ಫೆ.15ರಂದು ಜೆಪಿ ಅಭಿನಂದನಾ ಗ್ರಂಥ ಬಿಡುಗಡೆ: ವಿಶ್ರಾಂತ ಪ್ರಾಂಶುಪಾಲ ಡಾ.ಮ.ರಾಮಕೃಷ್ಣ ಮಾಹಿತಿ

Appreciation book release mandya
Published on

ಮಂಡ್ಯ: ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅವರ 75ನೇ ವರ್ಷದ ಜನ್ಮದಿನಾಚರಣೆ ಅಂಗವಾಗಿ ಅಭಿನಂದನೆ ಸಮಾರಂಭ, 1400 ಪುಟಗಳ ‘ರಂಗಾಭಿನಂದನ’ ಅಭಿನಂದನಾ ಗ್ರಂಥ ಮತ್ತು ನಾಥಪಥ ಎಂಟು ಸಂಪುಟಗಳ ಮಾಲಿಕೆ ಪ್ರಥಮ ಸಂಪುಟ ಲೋಕಾರ್ಪಣೆ ಸಮಾರಂಭ ಫೆ.15ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ವಿಶ್ರಾಂತ ಪ್ರಾಂಶುಪಾಲ, ಅಭಿನಂದನಾ ಗ್ರಂಥದ ಸಂಪಾದಕ ಡಾ.ಮ.ರಾಮಕೃಷ್ಣ ತಿಳಿಸಿದರು.

ಪ್ರೊ.ಬಿ.ಜಯಪ್ರಕಾಶಗೌಡ ಅಭಿನಂದನಾ ಸಮಿತಿಯಿಂದ ಅಂದು ಇಡೀ ದಿನ ವಿಶೇಷ ಕಾರ್ಯಕ್ರಮ ಆಯೋಸಲಾಗಿದೆ. ಬೆಳಗ್ಗೆ 10.30ಕ್ಕೆ ಸುಗಮ ಸಂಗೀತ, ರಂಗಗೀತೆ, ಜನಪದ ಪ್ರದರ್ಶನ ಕಲೆಗಳ ಉತ್ಸವದ ರಂಗ ಸಂಭ್ರಮವನ್ನು ಬೆಂಗಳೂರು ಕೇಂದ್ರ ವಲಯ ಪೊಲೀಸ್ ಮಹಾನಿರೀಕ್ಷಕ ಡಾ.ಬಿ.ಆರ್.ರವಿಕಾಂತೇಗೌಡ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ವಿಶ್ರಾಂತ ಪ್ರಾಂಶುಪಾಲರಾದ ಡಾ.ಡಿ.ಶ್ರೀನಿವಾಸ್, ಡಾ.ವಿ.ಕೆ.ಕೃಷ್ಣಪ್ಪ ಮತ್ತು ಅಭಿನವ ಭಾರತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶಿವಮೂರ್ತಿ ಕೀಲಾರ ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದಾರೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಧ್ಯಾಹ್ನ 2 ಗಂಟೆಗೆ ರಂಗಕರ್ಮಿ ಪ್ರೊ.ಎಚ್.ಎಸ್.ಉಮೇಶ್ ಅಧ್ಯಕ್ಷತೆಯಲ್ಲಿ ಆಯೋಜಿಸಿರುವ ಜೆಪಿ-ನೆನಪಿನಂಗಳದಲ್ಲಿ ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಧ್ಯಾಪಕ ಡಾ.ಗುರುಪಾದ ಮರಿಗುದ್ದಿ ‘ಸಾಹಿತ್ಯ ಚಟುವಟಿಕೆಗಳು’, ಗಾಯಕ ಡಾ.ಅಪ್ಪಗೆರೆ ತಿಮ್ಮರಾಜು ‘ಅಸ್ಮಿತೆಯ ಹುಡುಕಾಟ’, ಮಹಿಳಾಪರ ಚಿಂತಕಿ ಡಾ.ಕೆ.ಆರ್.ಸಂಧ್ಯಾರೆಡ್ಡಿ ‘ಒಡನಾಡಿಯಾಗಿ’ ಮತ್ತು ರಂಗಕರ್ಮಿ ಡಾ.ಶಶಿಧರ ಭಾರಿಘಾಟ್ ‘ರಂಗ ಸಂಘಟನೆ’ ಕುರಿತು ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಸಂಜೆ 4ಗಂಟೆಗೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಕೊಮ್ಮೇರಹಳ್ಳಿ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಲಿದ್ದಾರೆ. ಮಾಜಿ ಎಂಎಲ್‌ಸಿ ಬಿ.ರಾಮಕೃಷ್ಣ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಜಲಸಾರಿಗೆ ಮಂಡಳಿ ಸಿಇಒ ಜಯರಾಂ ರಾಯಪುರ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದರೆ, ಜೆಪಿ ದಂಪತಿಯನ್ನು ಮಾಜಿ ಶಾಸಕ ಎಂ.ಶ್ರೀನಿವಾಸ್ ಹಾಗೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದಿಸಲಿದ್ದಾರೆ. ಸಂಸ್ಕೃತಿ ವಿವಿ ವಿಶ್ರಾಂತ ಕುಲಪತಿ ಡಾ.ಪದ್ಮಾ ಶೇಖರ್ ಅಭಿನಂದನಾ ನುಡಿಗಳನ್ನಾಡಲಿದ್ದು, ಗ್ರಂಥ ಕುರಿತು ವಿಶ್ರಾಂತ ಪ್ರಾಂಶುಪಾಲ ಡಾ.ಮ.ರಾಮಕೃಷ್ಣ ಮಾತನಾಡಲಿದ್ದಾರೆ. ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ನಾಥಪಂಥ ಸಂಪುಟ-1 ಬಿಡುಗಡೆ ಮಾಡಲಿದ್ದು, ಸಂಪುಟ ಕುರಿತು ಸಾಹಿತಿ ಡಾ.ರಾಗೌ ಮಾತನಾಡಲಿದ್ದಾರೆ. ಗ್ರಂಥ ಹಾಗೂ ಸಂಪುಟದ ಪ್ರಧಾನ ಸಂಪಾದಕರು ಹಾಗೂ ಸಂಪಾದಕರನ್ನು ಶಾಸಕ ರವಿಕುಮಾರ್ ಗಣಿಗ ಅಭಿನಂದಿಸಲಿದ್ದಾರೆ ಎಂದು ವಿವರಿಸಿದರು.

ಸಮಿತಿಯ ಅಧ್ಯಕ್ಷ ಎಂ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಎಚ್.ಬಿ.ನಾಗಪ್ಪ ಹನಕೆರೆ, ಸದಸ್ಯರಾದ ಡಾ.ಎಸ್.ಬಿ.ಶಂಕರೇಗೌಡ, ಮಂಜುಳಾ ಉದಯಶಂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net