

ಬೆಂಗಳೂರು: ಭಾನುವಾರ (ಮೇ.7) ನೀಟ್ ಪರೀಕ್ಷೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಪ್ರಧಾನಿ ಮೋದಿ ರೋಡ್ ಶೋ ಕಾರ್ಯಕ್ರಮದಲ್ಲಿ ಮತ್ತೆ ಬದಲಾವಣೆ ಮಾಡಲಾಗಿದೆ.
ಶನಿವಾರ ಮತ್ತು ಭಾನುವಾರದ ರೋಡ್ ಶೋ ಕಾರ್ಯಕ್ರಮವನ್ನು ಅದಲು ಬದಲು ಮಾಡಲಾಗಿದೆ. ಅಲ್ಲದೆ. ರೋಡ್ ಶೋ ಸಮಯವನ್ನು ಸಹ ಕಡಿತಗೊಳಿಸಲಾಗಿದೆ. ಭಾನುವಾರ ಬೆಳಗ್ಗೆ ನಿಗದಿಯಾಗಿದ್ದ ರೋಡ್ ಶೋ ಅನ್ನು ಶನಿವಾರಕ್ಕೆ ಶಿಫ್ಟ್ ಮಾಡಲಾಗಿದೆ. ಶನಿವಾರ ಬೆಳಗ್ಗೆ ನಿಗದಿಯಾಗಿದ್ದ ರೋಡ್ ಶೋವನ್ನು ಭಾನುವಾರಕ್ಕೆ ಬದಲಾಯಿಸಲಾಗಿದೆ.
ಶನಿವಾರ ಬೆಳಗ್ಗೆ 10 ಗಂಟೆಯಿಂದ 12.30 ರವರೆಗೆ ರೋಡ್ ಶೋ ನಡೆಯಲಿದೆ. ಶನಿವಾರ ಜೆ.ಪಿ. ನಗರ ಬ್ರಿಗೇಡ್ ಮಿಲೇನಿಯಂನಿಂದ ಮಲ್ಲೇಶ್ವರಂ ಸರ್ಕಲ್ ಮಾರಮ್ಮ ಟೆಂಪಲ್ವರೆಗೆ ರೋಡ್ ಶೋ ನಡೆಯಲಿದೆ. ಭಾನುವಾರ ಬೆಳಗ್ಗೆ 10 ಗಂಟೆಯಿಂದ 11.30 ರವರೆಗೆ ರೋಡ್ ಶೋ ಇರಲಿದೆ. ಅಂದು ಸುರಂಜನ್ ದಾಸ್ ಸರ್ಕಲ್ನಿಂದ ಟ್ರಿನಿಟಿ ಸರ್ಕಲ್ವರೆಗೆ ರೋಡ್ ಶೋ ನಡೆಯಲಿದೆ.
ಇದರ ಜತೆಗೆ ಭಾನುವಾರ ನಡೆಯುವ ರೋಡ್ ಶೋ ಕಾರ್ಯಕ್ರಮದಲ್ಲಿ 4 ಕಿ.ಮೀ. ಕಡಿತ ಮಾಡಲಾಗಿದೆ. ನೀಟ್ ಪರೀಕ್ಷೆ ಹಿನ್ನೆಲೆಯಲ್ಲಿ ಪ್ರಧಾನಿ ಕಚೇರಿ ನಿರ್ದೇಶನದಂತೆ ರೋಡ್ ಶೋದಲ್ಲಿ ಬದಲಾವಣೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ ಭಾರೀ ಸಿದ್ಧತೆ ನಡೆದಿದ್ದು, ರೋಡ್ ಶೋ ನಡೆಯುವ ರಸ್ತೆಯನ್ನು ಬಳಸದಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ. ಇಂದು ಸಂಜೆ 5.30ರಿಂದ 7ಗಂಟೆಯವರೆಗೆ ಹಳೇ ವಿಮಾನ ನಿಲ್ದಾಣ, ಕೇಂಬ್ರಿಡ್ಜ್ ಲೇಔಟ್ ರಸ್ತೆ, ಇಂದಿರಾನಗರ 100ಅಡಿ ರಸ್ತೆ, ಅರಳಿ ಕಟ್ಟೆ, ಎ.ಎಸ್.ಸಿ ಸೆಂಟರ್, ಟ್ರಿನಿಟಿ ಸರ್ಕಲ್, ರಾಜಭವನ್ ರಸ್ತೆ, ಎಂಜಿ ರೋಡ್, ಡಿಕಸನ್ ರಸ್ತೆ, ಮಣಿಪಾಲ್ ಸೆಂಟರ್, ಕಬ್ಬನ್ ರಸ್ತೆ, ಬಿಆರ್ವಿ ಜಂಕ್ಷನ್, ಸಿಟಿಓ ಜಂಕ್ಷನ್, ಇನ್ಫೆಂಟ್ರಿ ರಸ್ತೆಗಳನ್ನು ಬಳಸದಂತೆ ಮನವಿ ಮಾಡಲಾಗಿದೆ. ಈ ರಸ್ತೆಗಳ ಬದಲಾಗಿ ಪರ್ಯಾಯ ಮಾರ್ಗ ಬಳಸುವಂತೆ ಬೆಂಗಳೂರು ನಗರ ಸಂಚಾರಿ ಪೊಲೀಸ್ ಇಲಾಖೆ ಸೂಚನೆ ನೀಡಿದೆ. (ದಿಗ್ವಿಜಯ ನ್ಯೂಸ್)