

ನವದೆಹಲಿ: ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಸೇರಿದಂತೆ ಮತ್ತಿಬ್ಬರು ಭಯೋತ್ಪಾದಕರು ಎನ್‌ಕೌಂಟರ್ ನಲ್ಲಿ ಹತರಾಗಿದ್ದಾರೆ.
ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನ ರೆಡ್ವಾನಿ ಪಯೆನ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಸೋಮವಾರ ತಡರಾತ್ರಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದವು. ಇದು ಬುಧವಾರ ರಾತ್ರಿವರೆಗೂ ಮುಂದುವರಿದಿತ್ತು. ಈ ವೇಳೆ ಮೂವರು ಉಗ್ರರು ಭದ್ರತಾ ಪಡೆಗಳನ್ನು ಎದುರಿಸಿದರು. ಇದು ಎರಡೂ ಕಡೆಯಿಂದ ಗುಂಡಿನ ದಾಳಿಗೆ ಕಾರಣವಾಯಿತು. ಕಾರ್ಯಾಚರಣೆಯಲ್ಲಿ ಅಂತಿಮವಾಗಿ ಮೂವರು ಉಗ್ರರು ಹತರಾಗಿದ್ದಾರೆ.
ವಾಂಟೆಡ್ ಭಯೋತ್ಪಾದಕ ಬಸಿತ್ ಅಹ್ಮದ್ ದಾರ್, ಲಷ್ಕರ್-ಎ-ತೊಯ್ಬಾದ ಮೊಮಿನ್ ಗುಲ್ಜಾರ್ ಮತ್ತು ಫಹೀಮ್ ಅಹ್ಮದ್ ಬಾಬಾ ಮೃತ ಭಯೋತ್ಪಾದಕರು.
ಇವರು 18 ಮಂದಿ ಹತ್ಯೆಗೆ ಕಾರಣರಾಗಿದ್ದರು. ಇಂತಹ ದುಷ್ಕರ್ಮಿಗಳನ್ನು ಎನ್‌ಕೌಂಟರ್ ಮಾಡಿರುವುದು ದೊಡ್ಡ ಯಶಸ್ಸು ಎಂದು ಭದ್ರತಾ ಪಡೆಗಳು ತಿಳಿಸಿವೆ.
ಮೇ 4 ರಂದು ಪೂಂಚ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿಯಲ್ಲಿ ಭಾರತೀಯ ವಾಯುಪಡೆಯ ಅಧಿಕಾರಿಯೊಬ್ಬರು ಮೃತಪಟ್ಟಿದ್ದರು.