Amazon Layoffs: ಇ-ಕಾಮರ್ಸ್ ಪ್ರಮುಖ ಸಂಸ್ಥೆಯಾದ ಅಮೆಜಾನ್, 2025ರ ಆರಂಭದಲ್ಲೇ 14,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ಸಜ್ಜಾಗಿದೆ. ಟ್ರಿಲಿಯನ್ ಡಾಲರ್ ಕಂಪನಿಯು ಇದೀಗ ತನ್ನ ವೆಚ್ಚದಲ್ಲಿ ಉಳಿತಾಯ ಕಾಣುವ ಮಹತ್ವದ ಗುರಿಯನ್ನು ಹೊಂದಿದ್ದು, ಉದ್ಯೋಗಿಗಳ ವಜಾಗೊಳಿಸುವ ಪ್ರಕ್ರಿಯೆಯೇ ಇದಕ್ಕೆ ಉತ್ತಮ ಮಾರ್ಗ ಎಂಬುದನ್ನು ಕಂಡುಕೊಂಡಿದೆ.
ವರದಿಗಳ ಪ್ರಕಾರ, ಶೇ. 13ರಷ್ಟು ಉದ್ಯೋಗಿಗಳ ಕಡಿತದ ನಂತರ ಕಂಪನಿಯು ವಾರ್ಷಿಕವಾಗಿ 2.1 ಬಿಲಿಯನ್ ಡಾಲರ್ನಿಂದ 3.6 ಬಿಲಿಯನ್ ಡಾಲರ್ವರೆಗೆ ಉಳಿಸಲು ದಿಟ್ಟ ನಿರ್ಧಾರ ಕೈಗೊಂಡಿದೆ. 14,000 ವ್ಯವಸ್ಥಾಪಕ ಉದ್ಯೋಗಗಳನ್ನು ಕಡಿತಗೊಳಿಸುವುದರಿಂದ ಬಹಪಾಲು ಹಣ ಉಳಿತಾಯವಾಗಲಿದೆ. ಇದು ಸಂಸ್ಥೆಯ ಲಾಭವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂಬ ಸದ್ಯದ ಲೆಕ್ಕಾಚಾರ.
ಹೂಡಿಕೆದಾರರಾದ ಗುರ್ಮಿಟ್ ಚಡ್ಡಾ ಪ್ರತಿಕ್ರಿಯಿಸಿ, “ಕಳೆದ ನವೆಂಬರ್‌ನಲ್ಲಿ 18 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಬಿಸಾಡಿದ್ದ ಅಮೆಜಾನ್, ಇದೀಗ 14000 ಮಂದಿಯನ್ನು ವ್ಯವಸ್ಥಾಪಕ ಹುದ್ದೆಯಿಂದ ವಜಾಗೊಳಿಸಲು ಮುಂದಾಗಿದೆ. ತಮ್ಮ ಉದ್ಯೋಗಿಗಳನ್ನು ಕುಟುಂಬಗಳು ಎಂದು ಕರೆಯುವ ಇವರು, ಮಾಡುತ್ತಿರುವುದು ನಾಟಕವಷ್ಟೇ” ಎಂದು ಸಂಸ್ಥೆ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಭಾರತೀಯರಲ್ಲಿ ವಿಮೆ ಕುರಿತು ಅರಿವಿನ ಕೊರತೆ : ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಡಾ.ಎನ್. ನಾಗರಾಜ ಬೇಸರ
“ನಮಗೆ ಆಧುನಿಕ ಟೆಕ್ನಾಲಜಿಯ ಅವಶ್ಯ ಹಾಗೂ ಅಗತ್ಯವಿದೆ. ಆದರೆ, ಕೃತಕ ಬುದ್ಧಿಮತ್ತೆ ಉದ್ಯೋಗಿಗಳ ಕೆಲಸವನ್ನು ಕಸಿದುಕೊಳ್ಳುತ್ತಿದೆ. ನಮ್ಮ ಜನರಲ್ಲಿ ಕಣ್ಣೀರು ತರಿಸುವಂತ ಇಂತಹ ಎಐ ಸಂಪೂರ್ಣ ನಿಷ್ಪ್ರಯೋಜಕ” ಎಂದು ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಮೆಜಾನ್ ನಿರ್ಧಾರವನ್ನು ಖಂಡಿಸಿರುವ ನೆಟ್ಟಿಗರು, ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).