

ನವದೆಹಲಿ: ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾದ ಹೊಸ ಜೆರ್ಸಿ ಸೇರಿದಂತೆ ಕಿಟ್ಅನ್ನು ಬಿಸಿಸಿಐ ಹಾಗೂ ಅಡಿಡಾಸ್ ಕಂಪನಿ ಅನಾವರಣಗೊಳಿಸಿದೆ.
3 ಕಾ ಡ್ರೀಮ್ ಹಾಡಿನ ಮೂಲಕ ನೂತನ ಜೆರ್ಸಿಯನ್ನು ಬಿಸಿಸಿಐ ಹಾಗು ಅಡಿಡಾಸ್ ಬಿಡುಗಡೆ ಮಾಡಿದೆ. ಖ್ಯಾತ ಗಾಯಕ ರಫ್ತಾರ್ 3 ಕಾ ಡ್ರೀಮ್ ಹಾಡನ್ನು ಹಾಡಿದ್ದು, ಟೀಂ ಇಂಡಿಯಾದ ನಾಯಕ ರೊಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭಮನ್ ಗಿಲ್, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ಮತ್ತು ಮೊಹಮ್ಮದ್ ಸಿರಾಜ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಭಾರತ ತಂಡದ ಜೆರ್ಸಿ ಹಾಗೂ ಕಿಟ್‌ಗೆ ಒಪ್ಪಂದವನ್ನು ಎಂಪಿಎಲ್ ಸಂಸ್ಥೆಗೆ ನೀಡಲಾಗಿತ್ತು. ಆದರೆ, 2023ರ ಮೇನಲ್ಲಿ ಎಂಪಿಎಲ್ ಹಾಗೂ ಬಿಸಿಸಿಐ ನಡುವಣ ಒಪ್ಪಂದ ಅಂತ್ಯವಾಗಿತ್ತು. ತದನಂತರ ಅಡಿಡಾಸ್ ಜೊತೆ ಬಿಸಿಸಿಐ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಈ ಒಪ್ಪಂದದ ಹಣಕಾಸಿನ ವ್ಯವಹಾರದ ಬಗ್ಗೆ ಬಿಸಿಸಿಐ ಸಾರ್ವಜನಿಕವಾಗಿ ಬಹಿರಂಗಪಡಿಸಿರಲಿಲ್ಲ.
ಜೆರ್ಸಿ ಮೇಲಿರುವ ಬಿಸಿಸಿಐ ಚೆಹ್ನೆಯ ಮೇಲೆ ಮೂರು ಸ್ಟಾರ್‌ಗಳ ಬದಲು ಎರಡು ಸ್ಟಾರ್‌ಗಳನ್ನು ನೀಡಲಾಗಿದೆ. 1983 ಹಾಗೂ 2011ರ ಏಕದಿನ ವಿಶ್ವಕಪ್ ಗೆದ್ದಿರುವ ಸಲುವಾಗಿ ಎರಡು ಸ್ಟಾರ್‌ಗಳನ್ನು ನೀಡಲಾಗಿದೆ.
ಸೆಪ್ಟೆಂಬರ್ 22ರಿಂದ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಆರಂಭವಾಗಲಿದ್ದು, ಟೀಮ ಇಂಡಿಯಾ ವಿಶ್ವಕಪ್ ತಯಾರಿ ಆರಂಭಿಸಲಿದ್ದು, ಹಾಲಿ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಕೆ.ಎಲ್. ರಾಹುಲ್ ಟೀಂ ಇಂಡಿಯಾದ ಸಾರಥ್ಯ ವಹಿಸಲಿದ್ದಾರೆ.