ಆದಿತ್ಯ ಎಲ್​-1 ಮಿಷನ್​: ಇಸ್ರೋದಿಂದ ತಿರುಪತಿಯಲ್ಲಿ ಮತ್ತೆ ಪೂಜೆ

R Somanath
Published on

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವತಿಯಿಂದ ಚಂದ್ರಯಾನ-3 ಸಲುವಾಗಿ ತಿರುಪತಿಯಲ್ಲಿ ಪೂಜೆ ನಡೆದಿದ್ದು, ಇದೀಗ ಸೂರ್ಯಯಾನ ವಿಚಾರದಲ್ಲಿ ಮತ್ತೊಮ್ಮೆ ತಿರುಪತಿಯಲ್ಲಿ ಪೂಜೆ ನಡೆದಿದೆ.

ಇಸ್ರೋ ಅಧ್ಯಕ್ಷ ಆರ್. ಸೋಮನಾಥ್ ಇಂದು ಆಂಧ್ರಪ್ರದೇಶದ ತಿರುಪತಿಯ ಚೆಂಗಲಮ್ಮ ಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ನಡೆಸಿದ್ದಾರೆ. ಇಸ್ರೋದ ಉದ್ದೇಶಿತ ಸೂರ್ಯಯಾನ ಆದಿತ್ಯ ಎಲ್​-1 ಮಿಷನ್ ಸಲುವಾಗಿ ಅವರು ಈ ಪೂಜೆಯನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ.

ಇಂದು ಬೆಳಗ್ಗೆ 7.30ಕ್ಕೆ ದೇವಸ್ಥಾನಕ್ಕೆ ಬಂದಿದ್ದ ಸೋಮನಾಥ್, ಪೂಜೆ ಸಲ್ಲಿಸಿ ಪ್ರಾರ್ಥನೆ ಕೈಗೊಂಡರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾಳೆ ಸೆ.2ರಂದು ಬೆಳಗ್ಗೆ 11.50ಕ್ಕೆ ಆದಿತ್ಯ ಎಲ್​-1 ಮಿಷನ್​ ಉಡಾವಣೆ ಆಗಲಿರುವ ಕುರಿತು ಮಾಹಿತಿ ನೀಡಿದರು.

ಚಂದ್ರಯಾನ-3ರ ಉಡಾವಣೆಯ ಹಿಂದಿನ ರಾತ್ರಿ ಇಸ್ರೋ ಅಧ್ಯಕ್ಷರು ಇದೇ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದ್ದರು. ಇಸ್ರೋ ಮುಖ್ಯಸ್ಥರು ಬಾಹ್ಯಾಕಾಶ ನೌಕೆ ಉಡಾವಣೆ ಸಂದರ್ಭದಲ್ಲೆಲ್ಲ ಈ ದೇವಸ್ಥಾನಕ್ಕೆ ಬಂದು ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸುವುದು 15 ವರ್ಷಗಳಿಂದ ಪದ್ಧತಿ ಆಗಿದೆ ಎಂದು ಚೆಂಗಲಮ್ಮ ಪರಮೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net