More

    ಬಿಜೆಪಿ ಪರ ಅಲೆಯಲ್ಲ, ಸುನಾಮಿಯೇ ಇದೆ! – ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ

    ಮುಧೋಳ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸರ್ವ ಸಮಾಜಕ್ಕೆ ಸಮಾನತೆ ನೀಡಿದ್ದಾರೆ. ಅದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದುವರಿಸಿದ್ದಾರೆ. ರಾಜ್ಯದಲ್ಲಿ ಮತ್ತೆ ಡಬಲ್ ಇಂಜಿನ್ ಸರ್ಕಾರ ಬಹುಮತದಿಂದ ಅಧಿಕಾರಕ್ಕೆ ಬರಲಿದೆ. ಈ ಬಾರಿ ಬಿಜೆಪಿ ಪರ ಅಲೆಯಲ್ಲ, ಸುನಾಮಿಯೇ ಇದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

    ನಗರದ ಶಿವಾಜಿ ವೃತ್ತದಿಂದ ಡಾ. ಅಂಬೇಡ್ಕರ್ ವೃತ್ತ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗೆ ಮುಧೋಳ ಎಸ್‌ಸಿ. ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪರ ಭರ್ಜರಿ ರೋಡ್ ಶೋ ನಡೆಸಿ, ಬಸ್ ನಿಲ್ದಾಣ ಬಳಿ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.

    ಈಗಾಗಲೇ ಅತಂತ್ರ ಸ್ಥಿತಿ ಉಂಟಾಗಿ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಜೆಡಿಎಸ್ ಕನಸು ಕಾಣುತ್ತಿದೆ ಹಾಗೂ ಸ್ವತಂತ್ರವಾಗಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಕಾಂಗ್ರೆಸ್ ರಾಜ್ಯದಲ್ಲಿ ಧೂಳೀಪಟವಾಗಲಿದೆ ಎಂದ ವಿಜಯೇಂದ್ರ, ನಿಮ್ಮೆಲ್ಲರ ಅಮೂಲ್ಯ ಮತಗಳ ಸಹಕಾರದಿಂದ ಗೋವಿಂದ ಕಾರಜೋಳ ಅವರು 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

    ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ಬ್ಯಾನ್ ಮಾಡುವುದಾಗಿ ಹೇಳಿದೆ. ಈಗಾಗಲೇ ತಾನೇ ಇಡೀ ದೇಶದಲ್ಲಿ ಬ್ಯಾನ್ ಆಗುವ ಸ್ಥಿತಿ ತಲುಪಿದೆ. ಈ ಬಾರಿ ರಾಜ್ಯದ ಜನತೆ ಕಾಂಗ್ರೆಸ್‌ಗೆ ಅವಕಾಶ ನೀಡುವುದಿಲ್ಲ. ಆದರೂ ಬಿಜೆಪಿ ಕಾರ್ಯಕರ್ತರು ನಿಮ್ಮ ಬೂತ್‌ನಲ್ಲಿ ಪಕ್ಷಕ್ಕೆ ಮತ ಹಾಕಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈಯನ್ನು ಬಲಪಡಿಸುವ ಕೆಲಸ ಮಾಡಬೇಕು ಎಂದರು.

    ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ. ಮುಧೋಳ ಅಭಿವೃದ್ಧಿಗಾಗಿ ಸತತ 20 ವರ್ಷಗಳಿಂದ ಶ್ರಮಿಸಿದ್ದು ನಿಮ್ಮ ಆಶೀರ್ವಾದ ಈ ಬಾರಿಯೂ ನೀಡಬೇಕು. ಇದು ನನ್ನ ಕೊನೆಯ ಚುನಾವಣೆಯಾಗಿದ್ದು, ನನಗೆ ಅಭೂತಪೂರ್ವ ಗೆಲುವನ್ನು ತಂದುಕೊಡಬೇಕು ಎಂದು ಮನವಿ ಮಾಡಿದರು.

    ಬಿಜೆಪಿ ಪರ ಅಲೆಯಲ್ಲ, ಸುನಾಮಿಯೇ ಇದೆ! - ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ

    ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮಾತನಾಡಿ, ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯ ಮತ್ತಷ್ಟು ಅಭಿವೃದ್ಧಿಯತ್ತ ಸಾಗಲಿದೆ. ಗೋವಿಂದ ಕಾರಜೋಳರ ಗೆಲುವು ನಮ್ಮೆಲ್ಲರ ಗೆಲುವು ಎಂದರು.
    ಬಿಜೆಪಿ ನಗರ ಘಟಕದ ಅಧ್ಯಕ್ಷ ಡಾ. ರವಿ ನಂದಗಾಂವ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನಾರಾಯಣ (ರಾಜು) ಯಡಹಳ್ಳಿ, ನಾಗಪ್ಪ ಅಂಬಿ, ಅನಂತರಾವ್ ಘೋರ್ಪಡೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts