

ಮುಂಬೈ: ಕಲಾವಿದರೆಂದರೆ ಹಾಗೆ ಅವರು ಇಹಲೋಕ ತ್ಯಜಿಸಿದ ಬಳಿಕವೂ ಅಪಾರ ಸಂಖ್ಯೆಯ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ನೆಲೆಯೂರಿರುತ್ತಾರೆ. ಸಿನಿಮಾಗಳಲ್ಲಿ ನಟಿಸುವ ಮುಖೇನ ತಮ್ಮ ಪಾತ್ರಗಳಿಗೆ ಜೀವ ತುಂಬುವ ಕಲಾವಿದರು, ತಮಗೆ ಸಿಗುವ ಪ್ರತಿಯೊಂದು ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಸಿನಿಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗುತ್ತಾರೆ. ಒಂದು ಬಾರಿ ಜನರ ಮನಸ್ಸನ್ನು ಗೆದ್ದರೇ, ಅವರ ಪ್ರೀತಿಯನ್ನು ಸಂಪಾದಿಸಿದರೆ ಮುಗಿತು, ಅಲ್ಲಿಂದ ಆ ನಟರ ಬಾಳು ಬೆಳಕಾಗುವುದು ಖಚಿತ. ಅದೇ ರೀತಿ ಇಲ್ಲೊಬ್ಬರು ನಟ ಕೇವಲ ಅಭಿನಯ ಮೂಲಕವೇ ಹಲವು ದಾಖಲೆಗಳನ್ನು ಬರೆದು ಇತಿಹಾಸ ನಿರ್ಮಿಸಿದ್ದಾರೆ.
ಇವರು ಇಂದು ನಮ್ಮೊಂದಿಗೆ ಇಲ್ಲ. ಆದ್ರೆ, ಈ ನಟನ ಹೆಸರು ಸಿನಿಪ್ರೇಕ್ಷಕರಲ್ಲಿ ಇಂದಿಗೂ ಅಚ್ಚಳಿಯದಂತೆ ಉಳಿದೆ. ಬರೋಬ್ಬರಿ 800 ಸಿನಿಮಾಗಳಲ್ಲಿ ನಟಿಸಿ, 59 ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಕಲಾವಿದ, ತಮ್ಮ ಹೆಸರನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸೇರುವಂತೆ ಮಾಡಿದ್ದಾರೆ. ಹಾಗಾದ್ರೆ, ಯಾರು ಈ ನಟರು? ಯಾವ ಚಿತ್ರರಂಗದವರು? ಇವರ ದುರಂತ ಸಾವಿಗೆ ಕಾರಣವೇನು ಎಂಬುದರ ಮಾಹಿತಿ ಹೀಗಿದೆ.
ನಾವು ಮಾತನಾಡುತ್ತಿದ್ದ ನಟ ಬೇರಾರು ಅಲ್ಲ, ಪಾಕಿಸ್ತಾನದ ಪ್ರಸಿದ್ಧ ನಟ ಸುಲ್ತಾನ್ ರಾಹಿ. ಇವರು ಸಾವನ್ನಪ್ಪಿ ಇಂದಿಗೆ 28 ವರ್ಷಗಳು ಕಳೆದಿವೆ. ಆದರೆ ರಾಹಿ ಅವರ ಹೆಸರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ನೋಂದಾಯಿಸಲಾಗಿದೆ. ಈ ರೆಕಾರ್ಡ್ನಲ್ಲಿ ಸುಲ್ತಾನ್ ಅವರನ್ನು ಅತ್ಯಂತ ಶ್ರೇಷ್ಠ ನಟ ಎಂದು ಹೆಸರಿಸಲಾಗಿದೆ. 40 ವರ್ಷಗಳ ತಮ್ಮ ನಟನಾ ವೃತ್ತಿಜೀವನದಲ್ಲಿ 800ಕ್ಕೂ ಅಧಿಕ ಚಲನಚಿತ್ರಗಳನ್ನು ಮಾಡಿ, 160 ಪ್ರಶಸ್ತಿಗಳನ್ನು ಪಡೆದ ಏಕೈಕ ಪಾಕಿಸ್ತಾನಿ ನಟ ಎಂಬ ಹೆಗ್ಗಳಿಕೆಗೆ ರಾಹಿ ಪಾತ್ರರಾಗಿದ್ದಾರೆ.
800 ಚಿತ್ರಗಳ ಪೈಕಿ 535 ಸಿನಿಮಾಗಳಲ್ಲಿ ರಾಹಿ ಪ್ರಮುಖ ಪಾತ್ರ ನಿರ್ವಹಿಸಿದ್ದು, 59 ಫಿಲಂಗಳಲ್ಲಿ ದ್ವಿಪಾತ್ರದಲ್ಲಿ ನಟಿಸಿದ ದಾಖಲೆಯನ್ನೂ ಕೂಡ ಹೊಂದಿದ್ದಾರೆ. ಅಂದು ಅವರ ಸಮಯದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟರಲ್ಲಿ ಸುಲ್ತಾನ್ ರಾಹಿ ಕೂಡ ಒಬ್ಬರು. ಸಿಲ್ವರ್ ಜುಬ್ಲಿ ಪಡೆದ 'ಮೌಲಾ ಜಟ್ಟ್' (1979) ಚಿತ್ರ ಬರೋಬ್ಬರಿ 15 ತಿಂಗಳುಗಳ ಕಾಲ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿತ್ತು. ಈ ಚಿತ್ರವನ್ನು ಕಲ್ಟ್ ಕ್ಲಾಸಿಕ್ ಎಂದು ಹೇಳಲಾಗಿದೆ.
ಇಂದಿಗೂ ಪಾಕಿಸ್ತಾನದಲ್ಲಿ ಸುಲ್ತಾನ್ ರಾಹಿ ಅವರನ್ನು 'ಕ್ಲಿಂಟ್ ಈಸ್ಟ್ವುಡ್' ಎಂದು ಕರೆಯಲಾಗುತ್ತದೆ. ತಮ್ಮ 40 ವರ್ಷಗಳ ವೃತ್ತಿಜೀವನದಲ್ಲಿ ಸುಮಾರು 703 ಪಂಜಾಬಿ ಸಿನಿಮಾ ಮತ್ತು 100 ಉರ್ದು ಚಲನಚಿತ್ರಗಳಲ್ಲಿ ಅವರು ನಟಿಸಿದ್ದು, ಸುಮಾರು 160ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಪಾಕಿಸ್ತಾನಿ ಚಿತ್ರರಂಗದ ನಕ್ಷೆಯನ್ನು ಬದಲಾಯಿಸಿದ ಮತ್ತು ಅದರ ಸುವರ್ಣ ಯುಗವನ್ನು ತಂದ ಕೀರ್ತಿ ಸುಲ್ತಾನ್ ರಾಹಿ ಅವರಿಗೆ ಸಲ್ಲುತ್ತದೆ.
ಸುಲ್ತಾನ್ ರಾಹಿ ದುರಂತ ಅಂತ್ಯ: ಚಿತ್ರರಂಗದಲ್ಲಿ ಯಶಸ್ವಿಯಾಗಿ, ತಮ್ಮ ಪಯಣ ಬೆಳೆಸಿದ ನಟ, ಅಂದಿನ ಟ್ರೆಂಡ್ಸೆಟರ್ ಆಗಿದ್ದರು. ಸುಲ್ತಾನ್ ರಾಹಿ ಅವರ ಜೀವನವು 1996ರಲ್ಲಿ ನಡೆದ ದುರಂತದಲ್ಲಿ ಕೊನೆಗೊಂಡಿತು. ಜನವರಿ 9, 1996ರಂದು ಸುಲ್ತಾನ್ ರಾಹಿ ಮತ್ತು ಅವರ ಸ್ನೇಹಿತ ಇಸ್ಲಾಮಾಬಾದ್ನಿಂದ ಲಾಹೋರ್ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕಾರಿನ ಟೈರ್ ಫ್ಲಾಟ್ ಆದ ಕಾರಣ ಅದನ್ನು ತಮ್ಮ ಸ್ನೇಹಿತನ ಸಹಾಯದಿಂದ ಬದಲಿಸುತ್ತಿದ್ದರು.
ಈ ಸಮಯದಲ್ಲಿ ಅವರ ಮೇಲೆ ದಾಳಿ ಮಾಡಿದ ಕಳ್ಳರ ಗ್ಯಾಂಗ್, ಬಂದೂಕಿನಿಂದ ಇಬ್ಬರಿಗೂ ಗುಂಡು ಹಾರಿಸಿದರು. ಘಟನೆಯಲ್ಲಿ ಗಾಯಗೊಂಡ ಸುಲ್ತಾನ್, ಗಂಭೀರ ಗಾಯಗಳಿಂದ ಬಳಲಿ ಸಾವನ್ನಪ್ಪಿದರು,(ಏಜೆನ್ಸೀಸ್).