಕರು ಸತ್ತಿದ್ದರು.’

ಪೊಲೀಸ್ ಠಾಣೆಯ ಒಳಗಡೆಯಿದ್ದ ಎ.ಎಸ್.ಐ ಸುಬ್ಬಣ್ಣ ಹೀಗೆ ಹೇಳಿದ್ದಾರೆ: ‘ರಾತ್ರಿ 1 ಗಂಟೆಯ ಸುಮಾರಿಗೆ ವೀರಪ್ಪನ್ ಗುಂಪಿನ ಸುಮಾರು 30 ಜನರು ಎಲ್ಲರೂ ಖಾಕಿ ಸಮವಸ್ತ್ರ ಧರಿಸಿದ್ದು ಕೈಗಳಲ್ಲಿ ತುಪಾಕಿ ಹಿಡಿದು ಠಾಣೆಯ ಮುಂಭಾಗಕ್ಕೆ ಹಠಾತ್ತನೇ ಗುಂಡು ಹಾರಿಸಿದಾಗ ನಾನು ಮತ್ತು ಪಿಸಿ ಬಸವರಾಜು ಠಾಣೆಯ ಬಾಗಿಲನ್ನು ಹಾಕಿ ರೈಫಲ್ಲುಗಳನ್ನು ಲೋಡ್ ಮಾಡಿಕೊಂಡು ಮೇಲುಭಾಗದ ಕಿಟಕಿಯಿಂದ ಅವರತ್ತ ಗುಂಡು ಹಾರಿಸಲು ಶುರುಮಾಡಿದೆವು. ಅಷ್ಟರಲ್ಲಿ ಹೊರಭಾಗದಲ್ಲಿ ಮಲಗಿದ್ದವರಿಗೆ ದಾಳಿಕೋರರು ಗುಂಡು ಹೊಡೆದರು. ಠಾಣೆಯ ಮುಂಬಾಗಿಲಿಗೆ ಯಾವುದೋ ಬಲವಾದ ವಸ್ತುವಿನಿಂದ ಹೊಡೆಯುವ ಶಬ್ದ ಕೇಳಿಸುತ್ತಿತ್ತು. ನಂತರ ಅವರು ಠಾಣೆಯ ಕಟ್ಟಡದ ಹಿಂಭಾಗದಲ್ಲಿದ್ದ ಉಗ್ರಾಣದ ಬಾಗಿಲನ್ನು ಒಡೆಯುವ ಶಬ್ದ ಕೇಳಿಸಿತು. ಬಂದವರು ತಮಿಳಿನಲ್ಲಿ ಪರಸ್ಪರ ಮಾತನಾಡುತ್ತಿದ್ದರು. ಠಾಣೆಯ ಮುಂಭಾಗದ ಮರದ ಮುಂದೆ ವೀರಪ್ಪನ್ ನಿಂತಿದ್ದನ್ನು ನಾವು ನೋಡಿದೆವು. ಸುಮಾರು 20 ನಿಮಿಷಗಳ ನಂತರ ಗುಂಡಿನ ಶಬ್ದ ನಿಂತಿತು. ಠಾಣೆಯ ಒಳಗಿದ್ದ ಬಸವರಾಜು ವೈರ್​ಲೆಸ್ ಮೂಲಕ ದಾಳಿಯ ವಿಷಯವನ್ನು ಎಲ್ಲ ಕಡೆಗೆ ತಿಳಿಸಿದರು. ಹೊರಗೆ ಯಾವುದೇ ಶಬ್ದ ಬರದಿದ್ದಾಗ ನಾವು ಮೆಲ್ಲಗೆ ಬಾಗಿಲನ್ನು ತೆರೆದು ನೋಡಿದಾಗ ಠಾಣೆಯ ಮುಂಭಾಗದ ಜಗುಲಿಯಲ್ಲಿ ಮಲಗಿದ್ದ ಪೊಲೀಸ್ ಸಿಬ್ಬಂದಿ ಗುಂಡೇಟಿನಿಂದ ಸತ್ತುಹೋಗಿದ್ದರು. ಎಡತೋಳಿಗೆ ಗುಂಡೇಟು ತಗುಲಿದ ನಾಗೇಶ ಮೋಟರ್ ಸೈಕಲ್ ಬಳಿ ಬಿದ್ದಿದ್ದ.

ರಾಮಾಪುರ ಪೊಲೀಸ್ ಠಾಣೆಯಿಂದ ಬಂದ ಸಂದೇಶವನ್ನು ಆಲಿಸಿದ ಕೂಡಲೇ ಹತ್ತಿರದ ಹನೂರು ಠಾಣೆಯ ಸಬ್ ಇನ್​ಸ್ಪೆಕ್ಟರ್ ವೆಂಕಟಸ್ವಾಮಿ, ಬಸವರಾಜ್ ‘ನೀವೇನೂ ಹೆದರಬೇಡಿ, ಐದೇ ನಿಮಿಷಗಳಲ್ಲಿ ನಾವಲ್ಲಿಗೆ ಬರುತ್ತಿದ್ದೇವೆ’ ಎಂದು ವೈರ್​ಲೆಸ್ ಸಂಬಾಷಣೆ ಮುಂದುವರಿಸುತ್ತಲೇ ಸಶಸ್ತ್ರ ಪೊಲೀಸ್ ಪಡೆಯೊಂದಿಗೆ ಧಾವಿಸಿದರು. ಇದನ್ನು ಕೇಳಿಸಿಕೊಂಡ ವೀರಪ್ಪನ್ ಪೊಲೀಸರನ್ನು ಶಪಿಸುತ್ತಾ ತನ್ನ ತಂಡದೊಡನೆ ಕಾಡಿನೊಳಗೆ ಮಾಯವಾದ.’ ಸುಮಾರು 20 ನಿಮಿಷಗಳ ಕಾಲ ನಡೆದ ದಾಳಿಯಲ್ಲಿ ವೀರಪ್ಪನ್ ತಂಡದಿಂದ ಸಿವಿಲ್ ಕಾನ್​ಸ್ಟೆಬಲ್​ಗಳಾದ ರಾಚಪ್ಪ (32 ವರ್ಷ) ಹಾಗೂ ಸಿದ್ದರಾಜು (37), ಸಶಸ್ತ್ರ ಮೀಸಲು ಪಡೆಯ ಕಾನ್​ಸ್ಟೆಬಲ್​ಗಳಾದ ಪ್ರೇಂಕುಮಾರ್, (36) ಎಳಂಗೋವನ್(40) ಹಾಗೂ ಗೋವಿಂದರಾಜು(37) ಹತ್ಯೆಗೀಡಾದರು. ಕಾನ್​ಸ್ಟೆಬಲ್​ಗಳಾದ ನಾಗೇಶ್ ಹಾಗೂ ನಾಗರಾಜು ಗಾಯಗೊಂಡರು. ಉಗ್ರಾಣದಲ್ಲಿಟ್ಟಿದ್ದ 13 ನಾಡಬಂದೂಕುಗಳನ್ನು ತಂಡವು ಒಯ್ದಿತ್ತು. ಈ ಸಂಬಂಧವಾಗಿ ಅದೇ ಪೊಲೀಸ್ ಠಾಣೆಯಲ್ಲಿ ವೀರಪ್ಪನ್ ಮತ್ತವನ ಸಹಚರರ ವಿರುದ್ಧ ಅಕ್ರಮ ಕೂಟ, ಕೊಲೆ, ಕೊಲೆ ಯತ್ನ ಹಾಗೂ ದರೋಡೆಯ ಪ್ರಕರಣ ದಾಖಲಾಯಿತು. ಕರ್ನಾಟಕ ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲ (ಹಾಗೂ ಇಲ್ಲಿಯವರೆಗೆ ಕೊನೆಯ) ಬಾರಿಗೆ ಪೊಲೀಸ್ ಠಾಣೆಯೊಂದರ ಮೇಲೆ ದಾಳಿ ನಡೆದಿರುವುದು. ಈ ಬಗ್ಗೆ ಇಂಡಿಯಾ ಟುಡೇ ಪತ್ರಿಕೆಗೆ ಕೊಟ್ಟ ಸಂದರ್ಶನದಲ್ಲಿ ವೀರಪ್ಪನ್ ಹೀಗೆ ಹೇಳಿದ: ‘ಅವರು (ಪೊಲೀಸರು) ಪೊಲೀಸ್ ಠಾಣೆಯಲ್ಲಿ ಮಲಗಿದ್ದರು. ನಾನು ಅವರತ್ತ ನೇರವಾಗಿ ಬಂದೂಕಿನ ಗುರಿಯಿಟ್ಟೆ. ಛಟ್ಟಾರ್, ಛಟ್ಟಾರ್, ಛಟ್ಟಾರ್.., ಒಬ್ಬರಾದ ನಂತರ ಒಬ್ಬರು ಸತ್ತರು. ಅವರ ದೇಹಗಳಿಂದ ನೆತ್ತರು ಝುರಿಗಳಂತೆ ಹರಿದವು. ನೀವುಗಳು ನೀರಿನಂತೆ ತಮಿಳರ ರಕ್ತವನ್ನು ಹರಿಯಲು ಬಿಟ್ಟಿರಲ್ಲಾ....’

1991ರ ಡಿಸೆಂಬರ್ 13ರಂದು ಕಾವೇರಿ ಜಲವಿವಾದದ ಸಂಬಂಧ ಬೆಂಗಳೂರು, ಮೈಸೂರು, ಚಾಮರಾಜನಗರಗಳಲ್ಲಿ ತಮಿಳು ಭಾಷಿಕರ ಮೇಲೆ ವ್ಯಾಪಕ ದಾಳಿಗಳಾಗಿ ಹಲವಾರು ತಮಿಳರ ಭಾರೀ ಪ್ರಮಾಣದ ಆಸ್ತಿಪಾಸ್ತಿಗಳು ಬೆಂಕಿಗಾಹುತಿಯಾದವು. ಯಾರದೇ ಪ್ರಾಣಹಾನಿಯಾಗಲಿಲ್ಲ. ಇದೇ ತನ್ನ ದಾಳಿಗೆ ಕಾರಣವೆಂದು ವೀರಪ್ಪನ್ ಹೇಳಿದ್ದ. ವೀರಪ್ಪನ್ ಮತ್ತು 141 ಇತರರ ವಿರುದ್ಧ ಮೈಸೂರಿನ ಟಾಡಾ ನ್ಯಾಯಾಲಯದಲ್ಲಿ ದಾಖಲಿಸಿದ ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನೂ ನ್ಯಾಯಾಲಯ ಬಿಡುಗಡೆ ಮಾಡಿತು. ‘ಪ್ರಾಕ್ತನದ ವಾಸನೆಯು ಮನಕೆ ಮೊದಲಿನ ಮಂತ್ರಿ, ಯುಕ್ತಿಗಳ ತನಗೊಪ್ಪುವಂತೆ ತಿರುಗಿಪುದು, ಸೂಕ್ತವೆನಿಪುದು ಸಹಜರುಚಿ ತನ್ನ ತರ್ಕವನೆ, ಗುಪ್ತದೊಳು ಕುಟಿಲವಿದು ಮಂಕುತಿಮ್ಮ’ ಎನ್ನುವಂತೆ ವೀರಪ್ಪನ್ ಪ್ರತಿಯೊಂದು ಕೃತ್ಯವನ್ನೂ ತನ್ನ ತರ್ಕದಂತೆಯೇ ಮಾಡುತ್ತಿದ್ದ.

(ಇತ್ತೀಚೆಗೆ ಬಿಡುಗಡೆಯಾದ, ಇದೇ ಲೇಖಕರ ‘ದಂತಕತೆಯಾದ ದಂತಚೋರ’ ಕೃತಿಯ ಆಯ್ದ ಭಾಗ)

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)