

ಮುಂಬೈ: ಭಾರತೀಯ ಜನತಾ ಪಕ್ಷವು(ಬಿಜೆಪಿ) ತನ್ನ ಆಡಳಿತದಲ್ಲಿ ರಾಜಕೀಯ ಪಕ್ಷಗಳನ್ನು ಒಡೆಯುವ ಮೂಲಕ ಪವರ್ ಜಿಹಾದ್ನಲ್ಲಿ ತೊಡಗಿದೆ ಎಂದು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಶನಿವಾರ(ಆಗಸ್ಟ್ 3) ಆರೋಪಿಸಿದ್ದಾರೆ.
ಪುಣೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಠಾಕ್ರೆ, ಅವರನ್ನು ಔರಂಗಜೇಬ್ ಅಭಿಮಾನಿಗ ಸಂಘದ ಮುಖ್ಯಸ್ಥ ಎಂದು ಕರೆದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ವಾಗ್ದಾಳಿ ನಡೆಸಿದರು. ಅಮಿತ್ ಷಾ ಅವರು ಪಾಣಿಪತ್ ಯುದ್ಧದಲ್ಲಿ ಮರಾಠರನ್ನು ಸೋಲಿಸಿದ ಆಫ್ಘನ್ ದೊರೆ ಅಹ್ಮದ್ ಷಾ ಅಬ್ದಾಲಿಯ ರಾಜಕೀಯ ವಂಶಸ್ಥರು ಎಂದು ಟೀಕಿಸಿದರು.
ನಾವು ನಮ್ಮ ಹಿಂದುತ್ವವನ್ನು ವಿವರಿಸಿದ ನಂತರ ಮುಸ್ಲಿಮರು ನಮ್ಮೊಂದಿಗಿದ್ದರೆ, ನಾವು (ಬಿಜೆಪಿ ಪ್ರಕಾರ) ಔರಂಗಜೇಬ್ ಅಭಿಮಾನಿಗಳ ಸಂಘ. ಹಾಗಾದರೆ ರಾಜಕೀಯ ಪಕ್ಷಗಳನ್ನು ಒಡೆದು ನೀವು ಮಾಡುತ್ತಿರುವುದು ಪವರ್ ಜಿಹಾದ್. ಯಾರ ಮನೆಯನ್ನು ಸುಡಬಾರದು ಎಂದು ಹೇಳಿಕೊಟ್ಟ ಛತ್ರಪತಿ ಶಿವಾಜಿ ಮಹಾರಾಜರನ್ನು ಆದರ್ಶವಾಗಿ ಪರಿಗಣಿಸುತ್ತೇವೆ. ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಅವರಂತಹವರು ಹಿಂದುತ್ವವಾದಿಗಳೇ ಎಂಬುದನ್ನು ಬಿಜೆಪಿ ಹೇಳಬೇಕು?ಎಂದು ವ್ಯಂಗ್ಯ ಮಾಡಿದರು.
ಮಹಾರಾಷ್ಟ್ರದ ಪುಣೆಯಲ್ಲಿ ಜುಲೈ 21ರಂದು ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಷಾ, ಮಹಾ ವಿಕಾಸ್ ಅಘಾಡಿ(ಎಂವಿಎ) ಮೈತ್ರಿಯನ್ನು ಔರಂಗಜೇಬ್ ಅಭಿಮಾನಿಗಳ ಸಂಘ ಎಂದು ಕರೆದಿದ್ದರು.(ಏಜೆನ್ಸೀಸ್0