ಅಮ್ಮನಿಗಾಗಿ ಹೆಸರು ಬದಲಿಸಿಕೊಂಡ ನಟ ವಿಜಯ್ ಸೂರ್ಯ

vijay
Published on

ಬೆಂಗಳೂರು: ಯಾರ ಮೇಲಾದರೂ ಚಾಲೆಂಜ್​ ಮಾಡಿದಾಗ ಅದಾಗದಿದ್ದರೆ ನನ್ನ ಹೆಸರು ಬದಲಿಸಿಕೊಳ್ಳುತ್ತೇನೆ ಎನ್ನುವುದು ಸಾಮಾನ್ಯ. ಆದರೆ ಇಲ್ಲೊಬ್ಬ ನಟ ಅಮ್ಮಂದಿರ ದಿನದಂದು ತನ್ನ ತಾಯಿಯ ಹೆಸರು ಸದಾ ನೆನಪಾಗುತ್ತಿರಬೇಕೆಂದು ಹೆಸರು ಬದಲಿಸಿಕೊಂಡಿದ್ದಾರೆ. ಅದೂ ಅಮ್ಮನ ಹೆಸರು ತನ್ನ ಹೆಸರಿನೊಂದಿಗೆ ಜೋಡಿಸಿಕೊಂಡು ಮಾದರಿಯಾಗಿದ್ದಾರೆ.

ಆಧುನಿಕತೆ ಥಳಕು ಹಾಕಿಕೊಂಡ ಮೇಲೆ ಅಜ್ಜಿ, ತಾತ, ಅಪ್ಪ, ಅಮ್ಮನ ಹೆಸರು ತಮ್ಮ ಮಕ್ಕಳಿಗೆ ಇಡುವುದನ್ನು ಜನ ಮರೆತರೂ, 'ಅಗ್ನಿಸಾಕ್ಷಿ' ಖ್ಯಾತಿಯ ನಟ ವಿಜಯ್ ಸೂರ್ಯ ತಮ್ಮ ಅಮ್ಮನಿಗಾಗಿ ಹೆಸರು ಬದಲಿಸಿಕೊಂಡಿದ್ದಾರೆ.

ಅಮ್ಮಂದಿರ ದಿನಾಚರಣೆಯಂದು ಅಮ್ಮನಿಗಾಗಿ ಹೆಸರು ಬದಲಿಸಿಕೊಳ್ಳುವುದರ ಜೊತೆಗೆ ಧನ್ಯವಾದ ತಿಳಿಸಿದ್ದಾರೆ.

ತಾಯಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, `ಇನ್ನೂ ಬೆಳಗಿದೆ. ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ' ಎಂದು ಎಂ.ಆರ್. ಕಮಲಾ ಅವರು ಬರೆದ ಈ ಸಾಲನ್ನು ಮನದಲ್ಲಿ ನೆನೆಯುತ್ತಾ ಅಮ್ಮನಿಗೊಂದು ಭಾವುಕ ನಮನ ಸಲ್ಲಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇಷ್ಟು ಹೇಳಿದರೆ ಸಾಕಾ? ಅಮ್ಮ ಪ್ರತಿ ಕ್ಷಣದ ಮಿಡಿತ ಅಲ್ವಾ? ಈ ಪ್ರಶ್ನೆ ನನ್ನನ್ನು ಸದಾ ಕಾಡಿದೆ. ಇದಕ್ಕೆ ಉತ್ತರ ಹುಡುಕಲು ಹೊರಟಾಗ ಅನ್ನಿಸಿದ್ದು, ನನ್ನ ಹೆಸರಿನಲ್ಲಿ ಅಮ್ಮನ ಹೆಸರು ಬೆರೆತರೆ ಹೇಗೆ ಎಂಬ ಭಾವ. ಅದನ್ನು ಅಳವಡಿಸಿಕೊಳ್ಳಲು ಅಮ್ಮಂದಿರ ದಿನಕ್ಕಿಂತ ವಿಶೇಷ ಸಂದರ್ಭ ಯಾವುದಿದೆ ಅಲ್ವಾ? ಎಂದು ಪ್ರಶ್ನಿಸಿದ್ದಾರೆ.

ಇಂದಿನಿಂದ(ಮೇ 12) ನಾನು ನನ್ನ ಹೆಸರನ್ನು ವಿಜಯ್ ಲಲಿತಾ ಸೂರ್ಯ ಎಂದು ಬದಲಿಸಿಕೊಳ್ಳುತ್ತಿದ್ದೇನೆ. ಲಲಿತಾ ನನ್ನ ಅಮ್ಮನ ಹೆಸರು. ನನ್ನ ಪಾಲಿನ ಉಸಿರು. ಜಗತ್ತಿನ ಎಲ್ಲ ಅಮ್ಮಂದಿರಿಗೂ ನನ್ನ ಶುಭಾಶಯಗಳು. ನಿಮ್ಮವನು ‘ವಿಜಯ್ ಲಲಿತಾ ಸೂರ್ಯ’ ಎಂದು ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net