More

    ಪ್ರಜಾಪ್ರಭುತ್ವ ಬಲಿಷ್ಠಕ್ಕಾಗಿ ಎಲ್ಲರೂ ವೋಟ್ ಮಾಡಿ

    ಬೀದರ್: ಪ್ರಜಾಪ್ರಭುತ್ವದ ಬಲಿಷ್ಠತೆಗಾಗಿ ಮೇ ೭ರಂದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಗೋವಿಂದರಡ್ಡಿ ಹೇಳಿದರು.

    ಮತದಾನ ಜಾಗೃತಿಗಾಗಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಡಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸೈಕಲ್ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತದಾನ ಜಾಗೃತಿಗಾಗಿ ನಗರ ಮತ್ರವಲ್ಲ, ಬೀದರ್ ಲೋಕಸಭಾ ಕ್ಷೇತ್ರದ ಎಲ್ಲ ಮತಗಟ್ಟೆ ವ್ಯಾಪ್ತಿಯಲ್ಲಿ ಜಿಲ್ಲಾ, ತಾಲೂಕು ಮತ್ತು ಗ್ರಾಮಗಳಲ್ಲಿ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.

    ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮ ರಾಷ್ಟ್ರೀಯ ಹಬ್ಬದಂತೆ ಆಚರಿಸಲು ಎಲ್ಲ ಮತಗಟ್ಟೆಗಳಲ್ಲಿ ಮೇ ೭ರವರೆಗೆ ಬಿಎಲ್‌ಒಗಳು ಧ್ವಜಾರೋಹಣ ಮಾಡುವರು. ನೀವು ಮತದಾನ ಮಾಡಿದರೆ ಸಾಲದು. ನಮ್ಮ ಮನೆಯವರು, ಅಕ್ಕಪಕ್ಕದವರು ಹಾಗೂ ಓಣಿಯ ಎಲ್ಲರಿಗೂ ಸಂವಿಧಾನ ನೀಡಿದ ಮತದ ಹಕ್ಕು ಚಲಾಯಿಸುವಂತೆ ತಿಳಿಹೇಳಬೇಕು ಎಂದು ಸಲಹೆ ನೀಡಿದರು.

    ಪ್ರಜಾಪ್ರಭುತ್ವ ಹಬ್ಬದಲ್ಲಿ ಎಲ್ಲರೂ ಪಾಲ್ಗೊಳ್ಳುವ ಮೂಲಕ ಹೆಚ್ಚೆಚ್ಚು ಮತದಾನ ಆಗುವಂತೆ ನೋಡಿಕೊಳ್ಳಬೇಕು. ಮತಗಟ್ಟೆಗಳ ಮೇಲೆ ಧ್ವಜಾರೋಹಣ ಮಾಡುವ ಉದ್ದೇಶ ಮತದಾರರಿಗೆ ತಮ್ಮ ಮತಗಟ್ಟೆ ಎಲ್ಲಿದೆ ಎಂಬುದು ತಿಳಿಸುವುದಾಗಿ ಎಂದರು.

    ಜಿಪಂ ಸಿಇಒ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಗಿರೀಶ್ ಬದೋಲೆ ಮಾತನಾಡಿ, ಲೋಕಸಭಾ ಕ್ಷೇತ್ರದ ಜನರು ಹೆಚ್ಚಿನ ಮತದಾನ ಮಾಡಬೇಕು. ಕಳೆದ ಚುನಾವಣೆಯಲ್ಲಿ ಶೇ.೬೪ ಮತದಾನವಾಗಿತ್ತು. ಈ ಸಲ ಶೇ.೮೦ಕ್ಕೂ ಹೆಚ್ಚು ವೋಟಿಂಗ್ ಆಗಬೇಕೆಂಬ ಉದ್ದೇಶದಿಂದ ಜಿಲ್ಲಾ ಸ್ವೀಪ್ ಸಮಿತಿಯಿಂದ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಮಾತನಾಡಿ, ಮತದಾನದ ಮಹತ್ವ ತಿಳಿಸಿಕೊಟ್ಟರು.

    ಬೀದರ್ ಕೋಟೆ ಆವರಣದಿಂದ ನೆಹರು ಕ್ರೀಡಾಂಗಣವರೆಗೆ ನಡೆದ ಸೈಕಲ್ ಜಾಥಾಕ್ಕೆ ಕ್ಷೇತ್ರ ಶಿಕ್ಷಾಣಾಧಿಕಾರಿ ಅಖಿಲಾಂಡೇಶ್ವರಿ ಚಾಲನೆ ನೀಡಿದರು. ಜಿಪಂನಲ್ಲಿರುವ ಮತಗಟ್ಟೆ, ತೋಟಗಾರಿಕೆ ಇಲಾಖೆ ಹಾಗೂ ಪ್ರಶಾಂತ ಮಾಶೆಟ್ಟಿ ಪದವಿ ಕಾಲೇಜಿನ ಮತಗಟ್ಟೆಗಳಲ್ಲಿ ಧ್ವಜಾರೋಹಣ ಮಾಡಲಾಯಿತು. ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಗೌತಮ ಅರಳಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಸಲೀಂ ಪಾಶಾ, ರೋಟರಿ ಕ್ಲಬ್ ಸದಸ್ಯರು, ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಶಾಲಾ-ಕಾಲೇಜು ಪಾಲ್ಗೊಂಡಿದ್ದರು.

    ಜಿಲ್ಲಾ ಸ್ವೀಪ್ ಸಮಿತಿಯಿಂದ ಸೈಕ್ಲೋಥಾನ್ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜಿಸಿದ್ದಕ್ಕೆ ಅಭಿನಂದನೆಗಳು. ಶೇ.೧೦೦ ಮತದಾನವಾದರೆ ಮಾತ್ರ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬರುತ್ತದೆ. ಹೀಗಾಗಿ ಮೇ ೭ರಂದು ಎಲ್ಲರೂ ತಮ್ಮ ತಮ್ಮ ಬೂತ್‌ಗಳಿಗೆ ತೆರಳಿ ಮತದಾನ ಮಾಡಬೇಕು.
    | ಚನ್ನಬಸವಣ್ಣ ಲಂಗೋಟಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts