More

    ಇಂದು ಕಲ್ಪತರು ನಾಡಲ್ಲಿ ನಮೋ ಮೇನಿಯಾ: ತುಮಕೂರು ಸಂಚಾರ ಮಾರ್ಗದಲ್ಲಿ ಬದಲಾವಣೆ

    ತುಮಕೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಎಲ್ಲೆಡೆ ಬಿರುಸಿನ ಪ್ರಚಾರ ನಡೆಯುತ್ತಿದೆ. ಈಗಾಗಲೇ ರೋಡ್​ ಶೋಗಳು ಹಾಗೂ ಸಮಾವೇಶಗಳ ಮೂಲಕ ಹವಾ ಸೃಷ್ಟಿ ಮಾಡಿರುವ ಪ್ರಧಾನಿ ಮೋದಿ ಇಂದು ಕಲ್ಪತರು ನಾಡು ತುಮಕೂರಿಗೆ ಭೇಟಿ ನೀಡುತ್ತಿದ್ದಾರೆ.

    ನಮೋ ಮತಬೇಟೆ

    ಕಾರ್ಯಕರ್ತರ ಬೃಹತ್ ಸಮಾವೇಶದ ನೆಪದಲ್ಲಿ ಮತಯಾಚನೆಗೆ ಪ್ರಧಾನಿ ಮುಂದಾಗಿದ್ದಾರೆ. ತುಮಕೂರು ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪರ ನಮೋ ಮತಬೇಟೆಯಾಡಲಿದ್ದಾರೆ. ಡಬಲ್ ಇಂಜಿನ್ ಸರ್ಕಾರದ ಯೋಜನೆಗಳನ್ನು ಜನರ ಮುಂದಿಟ್ಟು ಮೋದಿ ಮತ ಶಿಕಾರಿ ಮಾಡಲಿದ್ದಾರೆ. ಜಿಲ್ಲೆಯ 11 ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರ ನಮೋ ಮತಯಾಚನೆ ನಡೆಸಲಿದ್ದಾರೆ.

    ಇದನ್ನು ಓದಿ: ಲಿಂಗಾಯತ ಸಮುದಾಯದವರಿಗೆ ಅನ್ಯಾಯ ಹೇಗೆ? ಶೆಟ್ಟರ್​ಗೆ ಡಾ.ವಿಜಯ ಸಂಕೇಶ್ವರ ಪ್ರಶ್ನೆ

    ಇಂದು ಸಂಜೆ 4.50ರ ಸುಮಾರಿಗೆ ಹೆಲಿಕಾಪ್ಟರ್ ‌ಮೂಲಕ ತುಮಕೂರಿನ ಯುನಿವರ್ಸಿಟಿ ಹೆಲಿಪ್ಯಾಡ್​ಗೆ ಪ್ರಧಾನಿ ಮೋದಿ‌ ಬಂದಿಳಿಯಲಿದ್ದಾರೆ. ಇದಾದ ಬಳಿಕ ತುಮಕೂರು ನಗರದ ಸರ್ಕಾರಿ ‌ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಯುವ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. 5 ಗಂಟೆಯಿಂದ 5:50 ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಕಾರ್ಯಕರ್ತರರನ್ನ ಉದ್ದೇಶಿಸಿ ಸುಮಾರು 30 ನಿಮಿಷಗಳ ಕಾಲ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ.

    ಬೃಹತ್ ಸಮಾವೇಶದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆ ಇದೆ. ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿ, ತುಮಕೂರು ಯುನಿವರ್ಸಿಟಿ ಹೆಲಿಪ್ಯಾಡ್​ನಿಂದ ಬೆಂಗಳೂರು ಕಡೆಗೆ ತೆರಳಲಿದ್ದಾರೆ.

    ಬಿಗಿ ಬಂದೋಬಸ್ತ್​

    ಇಂದು ಪ್ರಧಾನಿ ಮೋದಿ ತುಮಕೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ತುಮಕೂರು ನಗರದಲ್ಲಿ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿದೆ. ಕೇಂದ್ರ ವಲಯ ಐಜಿ ರವಿಕಾಂತೇಗೌಡ ನೇತೃತ್ವದಲ್ಲಿ ಪೊಲೀಸ್ ಬಿಗಿಭದ್ರತೆ ಇರಲಿದೆ. ತುಮಕೂರು ಎಸ್.ಪಿ. ರಾಹುಲ್ ಕುಮಾರ್ ಶಹಪುರ್ ವಾಡ್ ಸೇರಿದಂತೆ, ಎಎಸ್ ಪಿ-4, ಡಿವೈಎಸ್​ಪಿ-13, ಸಿಪಿಐ – 39, ಪಿಎಸ್ ಐ – 84, ಎಎಸ್ಐ – 93, ಪೊಲೀಸ್ ಸಿಬ್ಬಂದಿ – 650, ಮಹಿಳಾ ಪೊಲೀಸ್ ಸಿಬ್ಬಂದಿ – 40, ಹೋಂ ಗಾರ್ಡ್ – 134, ಕೆಎಸ್ಆರ್​ಪಿ ತುಕಡಿ – 7 ಹಾಗೂ ಅಗ್ನಿಶಾಮಕ ವಾಹನ – 5 ಸೇರಿದಂತೆ ಒಟ್ಟು 1 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಖಾಕಿ ಪಡೆ ಹೈ ಅಲರ್ಟ್ ಆಗಿದೆ.

    ಇದನ್ನೂ ಓದಿ: ಬಿಜೆಪಿ ಪರ ಅಲೆಯಲ್ಲ, ಸುನಾಮಿಯೇ ಇದೆ! – ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ

    ಮಾರ್ಗ ಬದಲಾವಣೆ

    ಇಂದು ಪ್ರಧಾನಿ ನರೇಂದ್ರ ಮೋದಿ ತುಮಕೂರಿಗೆ ಬರುತ್ತಿರುವುದರಿಂದ ತುಮಕೂರು ನಗರದಲ್ಲಿ ಸಂಚರಿಸುವ ವಾಹನಗಳ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ಇಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ವಾಹನ ಸಂಚಾರದಲ್ಲಿ ಮಾರ್ಗ ಬದಲಾವಣೆ ಇರುತ್ತದೆ. ತುಮಕೂರು ನಗರ ಬಟವಾಡಿ ಜಂಕ್ಷನ್​ನಿಂದ ಬಿಜಿಎಸ್ ಸರ್ಕಲ್ ವರೆಗೆ ಸಾರ್ವಜನಿಕರ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ತುಮಕೂರು ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ. ಬೆಂಗಳೂರು ಕಡೆಯಿಂದ ತುಮಕೂರು ನಗರಕ್ಕೆ ಎಂಟ್ರಿ ಕೊಡುವ ವಾಹನಗಳು ರಾಷ್ಟ್ರೀಯ ಹೆದ್ದಾರಿ‌‌ ಮೂಲಕ ಬಟವಾಡಿ, ಹನುಮಂತಪುರ, ಸತ್ಯಮಂಗಲ, ಅಂತರಸನಹಳ್ಳಿ ಸರ್ವಿಸ್ ರಸ್ತೆಯಿಂದ, ಶಿರಾ ಗೇಟ್ ಮೂಲಕ ತುಮಕೂರು ನಗರಕ್ಕೆ ಎಂಟ್ರಿ ಕೊಡಬೇಕು. ಶಿರಾ ಕಡೆಯಿಂದ ತುಮಕೂರು ನಗರಕ್ಕೆ ಪ್ರವೇಶ ಮಾಡುವ ವಾಹನಗಳು ಲಿಂಗಾಪುರದ ಹತ್ತಿರದ ಸರ್ವೀಸ್ ರಸ್ತೆಯಿಂದ ಹಳೇ ಶಿರಾ ರಸ್ತೆ ಮೂಲಕ ಶ್ರೀದೇವಿ ಮೆಡಿಕಲ್ ಕಾಲೇಜು ರಸ್ತೆಯಿಂದ ಶಿರಾ ಗೇಟ್ ಮೂಲಕ ತುಮಕೂರು ನಗರಕ್ಕೆ ಎಂಟ್ರಿ ಕೊಡಬೇಕು. ಕುಣಿಗಲ್ ಕಡೆಯಿಂದ ತುಮಕೂರು ನಗರ ಪ್ರವೇಶ ಮಾಡುವ ವಾಹನಗಳು ತುಮಕೂರಿನ ರಿಂಗ್ ರಸ್ತೆಯ ಕುಣಿಗಲ್ ಸರ್ಕಲ್​ನಿಂದ ಲಕ್ಕಪ್ಪ ಸರ್ಕಲ್‌ ಮುಖಾಂತರ ತುಮಕೂರು ನಗರಕ್ಕೆ ಎಂಟ್ರಿಯಾಗಬೇಕು. ತಿಪಟೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ವಾಹನಗಳು ಲಕ್ಕಪ್ಪ ಸರ್ಕಲ್‌ನಿಂದ ಗುಬ್ಬಿ ಗೇಟ್ ‌ಮುಖಾಂತರ ರಿಂಗ್ ರಸ್ತೆ ಮೂಲಕ ಎಂಟ್ರಿ ಕೊಟ್ಟು, ಕುಣಿಗಲ್ ಜಂಕ್ಷನ್​ನಿಂದ ರಾಷ್ಟ್ರೀಯ ಹೆದ್ದಾರಿ ಮುಖಾಂತರ ಬೆಂಗಳೂರಿಗೆ ಕಡೆಗೆ ಸಂಚಾರ ಮಾಡಬೇಕು. ತಿಪಟೂರು ಕಡೆಯಿಂದ ಕುಣಿಗಲ್ ಕಡೆಗೆ ಹೋಗುವ ವಾಹನಗಳು ರಿಂಗ್ ರೋಡ್​ನಿಂದ ಗುಬ್ಬಿ ಗೇಟ್ ಮುಖಾಂತರ ಕುಣಿಗಲ್ ಕಡೆಗೆ ಸಂಚರಿಸುವುದು. ತಿಪಟೂರು ಕಡೆಯಿಂದ ಶಿರಾ ಕಡೆಗೆ ಸಂಚರಿಸುವ ವಾಹನಗಳು ರಿಂಗ್ ರೋಡ್ ಮುಖಾಂತರ ಕುಣಿಗಲ್‌ ಜಂಕ್ಷನ್‌ನಿಂದ, ಕ್ಯಾತ್ಸಂದ್ರ ಮೂಲಕ ರಾಷ್ಟ್ರೀಯ ಹೆದ್ದಾರಿ-48 ಕ್ಕೆ ಎಂಟ್ರಿ ಕೊಟ್ಟು ಶಿರಾ ಕಡೆಗೆ ಸಂಚರಿಸುವುದು. ಬೆಂಗಳೂರು ಕಡೆಯಿಂದ ಕುಣಿಗಲ್ ಕಡೆಗೆ ಸಂಚರಿಸುವ ವಾಹನಗಳು ಕ್ಯಾತ್ಸಂದ್ರದ ರಿಂಗ್ ರೋಡ್ ಮೂಲಕ ಕುಣಿಗಲ್‌ ಜಂಕ್ಷನ್​ಗೆ ಬಂದು ಕುಣಿಗಲ್ ಕಡೆಗೆ ಸಂಚರಿಸಬೇಕು. ಸಾರ್ವಜನಿಕರು ಕಟ್ಟುನಿಟ್ಟಾಗಿ ಆದೇಶ ಪಾಲಿಸುವಂತೆ ತುಮಕೂರು ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ಆದೇಶ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಕಲ್ಯಾಣದ ಹೆಬ್ಬಾಗಿಲಲ್ಲಿ ಕೈ-ಕಮಲ ಪೈಪೋಟಿ; ಖರ್ಗೆ ತವರಿನಲ್ಲಿ ಪ್ರತಿಷ್ಠೆಯ ಫೈಟ್

    NEET​ ಪರೀಕ್ಷಾರ್ಥಿಗಳಿಗೆ ಸಂಕಷ್ಟ ತಂದೊಡ್ಡಿದ ಪ್ರಧಾನಿ ಮೋದಿ ರೋಡ್​ ಶೋ!

    ಇಂದು ಬುದ್ಧ ಪೂರ್ಣಿಮೆ; ಪ್ರೀತಿಯ ಧರ್ಮ ಬೋಧಿಸಿದ ಗೌತಮ ಬುದ್ಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts