More

    ಅರಣ್ಯ ಪದವಿ ಪಡೆದವರಿಗೆ ಹುದ್ದೆ ಮೀಸಲಿಡಿ, ವಿದ್ಯಾರ್ಥಿಗಳಿಂದ ಶಿರಸಿಯಲ್ಲಿ ಪ್ರತಿಭಟನೆ

    ಶಿರಸಿ: ಅರಣ್ಯ ಇಲಾಖೆಯ ಆರ್​ಎಫ್​ಒ ಮತ್ತು ಡಿಆರ್​ಎಫ್​ಒ ಹುದ್ದೆಗಳ ನೇಮಕಾತಿಗೆ ಶೇ. 100ರಷ್ಟು ಅರಣ್ಯ ಪದವಿಯನ್ನೇ ಕನಿಷ್ಠ ವಿದ್ಯಾರ್ಹತೆಯನ್ನಾಗಿಸಬೇಕು ಎಂದು ಆಗ್ರಹಿಸಿ ನಗರದ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶನಿವಾರ ಪ್ರತಿಭಟನೆ ನಡೆಸಿದರು.
    ರಾಜ್ಯದ ಬೇರಾವ ಇಲಾಖೆಯಲ್ಲೂ ಇಲ್ಲದ ಸಮಸ್ಯೆ ಅರಣ್ಯ ಇಲಾಖೆಯಲ್ಲಿದೆ. ಕೃಷಿ, ಮೀನುಗಾರಿಕೆ ಸೇರಿ ಅನೇಕ ಇಲಾಖೆಗಳಲ್ಲಿ ಪ್ರಮುಖ ಹುದ್ದೆಗಳಿಗೆ ಆಯಾ ವಿಭಾಗದ ಪದವೀಧರರಿಗೆ ಮಾತ್ರ ಅವಕಾಶ ನೀಡಿ ನೇಮಕಾತಿ ಮಾಡಿಕೊಳ್ಳುತ್ತಾರೆ. ಆದರೆ, ಅರಣ್ಯ ಇಲಾಖೆಯಲ್ಲಿ ಆರ್​ಎಫ್​ಒ ಮತ್ತು ಡಿಆರ್​ಎಫ್​ಒ ಹುದ್ದೆಗಳಿಗೆ ಕೆಳ ಹಂತದ ನೌಕರರಿಗೆ ಪದೋನ್ನತಿ ನೀಡುವ ಮೂಲಕ ಶೇ. 50ರಷ್ಟು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ, ಅರಣ್ಯ ವಿಷಯ ಕಲಿತ ವಿದ್ಯಾರ್ಥಿಗಳು ಹುದ್ದೆಗಳಿಲ್ಲದೇ ಖಾಲಿ ಉಳಿಯುವಂತಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಅರಣ್ಯ ವಿಷಯ ಕಲಿತವರಿಗೆ ಶೇ. 75ರಷ್ಟು ಹುದ್ದೆಗಳು ಮತ್ತು ಪದೋನ್ನತಿ ಮೂಲಕ ಶೇ. 25ರಷ್ಟು ಹುದ್ದೆಗಳನ್ನು ಭರ್ತಿ ಮಾಡಲು ಆದೇಶಿಸಿದ್ದರು. ಆದರೆ, ಈಗ ಮತ್ತೆ ಈ ನಿಯಮದಲ್ಲಿ ಬದಲಾವಣೆ ತಂದು ಶೇ. 50ರಷ್ಟು ಹುದ್ದೆಗಳಿಗೆ ಪದೋನ್ನತಿಯ ಮೂಲಕವೇ ತುಂಬಿಕೊಳ್ಳಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.

    ವಿದ್ಯಾರ್ಥಿಗಳ ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಶಾಂತಾರಾಮ ಸಿದ್ದಿ, ಅರಣ್ಯ ಮಹಾವಿದ್ಯಾಲಯ ಸ್ಥಾಪನೆಯ ಉದ್ದೇಶವೇ ಅರಣ್ಯ ಇಲಾಖೆಗೆ ಅಗತ್ಯವಿರುವ ಸಿಬ್ಬಂದಿ ಸಿದ್ಧಪಡಿಸುವುದಾಗಿದೆ. ಪರಿಸರ ಉಳಿಯಬೇಕೆಂದರೆ ಅರಣ್ಯ ಉಳಿಯಬೇಕಿದೆ. ಅರಣ್ಯ ಇಲಾಖೆ ಸಿಬ್ಬಂದಿಗೆ ಅರಣ್ಯ ಜ್ಞಾನ ಅತ್ಯಗತ್ಯ. ವಿದ್ಯಾರ್ಥಿಗಳ ಬೇಡಿಕೆ ನ್ಯಾಯಯುತವಾಗಿದೆ. 12ರಿಂದ ಆರಂಭವಾಗುವ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸುವುದಲ್ಲದೇ ಅರಣ್ಯ ಸಚಿವರನ್ನೂ ಭೇಟಿಯಾಗಿ ಚರ್ಚೆ ನಡೆಸುತ್ತೇನೆ ಎಂದರು.
    ವಿದ್ಯಾರ್ಥಿ ಪ್ರಮುಖರಾದ ವೈಷ್ಣವಿ ಪಾಟೀಲ, ಯಶಸ್ ಟಿ., ವಿನಾಯಕ ಎಸ್., ಶಕೀಲ ಅಹಮ್ಮದ್, ಶಿವಾನಂದ ಕಾನಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts