ವೀರಶೈವ ಲಿಂಗಾಯತ ಸಮುದಾಯ ಒಬಿಸಿಗೆ ಸೇರಿಸಿ: ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡುವಂತೆ ಹಕ್ಕೊತ್ತಾಯ ಸಭೆ

Kashi Jagadguru Chandrashekhar
Published on

ಕಲಬುರಗಿ: ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡುವಂತೆ ಆಗ್ರಹ ವ್ಯಕ್ತವಾಗಿದೆ. ಕಲಬುರಗಿಯಲ್ಲಿ ನಡೆದ ವೀರಶೈವ ಲಿಂಗಾಯತ ಸಮಾಜದ ಒಬಿಸಿ ಸೇರ್ಪಡೆ ಹಕ್ಕೊತ್ತಾಯ ಸಭೆಯಲ್ಲಿ ಈ ಆಗ್ರಹ ವ್ಯಕ್ತವಾಗಿದೆ.

ಲಿಂಗಾಯತ ಸಮಾಜದಲ್ಲಿ 70ಕ್ಕಿಂತ ಹೆಚ್ಚು ಒಳಪಂಗಡಗಳು ಇವೆ. ವೀರಶೈವ ಸಮಾಜ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ, ಆರ್ಥಿಕವಾಗಿ ಹಿಂದುಳಿದಿದೆ. ಹೀಗಾಗಿ ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಸಮುದಾಯ ಸೇರಿಸಬೇಕು. ಅದಕ್ಕಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಆಗ್ರಹಿಸಿದ್ದಾರೆ.

ಪಂಚ‌ಪೀಠದ ಜಗದ್ಗುರುಗಳು, ಎಲ್ಲ ಮಠಾಧೀಶರು ಸೇರಿಕೊಂಡು ಈ ಸಭೆ ಮಾಡಿದ್ದೇವೆ. ಈ ಸಭೆಯಲ್ಲಿ ಮಾಡಿದ ನಿರ್ಣಯವನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ವೀರಶೈವ ಲಿಂಗಾಯತ ಸಮಾಜದ ಪರಿಸ್ಥಿತಿ ಬಗ್ಗೆ ಜಸ್ಟಿಸ್ ಚನ್ನಪ್ಪ ರೆಡ್ಡಿ ಆಯೋಗ ಸ್ಪಷ್ಟವಾಗಿ ತಿಳಿಸಿದೆ. ಆ ಆಯೋಗದ ವರದಿ ಆಧಾರದ ಮೇಲೆ ಸಮುದಾಯಕ್ಕೆ ಒಬಿಸಿ ಸ್ಥಾನಮಾನ ಸಿಗಬೇಕು. ಸಮುದಾಯವು ರಾಜ್ಯ ಸರ್ಕಾರದ ಒಬಿಸಿ ಪಟ್ಟಿಯಲ್ಲಿದ್ದು, ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಇರದೇ ಇರುವುದರಿಂದ ಅನ್ಯಾಯ ಆಗಿದೆ. ಈ ಸಮುದಾಯ ಸುಮಾರು 16 ಒಳಪಂಗಡಗಳು ಸೇರಿಸಿ ಇನ್ನುಳಿದವರನ್ನು ಕೈ ಬಿಟ್ಟಿದೆ, ಅಂತಹ ಕೈ ಬಿಟ್ಟ ಒಳಪಂಗಡಗಳನ್ನೂ ಸೇರಿಸಿಕೊಳ್ಳಬೇಕು ಎನ್ನುವುದು ನಮ್ಮ ಹಕ್ಕೊತ್ತಾಯ. ಈ ಕುರಿತಾಗಿ ಜೂನ್ 2 ರಂದು ಬೆಂಗಳೂರಿನಿಂದ ಹೋರಾಟ ಪ್ರಾರಂಭವಾಗಿದೆ. ಜೂನ್ 15 ರಂದು ಹುಬ್ಬಳ್ಳಿಯಲ್ಲಿ ಸ್ವರೂಪ ತಂದು ಕೊಡಲಾಗಿದೆ. ಇವತ್ತು ಕಲಬುರಗಿಯಲ್ಲಿ ಸಭೆ ಮಾಡುವ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಲಾಗಿದೆ ಎಂದರು.

ಈ ಹೋರಾಟದ ಮೊದಲ ಭಾಗವಾಗಿ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಸರ್ಕಾರದ ಗಮನ ಸೆಳೆಯಬೇಕಾಗಿದೆ. ಹಾಗಾಗಿ ಸಚಿವರು ಶಾಸಕರು ತಮ್ಮ ಭಾವನಗೆಳನ್ನು ವ್ಯಕ್ತ ಮಾಡಿದ್ದಾರೆ. ಜು.11ರಂದು ಬೆಂಗಳೂರಿನಲ್ಲಿ ಸಮಾಜದ ಎಲ್ಲ ಸಚಿವರು, ಶಾಸಕರು, ಪರಿಷತ್ ಸದಸ್ಯರ ಸಭೆ ಕರೆಯಲಾಗಿದೆ. ಅವರ ಮುಂದಾಳತ್ವದಲ್ಲಿ ನಿಯೋಗ ಮಾಡಲಾಗಿದ್ದು, ಆ ಮೂಲಕ ಮುಖ್ಯಮಂತ್ರಿಗೆ ಮನವಿ ಮಾಡಿ ರಾಜ್ಯ ಸರ್ಕಾರ ಶಿಫಾರಸು ಮಾಡುವಂತೆ ಮಾಡಲಾಗುವುದು ಎಂದರು. ಅದಾದ ಬಳಿಕ ಕೇಂದ್ರದ ಲೋಕಸಭೆಯ ಸದಸ್ಯರ ಸಭೆಯನ್ನ ಕರೆದು ಕೇಂದ್ರ ಸರ್ಕಾರದಿಂದ ಆದೇಶ ಹೊರಡಿಸುವ ಜವಾಬ್ದಾರಿಯನ್ನು ನೀಡಲಾಗುತ್ತದೆ. ಅಗತ್ಯವಾದರೆ ಗೃಹ ಸಚಿವ ಅಮಿತ್ ಷಾ, ಪ್ರಧಾನಿ ಮೋದಿಯನ್ನು ಕೂಡ ಭೇಟಿ ಮಾಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net