

ಬೆಂಗಳೂರು: ರಾಜ್ಯವ್ಯಾಪಿ 'ಕಾಟೇರ' ಸಿನಿಮಾಗೆ ಲಭಿಸುತ್ತಿರುವ ವ್ಯಾಪಕ ಮೆಚ್ಚುಗೆಗೆ ಫಿದಾ ಆಗಿರುವ ನಟ ದರ್ಶನ್, ಇತ್ತೀಚೆಗೆ ತಮ್ಮ ವತಿಯಿಂದ ಹಾಗೂ ಚಿತ್ರತಂಡದ ಪರವಾಗಿ ಸಿನಿಪ್ರೇಕ್ಷಕರಿಗೆ ವಿಶೇಷ ಧನ್ಯವಾದ ತಿಳಿಸಿದ್ದರು. ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ಉತ್ತಮ ಆರಂಭವನ್ನು ಕಂಡಿದ್ದು, ಸದ್ಯ ಈ ಸಂಭ್ರಮದಲ್ಲಿರುವ ದರ್ಶನ್ ತಮ್ಮ ನೆಚ್ಚಿನ ಸೆಲೆಬ್ರಿಟಿಗಳೊಡನೆ ಹೊಸ ವರ್ಷ ಆಚರಿಸಲು ಸಜ್ಜಾಗಿದ್ದಾರೆ.
'ಕಾಟೇರ' ಚಿತ್ರದ ಸಂಭ್ರಮಾಚರಣೆ ಹಾಗೂ ಹೊಸ ವರ್ಷದ ಆಚರಣೆ ಎರಡನ್ನೂ ತಮ್ಮ ನೆಚ್ಚಿನ ಸೆಲೆಬ್ರಿಟಿಗಳ ಜತೆ ಸಂಭ್ರಮಿಸಲು ಸೋಮವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಓರಾಯನ್ ಮಾಲ್ಗೆ ಬರಲಿದ್ದಾರೆ. ಈ ಸಮಯಕ್ಕೆ ಜನರು ಭೇಟಿ ನೀಡಬಹುದಾಗಿದೆ.
ಅಭಿಮಾನಿಗಳ ಜತೆ ಸಿನಿಮಾದ ಯಶಸ್ಸನ್ನು ಸಂಭ್ರಮಿಸಿ, ಮಾತನಾಡಲಿರುವ ದರ್ಶನ್ಗೆ ಕಾಟೇರ ಚಿತ್ರತಂಡವೂ ಸಾಥ್ ನೀಡಲಿದೆ. ಯಶಸ್ಸಿನ ಖುಷಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ದರ್ಶನ್, "ಏನೆಂದು ನಾ ಹೇಳಲಿ, ನಿಮ್ಮಯ ಪ್ರೀತಿ-ಆಶೀರ್ವಾದಕೆ ಕೊನೆಯಲ್ಲಿ! ಧನ್ಯೋಸ್ಮಿ ಸೆಲೆಬ್ರಿಟಿಸ್! ಹೃದಯಪೂರ್ವಕ ಧನ್ಯವಾದಗಳು ಕರ್ನಾಟಕ. ಈ ಪ್ರೀತಿಯ ಚಪ್ಪಾಳೆ ನಮ್ಮ ಕಾಟೇರ ಚಿತ್ರತಂಡದ ಮನತುಂಬಿದೆ. ಸ್ಪೀಚ್ಲೆಸ್" ಎಂದು ಬರೆದು, ಪೋಸ್ಟ್ ಮಾಡಿದ್ದರು.