

ರಾಮನಗರ: ನಟಿ ನೀತೂ ಶೆಟ್ಟಿ ರಾಮನಗರದ ಸರ್ಕಾರಿ ಕಾಲೇಜು ಕಟ್ಟಡದ ಹಳೆಯ ಗೋಡೆಗಳಿಗೆ ಬಣ್ಣ ಬಳಿಯುವ ಮೂಲಕ ಸುದ್ದಿಯಲ್ಲಿದ್ದಾರೆ. ಅವರು ಕನ್ನಡ ಮಾನಸಗಳು ತಂಡದೊಂದಿಗೆ ಸ್ವಯಂಸೇವಕಿಯಾಗಿ ಗುರುತಿಸಿಕೊಂಡು ಸಮಾಜ ಸೇವೆ ಮುಂದುವರಿಸಿದ್ದಾರೆ.
ಈ ಸಂರ್ದಭದಲ್ಲಿ ಮಾತಾಡಿದ ನೀತೂ, “ಕಾಲೇಜಿನಲ್ಲಿ ಅನೇಕ ವಿದ್ಯಾರ್ಥಿನಿಯರು ಓದುತ್ತಿದ್ದಾರೆ ಎಂದು ನನಗೆ ತಿಳಿದಿತ್ತು, ಇದು ಗೋಡೆಗಳನ್ನು ಸರಿಪಡಿಸಲು ನಮಗೆ ಕಾರಣವಾಯಿತು. ಕಟ್ಟಡವು ಉತ್ತಮವಾಗಿ ಕಂಡುಬಂದರೆ, ಅವರು ಕನಿಷ್ಠ ಸೌಲಭ್ಯಗಳನ್ನು ಪಡೆಯಲು ದಾನಿಗಳನ್ನು ಸಂಪರ್ಕಿಸಬಹುದು ಅಂತ ನಮಗೆ ಅನಿಸಿತು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರು ದೈಹಿಕ ಶಿಕ್ಷಣಕ್ಕೆ ಹಾಜರಾಗಬೇಕಾದರೆ ಶೌಚಾಲಯಗಳು ಅತ್ಯಗತ್ಯ. ಹೀಗಾಗಿ ನಾವು ಮಾಡುವುದು ಇನ್ನೂ ತುಂಬಾ ಇದೆ' ಎಂದು ಹೇಳಿದ್ದಾರೆ.
ಖ್ಯಾತ ಪರಿಸರವಾದಿ ಸಾಲುಮರದ ತಿಮ್ಮಕ್ಕ ಅವರ ಭಾವಚಿತ್ರವನ್ನು ನಮ್ಮ ತಂಡ ಚಿತ್ರಿಸಿ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಸೌಕರ್ಯಗಳನ್ನು ಒದಗಿಸಲು ಸಾಕಷ್ಟು ಹಣದ ಅಗತ್ಯವಿದ್ದು, ಅವರಿಗೆ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಪ್ರಾಂಶುಪಾಲರೊಂದಿಗೆ ಮಾತಾಡುತ್ತಿರುವಾಗ ನನಗೆ ಗೊತ್ತಾಗಿದೆ. ಹೀಗಾಗಿ, ಕಾಲೇಜಿಗೆ ಬೆಂಬಲ ನೀಡಲು ನನ್ನ ಉದ್ಯಮದ ಸಹೋದ್ಯೋಗಿಗಳನ್ನು ಸಂಪರ್ಕಿಸಲು ಯೋಚಿಸಿದ್ದೇನೆ' ಎಂದು ನೀತೂ ತಿಳಿಸಿದ್ದಾರೆ.
35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಬಹಳಷ್ಟು ಖ್ಯಾತಿ ಪಡೆದಿರುವ ನಟಿಯ ಈ ಸಮಾಜ ಸೇವೆ ಸೋಷಿಯಲ್ ಮೀಡಿಯಾಗಳಲ್ಲಿ ಅವರ ಅಭಿಮಾನಿಗಳಿಂದ ಮತ್ತು ಹಲವರಿಂದ ಮೆಚ್ಚುಗೆ ಮಡೆಯುತ್ತಿದೆ. ನಟಿ ನೀತೂ '1988' ಎಂಬ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ, 'ಇಂದಿರ' ಮತ್ತು 'ಇರಲಾರದೆ ಇರುವೆ ಬಿಟ್ಕೊಂಡು' ಸಿನಿಮಾಗಳಲ್ಲಿ ಸಹ ಈ ನಟಿ ಮಿಂಚಲಿದ್ದಾರೆ.