More

    ಅಕ್ರಮ ಆಸ್ತಿ ಐಟಿಯಿಂದ ಜಪ್ತಿ! 1 ವರ್ಷದಲ್ಲಿ 1,533 ಕೋಟಿ ರೂ. ಮೌಲ್ಯದ ಬೇನಾಮಿ ಸ್ವತ್ತು ಸರ್ಕಾರದ ವಶಕ್ಕೆ

    ಕೀರ್ತಿನಾರಾಯಣ ಸಿ.
    ಬೆಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಹಾಗೂ ಅನುಮಾನಾಸ್ಪದ ಆರ್ಥಿಕ ವಹಿವಾಟಿನ ಮೇಲೆ ಹದ್ದಿನ ಕಣ್ಣಿಟ್ಟಿರುವ ಆದಾಯ ತೆರಿಗೆ ಇಲಾಖೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸಕ್ರಿಯವಾಗಿದೆ. ನಿರಂತರ ದಾಳಿಗಳನ್ನು ನಡೆಸುವ ಮೂಲಕ ತೆರಿಗೆ ವಂಚಕರ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದು, ಅಕ್ರಮ ಸಂಪತ್ತಿನ ಜಪ್ತಿ ಪ್ರಮಾಣವೂ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗಿದೆ. ಆದರೆ, ತಪ್ಪಿತಸ್ಥರಿಗೆ ಕೋರ್ಟ್​ನಲ್ಲಿ ಶಿಕ್ಷೆಯಾಗುತ್ತಿರುವ ಪ್ರಮಾಣ ಕಡಿಮೆ ಇರುವುದು ಐಟಿ ಬೇಟೆಗೆ ಕೊಂಚ ಹಿನ್ನಡೆಯಾಗಿದೆ.

    ಆರ್ಥಿಕ ಇಲಾಖೆ ಮಾಹಿತಿ ಪ್ರಕಾರ ದೇಶಾದ್ಯಂತ 2022ರ ಜನವರಿಂದ 2023ರ ಜನವರಿವರೆಗೆ 1,533 ರೂ. ಕೋಟಿ ಮೌಲ್ಯದ ಆಸ್ತಿಯನ್ನು ಐಟಿ ಇಲಾಖೆ ಜಪ್ತಿ ಮಾಡಿದೆ. 2021-22ನೇ ಸಾಲಿನ ಇದೇ ಅವಧಿಯಲ್ಲಿ 1,159 ಕೋಟಿ ರೂ. ಮೌಲ್ಯದ ಸಂಪತ್ತನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. 2019-20ರಿಂದ ಗಮನಿಸಿದರೆ ವಶಕ್ಕೆ ಪಡೆದ ಆಸ್ತಿ ಮೊತ್ತ ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದೆ.

    ಕಳೆದ 3 ವರ್ಷದಲ್ಲಿ 2,841 ಐಟಿ ತಂಡಗಳು ಪರಿಶೀಲನೆ ನಡೆಸಿದ್ದು, 4,861 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದಿದೆ. ಅಪಾರ ನಗದು, ಚರಾಸ್ತಿ, ಸ್ತಿರಾಸ್ತಿಯೂ ಸೇರಿದೆ. 2014-15ರಿಂದ 2019-20ರವರೆಗಿನ ಮಾಹಿತಿ ಪ್ರಕಾರ 11,661 ಪ್ರಕರಣಗಳನ್ನು ಪ್ರಾಸಿಕ್ಯೂಷನ್​ಗೆ ಒಳಪಡಿಸಿದೆ. ಇದರಲ್ಲಿ 1,344 ಕೇಸ್ ಇತ್ಯರ್ಥಗೊಂಡಿದ್ದು, 292 ಪ್ರಕರಣಗಳಲ್ಲಿ ಮಾತ್ರವೇ ಶಿಕ್ಷೆಯಾಗಿದೆ.

    120 ದಿನದಲ್ಲಿ ತನಿಖೆ ಮುಗಿಸಬೇಕು

    ವ್ಯಕ್ತಿ ಅಥವಾ ಸಂಸ್ಥೆಗೆ ಸಂಬಂಧಿಸಿದಂತೆ ದಾಳಿ ನಡೆಸಿದರೆ ನಿಯಮದ್ವಯ 120 ದಿನದಲ್ಲಿ ತನಿಖೆ ಮುಗಿಸಿ ಅಂತಿಮ ವರದಿ ಸಲ್ಲಿಸಬೇಕು. ಇನ್ನಷ್ಟು ಸಮಯಕ್ಕೆ ಅವಕಾಶವಿದೆ. ತನಿಖಾಧಿಕಾರಿಗಳು ವಶಕ್ಕೆ ಪಡೆದ ದಾಖಲೆಗಳನ್ನು ಅಸೆಸಿಂಗ್ ಆಫೀಸರ್​ಗಳಿಗೆ ನೀಡುತ್ತಾರೆ. ಸಣ್ಣಪುಟ್ಟ ಪ್ರಕರಣಗಳಲ್ಲಿ ಕೆಲ ತಿಂಗಳುಗಳಲ್ಲೇ ದಾಖಲೆ ಪರಿಶೀಲನೆಯನ್ನು ಅಧಿಕಾರಿಗಳು ಪೂರ್ಣಗೊಳಿಸುತ್ತಾರೆ.

    ತಪ್ಪು ದೃಢಪಟ್ಟರೆ ಜೈಲು ವಾಸ

    ಬೇನಾಮಿ ಆಸ್ತಿ ಹೊಂದಿರುವುದು ಸಾಬೀತಾದರೆ ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆಯಡಿ ಭಾರಿ ಪ್ರಮಾಣದ ದಂಡ ಹಾಗೂ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆ ಪ್ರಕಾರ 1 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿ ಹೊಂದಿರುವುದು ಪತ್ತೆಯಾದರೆ 7 ವರ್ಷ ಜೈಲು ಶಿಕ್ಷೆ ಮತ್ತು 25 ಲಕ್ಷ ರೂ.ವರೆಗೆ ದಂಡ ವಿಧಿಸಬಹುದು.

    ಯಾವಾಗ, ಹೇಗೆ?

    ಬೇನಾಮಿ ಹೆಸರಲ್ಲಿ ಆಸ್ತಿ ಖರೀದಿ, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸುವ ಮೂಲಕ ಸರ್ಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ತೆರಿಗೆ ವಂಚಿಸಿರುವ ಬಗ್ಗೆ ದೂರು ಬಂದರೆ ಅಥವಾ ಮಾಹಿತಿ ಸಿಕ್ಕರೆ ಐಟಿ ಇಲಾಖೆ ದಾಳಿ ನಡೆಸುತ್ತದೆ. ಆಸ್ತಿಪತ್ರಗಳು, ಚಿನ್ನಾಭರಣ ಹಾಗೂ ನಗದು ಜಪ್ತಿ ಮಾಡಿ ಸಂಬಂಧಪಟ್ಟವರಿಗೆ ದಾಖಲೆ ಒದಗಿಸಲು ಕಾಲಾವಕಾಶ ನೀಡಲಾಗುತ್ತದೆ. ತೆರಿಗೆ ಪಾವತಿಸಿರುವ ಬಗ್ಗೆ ಲೆಕ್ಕಪರಿಶೋಧಕರಿಂದ ಐಟಿಗೆ ದಾಖಲೆ ಸಲ್ಲಿಸಬೇಕು. ದಾಖಲಾತಿ ಸರಿಯಾಗಿದ್ದಲ್ಲಿ ಜಪ್ತಿ ಮಾಡಿರುವ ಹಣ, ಚಿನ್ನ, ದಾಖಲೆಪತ್ರಗಳನ್ನು ವಾಪಸ್ ಕೊಡಲಾಗುತ್ತದೆ. ತೆರಿಗೆ ವಂಚಿಸಿದ್ದರೆ ಎಲ್ಲ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.

    ದಾಳಿ ನಂತರ ಮುಂದೇನು?

    ವಿಶ್ವಾಸಾರ್ಹ ಮಾಹಿತಿ ಆಧರಿಸಿ ಐಟಿ ಅಧಿಕಾರಿಗಳು ದಾಳಿ ನಡೆಸುತ್ತಾರೆ. ಕಾರ್ಯಾಚರಣೆ ವೇಳೆ ಸಂಗ್ರಹಿಸಿದ ಸಾಕ್ಷ್ಯಾಧಾರದ ಮೇಲೆ ಆಸ್ತಿ ತೆರಿಗೆ ಮೌಲ್ಯಮಾಪನ ಮಾಡಲಾಗುತ್ತದೆ. ಒಂದು ವೇಳೆ ಕಮಿಷನರ್ ಆಫ್ ಇನ್​ಕಂ ಟ್ಯಾಕ್ಸ್, (ಸಿಐಟಿ), ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ (ಐಟಿಎಟಿ), ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿಗಳಿದ್ದರೆ ಅಲ್ಲೇ ಅಂತಿಮ ತೀರ್ವನವಾಗುತ್ತದೆ. ಇಲ್ಲದಿದ್ದರೆ ಆದಾಯ ತೆರಿಗೆ ಕಾಯ್ದೆಯನ್ವಯ ದಂಡ ಪ್ರಕ್ರಿಯೆ ಆರಂಭಿಸಲಾಗುತ್ತದೆ.

    ಪ್ರಮುಖ ಪ್ರಕರಣಗಳು

    • 2023 ಜನವರಿಯಲ್ಲಿ ರಾಜಕಾರಣಿಯೊಬ್ಬರ ಆಪ್ತರಿಗೆ ಸೇರಿದ ಮನೆ, ಕಚೇರಿ ಮೇಲೆ ದಾಳಿ. ಬೆಂಗ್ಳೂರು, ಚೆನ್ನೈ, ಕೊಪ್ಪಳದಲ್ಲಿ ಶೋಧ.
    • 2023 ಮಾರ್ಚ್​ನಲ್ಲಿ ಕೋ ಆಪರೇಟಿವ್ ಬ್ಯಾಂಕ್​ಗಳ ಅವ್ಯವಹಾರ ಸಂಬಂಧ 16 ಕಡೆ ದಾಳಿ. 1,000 ಕೋಟಿ ಅಕ್ರಮ ವ್ಯವಹಾರ ಪತ್ತೆ. ಕೋಟ್ಯಂತರ ರೂ. ನಗದು, ಚಿನ್ನ ಜಪ್ತಿ.
    • 2021 ಫೆಬ್ರವರಿಯಲ್ಲಿ ಮೆಡಿಕಲ್ ಸೀಟು ವಂಚನೆಗೆ ಸಂಬಂಧಪಟ್ಟಂತೆ ಬೆಂಗಳೂರು, ಮಂಗಳೂರು ಸೇರಿ ಹಲವೆಡೆ ದಾಳಿ. ಅಪಾರ ಪ್ರಮಾಣದ ಚಿನ್ನ, ನಗದು ಜಪ್ತಿ.
    • 2017 ಆಗಸ್ಟ್​ನಲ್ಲಿ ಡಿ.ಕೆ. ಶಿವಕುಮಾರ್​ಗೆ ಸಂಬಂಧಿಸಿದಂತೆ ಬೆಂಗಳೂರು, ದೆಹಲಿ ಸೇರಿ 60 ಕಡೆ ದಾಳಿ. ಭಾರಿ ನಗದು ಪತ್ತೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts