

ಚೆನ್ನೈ: ಪ್ರಸ್ತುತ ಐಪಿಎಲ್ನ 17ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಇಲ್ಲಿಯವರೆಗೆ ಆಡಿರುವ 13 ಪಂದ್ಯಗಳಲ್ಲಿ 7 ಗೆದ್ದು 6 ಪಂದ್ಯಗಳನ್ನು ಸೋತಿರುವ ಐದು ಬಾರಿ ಚಾಂಪಿಯನ್ಗಳಾದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಈ ವಿಷಯ ಕ್ರಿಕೆಟ್ ಅಭಿಮಾನಿಗಳಲ್ಲಿ ಖುಷಿ ನೀಡಿದ್ದೇ ಆದರೂ ಮುಂದಿನ ಆರ್ಸಿಬಿ ವಿರುದ್ಧದ ಮ್ಯಾಚ್ನಲ್ಲಿ ಭಾರೀ ಅಂತರದ ಗೆಲುವು ದಾಖಲಿಸಿ, ಪ್ಲೇಆಫ್ಗೆ ಎಂಟ್ರಿ ಕೊಡಲಿದೆಯಾ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಆದರೆ, ಇದಕ್ಕೆ ಮೇ.18ರವರೆಗೂ ಕಾಯಬೇಕಿದೆ.
ಐದು ಬಾರಿ ಚಾಂಪಿಯನ್ ಪಟ್ಟ ತಂದುಕೊಟ್ಟಿರುವ ಸಿಎಸ್ಕೆ ತಂಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, 2008ರಲ್ಲಿ ಶುರುವಾದ ಮೊದಲ ಐಪಿಎಲ್ ಸೀಸನ್ನಿಂದಲೂ ಚೆನ್ನೈ ಪರ ಆಡುತ್ತಿದ್ದಾರೆ. ಕಳೆದ 14 ವರ್ಷಗಳಿಂದ ಒಂದೇ ಫ್ರಾಂಚೈಸಿಗೆ ಆಡುತ್ತಿರುವ ಧೋನಿ, ಮುಂದಿನ ವರ್ಷವೂ ಆಡಲಿದ್ದಾರಾ ಎಂಬ ಪ್ರಶ್ನೆಗಳು ಸದ್ಯ ದೊಡ್ಡ ಮಟ್ಟದ ಚರ್ಚೆಯಾಗಿದೆ. ಆದರೆ, ಈ ಮಧ್ಯೆ ಸಿಎಸ್ಕೆ ತಂಡದಲ್ಲಿದ್ದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ನೀಡಿದ ಹೇಳಿಕೆ ಮಾತ್ರ ಇದೀಗ ಸಿಕ್ಕಾಪಟ್ಟೆ ವೈರಲ್ಗೆ ಕಾರಣವಾಗಿದೆ.
ಕ್ರಿಕೆಟ್ ದಿಗ್ಗಜ, ಕ್ರಿಕೆಟ್ ಲೋಕದ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿ ಸದ್ಯ ಎಲ್ಲಾ ಕ್ರಿಕೆಟ್ ಫಾರ್ಮೆಟ್ಗಳಿಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಅವರ ಮೇಲಿನ ಅಭಿಮಾನ, ಪ್ರೀತಿ ಇನ್ನಷ್ಟು ದುಪ್ಪಟ್ಟಾಗಿದೆ. ಸದ್ಯ ಐಪಿಎಲ್ ಆವೃತ್ತಿಯಲ್ಲಿ ಮಾತ್ರ ಬ್ಯಾಟ್ ಹಿಡಿದು ಕಣಕ್ಕಿಳಿಯುತ್ತಿರುವ ಧೋನಿ ಅವರನ್ನು ಕಂಡು ಹುಚ್ಚೆದ್ದು ಕುಣಿಯುವ ಕ್ರಿಕೆಟ್ ಅಭಿಮಾನಿಗಳು, ಪ್ರತಿ ಪಂದ್ಯದಲ್ಲಿ ಧೋನಿ ಅವರನ್ನು ನೋಡಲು ಕಾತರದಿಂದ ಕಾದು ಕುಳಿತಿರುತ್ತಾರೆ. ಒಂದು ಮಾತಿನಲ್ಲಿ ಹೇಳುವುದಾದರೆ, ಐಪಿಎಲ್ ನೋಡುತ್ತಿರುವುದೇ ಧೋನಿಗಾಗಿ ಎಂಬುದು ಫ್ಯಾನ್ಸ್ಗಳ ಧ್ವನಿ.
ಐಪಿಎಲ್ ಇತಿಹಾಸದಲ್ಲಿಯೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಫ್ರಾಂಚೈಸಿ ಎಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು. ಈ ಪೈಕಿ ಸಿಎಸ್ಕೆ ಅಭಿಮಾನಿಗಳು ಮಾತ್ರ ಧೋನಿ ಬರುವಿಕೆಗಾಗಿ ಸ್ಟೇಡಿಯಂನಲ್ಲಿ ಒಂದು ಸೀಟು ಖಾಲಿ ಬಿಡದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುತ್ತಾರೆ. ಪಂದ್ಯದ ಆರಂಭಕ್ಕೂ ಮುನ್ನ, ನಡುವೆ ಮತ್ತು ಮುಗಿದ ಬಳಿಕವೂ ಫ್ಯಾನ್ಸ್ ಚಿರಾಡುವ ಹೆಸರು ಮಾತ್ರ ಒಂದೇ. ಅದು ಎಂ.ಎಸ್. ಧೋನಿ.
ಸದ್ಯ ಧೋನಿ ಅವರಿಗೋಸ್ಕರವೇ ಪ್ರತಿ ಪಂದ್ಯವನ್ನು ಕಾದು, ನೋಡುವ ಅಭಿಮಾನಿಗಳು, ಸಿಎಸ್ಕೆ ತಂಡ ಬ್ಯಾಟಿಂಗ್ಗೆ ಬಂದರೆ ಧೋನಿ ಬರೋವರೆಗೂ ಕಾಯುತ್ತ ಕುಳಿತಿರುತ್ತಾರೆ. ಮಾಹಿ ಕ್ರೀಸ್ಗೆ ಇಳಿಯಲಿ ಎಂದು ಬಯಸುವ ಫ್ಯಾನ್ಸ್ಗಳು ಉಳಿದ ಸಿಎಸ್ಕೆ ಆಟಗಾರರು ಔಟ್ ಆಗಲಿ ಎಂದು ದೇವರಲ್ಲಿ ಬೇಡುತ್ತಿರುತ್ತಾರೆ. ಇದು ಅಭಿಮಾನಿಗಳಿಗೆ ಖುಷಿ ಕೊಟ್ಟರೆ, ತಂಡದ ಆಟಗಾರರಲ್ಲಿ ಭಾರೀ ಬೇಸರ ಮೂಡಿಸುತ್ತದೆ. ಇದಕ್ಕೆ ರಾಯುಡು ಕೊಟ್ಟ ಹೇಳಿಕೆಯೇ ಸಾಕ್ಷಿ.
ಕ್ರೀಸ್ನಲ್ಲಿ ನಿಂತು ಎದುರಾಳಿಗಳ ವಿರುದ್ಧ ಸಿಕ್ಸ್ ಅಥವಾ ಫೋರ್ ಹೊಡೆದರು ಕಿರುಚಾಡದ ಅಭಿಮಾನಿಗಳು, ಕೇವಲ ಮೌನದಿಂದಲೇ ಇರುತ್ತಾರೆ. ಧೋನಿ ಬರುವಿಕೆಗಾಗಿ ಮಾತ್ರ ಕಾದು ಕೂರುವ ಅವರು, ಕ್ರೀಡಾಂಗಣದ ತುಂಬ ಧೋನಿ ಆಗಮನಕ್ಕಾಗಿ ಚಡಪಡಿಸುತ್ತಿರುತ್ತಾರೆ. ಸ್ವತಃ ಇದನ್ನು ನಾನು ಮತ್ತು ಜಡೇಜಾ ಅನುಭವಿಸಿದ್ದೇವೆ. ಜಡ್ಡು ಕೂಡ ಇದರಿಂದ ತುಂಬ ಬೇಸರಕ್ಕೆ ಒಳಗಾಗಿದ್ದರು. ಆದರೆ, ಅವರೆಲ್ಲಾ ಮಾಹಿ ಅಭಿಮಾನಿಗಳು ಎಂಬುದನ್ನು ನಾವು ಮರೆಯುವಂತಿಲ್ಲ ಎಂದರು.
ಇದರಿಂದ ನಮಗೆ ಬೇಸರವಾಗಿತ್ತು. ಆದರೆ, ನಾವಿಲ್ಲಿ ಅರ್ಥಮಾಡಿಕೊಳ್ಳಬೇಕಾದ ವಿಷಯ ಏನೆಂದರೆ, ಅಲ್ಲಿ ಕುಳಿತಿರುವ ಪ್ರತಿಯೊಬ್ಬರು ಮೊದಲು ಧೋನಿ ಅಭಿಮಾನಿಗಳು, ಆನಂತರ ಫ್ರಾಂಚೈಸಿ ಫ್ಯಾನ್ಸ್ಗಳು. ಹಾಗಾಗಿ, ಅವರ ಪ್ರೀತಿ, ಅಭಿಮಾನಕ್ಕೆ ನಾವು ಸಹ ಬದ್ಧರಾಗಿರಬೇಕು ಎಂದು ಹೇಳಿದರು,(ಏಜೆನ್ಸೀಸ್).