

ಮೈಸೂರು: ಸಂಸದ ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ ಎಂಬ ಮಾಹಿತಿ ನಮಗೆ ಗೊತ್ತಿಲ್ಲ, ಅವರು ಕುಟುಂಬದವರ ಸಂಪರ್ಕಕ್ಕೂ ಸಿಕ್ಕಿಲ್ಲ ಎಂದು ಶಾಸಕ ಜಿ.ಟಿ. ದೇವೇಗೌಡ ಇಂದು ಮೈಸೂರಿನಲ್ಲಿ ಹೇಳಿದರು.
ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಪ್ರಜ್ಚಲ್ ರೇವಣ್ಣ ಪತ್ತೆಗೆ ರಾಜ್ಯ ಸರ್ಕಾರ ಬ್ಲೂ ಕಾರ್ನರ್ ನೋಟಿಸ್ ನೀಡಿದೆ. ಎಸ್ಐಟಿ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಈ ಪ್ರಕರಣವನ್ನು ಸಿಬಿಐ ವಹಿಸಲ್ಲ ಎಂದು ಹೇಳಿದ್ದಾರೆ. ನಾವು ಕಿಡ್ನಾಪ್ ಪ್ರಕರಣದಲ್ಲಿ ರೇವಣ್ಣ ಬಂಧಿಸಿದ್ದರ ವಿರುದ್ಧ ಪ್ರತಿಭಟನೆ ಮಾಡಿದ್ದೆವು" ಎಂದರು.
"ಪ್ರಜ್ವಲ್ ರೇವಣ್ಣ ಪರವಾಗಿ ನಾವು ಪ್ರತಿಭಟನೆ ಮಾಡಿಲ್ಲ. ತಮಿಳುನಾಡು ಸೇರಿದಂತೆ ಇತರೆ ಕಡೆ ಪೆನ್ ಡ್ರೈವ್ ತಯಾರಿಸಿದ್ದರು ಅಂತ ಮಾಹಿತಿ ಇದೆ. ಹಾಗಾಗಿ ಪ್ರಕರಣವನ್ನು ಸಿಬಿಐಗೆ ಕೊಡಿ ಅಂತ ಹೇಳಿದ್ದೇವೆ. ಆದರೆ ಪ್ರಕರಣವನ್ನು ಸಿಬಿಐಗೆ ವಹಿಸುವುದಿಲ್ಲ ಎಂದು ಸಿಎಂ ಹೇಳಿದ್ದಾರೆ. ಎಸ್ಐಟಿ ಅಧಿಕಾರಿಗಳು ತನಿಖೆ ಮಾಡಿ ಸತ್ಯಾಸತ್ಯತೆ ಬಯಲಿಗೆ ತರುತ್ತಾರೆ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗುವುದು ಖಚಿತ" ಎಂದರು.
ದಕ್ಷಿಣ ಶಿಕ್ಷಕರ ಕ್ಷೇತ್ರದ ಮೈತ್ರಿ ಟಿಕೆಟ್ ಗೊಂದಲ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, "ಟಿಕೆಟ್ ಆಕಾಂಕ್ಷಿಯಾಗಿದ್ದ ಶ್ರೀಕಂಠೇಗೌಡ ಜನತಾ ಪಕ್ಷದ ಕಟ್ಟಾಳು. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಅಪ್ಪಟ ಶಿಷ್ಯ. ಶ್ರೀಕಂಠೇಗೌಡರ ಮುಂದಾಳತ್ವದಲ್ಲಿಯೇ ಈ ಚುನಾವಣೆ ನಡೆಯತ್ತದೆ. ಈ ಬಗ್ಗೆ ಯಾರು ಅನುಮಾನ ಪಡುವ ಅಗತ್ಯವಿಲ್ಲ" ಎಂದರು.