ಬೆಂಗಳೂರು: ಮಠ, ಎದ್ದೇಳು ಮಂಜುನಾಥ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ (Guruprasad) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಸಾಲಗಾರರ ಕಾಟಕ್ಕೆ ಹೆದರಿ ಸಾವಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಅವರ ಸಾವಿಗೆ ಇಡೀ ಚಿತ್ರರಂಗವೇ ಕಂಬನಿ ಮಿಡಿದಿದೆ. ಇದೀಗ ಗುರುಪ್ರಸಾದ್ ಬಗ್ಗೆ ನಟ ಡಾಲಿ ಧನಂಜಯ್ ಬಹಳ ಹಿಂದೆಯೇ ಮಾತನಾಡಿದ್ದ ವಿಡಿಯೋವೊಂದು ಭಾರಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ.
ಗುರುಪ್ರಸಾದ್ ನಿರ್ದೇಶನದ “ಡೈರೆಕ್ಟರ್ ಸ್ಪೆಷಲ್” ಸಿನಿಮಾದಲ್ಲಿ ಧನಂಜಯ್ ನಟಿಸಿದ್ದರು. ಈ ಸಿನಿಮಾದ ಶೂಟಿಂಗ್ ವೇಳೆ ನಡೆದ ಘಟನೆಯೊಂದರ ಬಗ್ಗೆ ಧನಂಜಯ್ ಮಾತನಾಡಿದ್ದ ಹಳೆಯ ವಿಡಿಯೋವೊಂದು ಗುರುಪ್ರಸಾದ್ ನಿಧನದ ಬೆನ್ನಲ್ಲೇ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ಎಂಬುದನ್ನು ನಾವೀಗ ನೋಡೋಣ.
ನಾನು ಎಲ್ಲವನ್ನು ಹೇಳುವುದಕ್ಕೆ ಇಷ್ಟಪಡುವುದಿಲ್ಲ. ಆದರೆ, ನಿಮ್ಮಿಂದ ಆದ ಒಂದೇ ಒಂದು ದೊಡ್ಡ ನೋವನ್ನು ಜನಗಳ ಮುಂದೆ ಹೇಳಲು ಬಯಸುತ್ತೇನೆ ಎಂದು ವಿಡಿಯೋದಲ್ಲಿ ಮಾತು ಆರಂಭಿಸಿರುವ ಧನಂಜಯ್, ನಿಮಗೆ ನೆನಪಿರಬಹುದು ಡೈರೆಕ್ಟರ್ ಸ್ಪೆಷಲ್ ಸಿನಿಮಾ ಸಮಯದಲ್ಲಿ ಒಂದು ರಿಯಾಲಿಟಿ ಶೋ ಅಂದರೆ, ಕನ್ನಡದ ಕೋಟ್ಯಧಿಪತಿಗೋಸ್ಕರ ಚೆನ್ನೈಗೆ ಹೋಗ್ತಾ ಇದ್ರಿ, ಈ ವೇಳೆ ಡೈರೆಕ್ಟರ್ ಸ್ಪೆಷಲ್ ಸಿನಿಮಾದ ಒಂದೇ ಒಂದು ಸಾಂಗ್ ಶೂಟಿಂಗ್ ಉಳಿದುಕೊಂಡಿತ್ತು. ಅದು ಕೂಡ ಐಟಂ ಸಾಂಗ್. ಆ ಸಾಂಗ್ನ ಒಂದೇ ಒಂದು ದೃಶ್ಯದಲ್ಲಿ ಮಾತ್ರ ನಾನು ಬರಬೇಕಿತ್ತು. ಆ ಒಂದು ದೃಶ್ಯಕ್ಕೋಸ್ಕರ ಗಡ್ಡ, ಮೀಸೆ ಬಿಟ್ಟುಕೊಂಡು 8 ತಿಂಗಳು ಕಾದಿದ್ದೇನೆ. ನೀವು ಚೆನ್ನೈನಿಂದ ವಾಪಸ್ ಬಂದಾಗ ಒಂದು ದಿನ ನಿಮ್ಮ ಆಫೀಸ್ಗೆ ಬಂದಿದ್ದೆ. ಈ ವೇಳೆ ಗುರುಗಳೇ ನನಗೆ ತುಂಬಾ ಹತಾಶೆಯಾಗುತ್ತಿದೆ, ಗಡ್ಡ, ಕೂದಲು ಬಿಟ್ಟು ಮೂರ್ನಾಲ್ಕು ವರ್ಷಗಳಾಯಿತು, ದಯವಿಟ್ಟು ಇದನ್ನು ತೆಗೆಯುತ್ತೇನೆ, ಅದೊಂದು ಸಾಂಗ್ ಶೂಟಿಂಗ್ ಮುಗಿಸಿಕೊಡಿ ಎಂದು ಕೇಳಿದ್ದೆ. ಅದಕ್ಕೆ ನೀವು, ಬೇಸರವಾಗುತ್ತಿದೆಯಾ ಧನಂಜಯ್, ಆತ್ಮಹತ್ಯೆ ಮಾಡಿಕೊಳ್ಳಿ ನಮ್ಮ ಸಿನಿಮಾಗೆ ಪ್ರಚಾರ ಆಗುತ್ತದೆ ಎಂದು ಹೇಳಿದ್ರಿ. ಅಂದು ನಾನು ಆಫೀಸ್ನಿಂದ ನಗುತ್ತಾ ಆಚೆ ಬಂದವನು ಮತ್ತೆ ನಿಮ್ಮ ಆಫೀಸ್ ಕಡೆ ಬರಲೇ ಇಲ್ಲ. ನೀವಾಗಿ ನೀವೇ ಕರೆದ ಬಳಿಕ ನಾನು ಎರಡನೇ ಬಾರಿಗೆ ನಿಮ್ಮ ಆಫೀಸ್ಗೆ ಬಂದೆ. ಅಂದು ಆ ಬೇಸರದಲ್ಲಿ ನಾನು ಜಯನಗರ 4ನೇ ಬ್ಲಾಕ್ ಶಾರ್ಟ್ ಫಿಲ್ಮ್ ಮಾಡಿದೆ. ಒಂದು ಬೇಸರವನ್ನು ಯಾವ ರೀತಿ ಪಾಸಿಟಿವ್ ಆಗಿ ಹೊರಹಾಕಬಹುದು ಎಂದು ತೋರಿಸಿದ್ದೆ ಜಯನಗರ 4ನೇ ಬ್ಲಾಕ್ ಶಾರ್ಟ್ ಫಿಲ್ಮ್. ಅದಾಗಿದ್ದು ನಿಮ್ಮಿಂದ. ನೀವು ಆತ್ಮಹತ್ಯೆ ಮಾಡಿಕೊಳ್ಳಿ ಎಂದು ಹೇಳಿದ್ದನ್ನು ನಾನು ಯಾರಾತ್ರಾನೂ ಹೇಳಿಕೊಳ್ಳಲಾಗದೇ ಅದೇ ನೋವಿನಲ್ಲಿ ಶಾರ್ಟ್ ಫಿಲ್ಮ್ ಮಾಡಿದೆ ಎಂದು ವಿಡಿಯೋದಲ್ಲಿ ಧನಂಜಯ್ ಹೇಳಿದ್ದಾರೆ.
ಧನಂಜಯ್ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಗುರುಪ್ರಸಾದ್ ಆತ್ಮಹತ್ಯೆಯು ಅವರ ಕರ್ಮದ ಫಲ ಎಂದು ಹೇಳುತ್ತಿದ್ದಾರೆ. ನಟ ಜಗ್ಗೇಶ್ ಅವರನ್ನು ಬೈಯ್ಯುವವರು ದಯವಿಟ್ಟು ಈ ವಿಡಿಯೋ ನೋಡಿ ಎನ್ನುತ್ತಿದ್ದಾರೆ. ಗುರುಪ್ರಸಾದ್ ಸಾವಿನ ಬಳಿಕ ಮಾತನಾಡಿದ್ದ ಜಗ್ಗೇಶ್, ಆತನಿಗೆ ಅತಿಯಾದ ಕುಡಿತದ ಚಟವಿತ್ತು. ಕುಡಿದು ಕುಡಿದು ಹಾಳಾಗಿದ್ದ. ಆತ ಈ ನಿರ್ಧಾರ ತೆಗೆದುಕೊಂಡಿದ್ದು ನೋವಾಯಿತು. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೊದಲೇ ಸಾವಿರ ಸಲ ಹೇಳಿದ್ದ ಎಂದರು. ಅಲ್ಲದೆ, ಆತ ಬಿಜೆಪಿ ವಿರೋಧಿ. ಅವನು ಎಡಪಂಥಿಯ ಚಿಂತಕನಾಗಿದ್ದ. ನನ್ನ ಮಾನ ಮರ್ಯಾದೆ ಹರಾಜು ಹಾಕ್ತೀನಿ ಎಂದಿದ್ದ. ಸಿನಿಮಾ ಬಳಿಕ ಈ ವಿಚಾರ ನನಗೆ ಗೊತ್ತಾಗಿತ್ತು. ಇದರಿಂದ ಭಯವಾಗಿ, ಸಿನಿಮಾ ತೋರಿಸು ಎಂದು ಕೇಳಿದ್ದೆ. ಆದರೆ, ಆತ ತೋರಿಸಲಿಲ್ಲ. ಮನುಷ್ಯನಿಗೆ ಮಾತಿನಲ್ಲಿ ನಿಗಾ ಇರಬೇಕು. ಕೆಲಸದಲ್ಲಿ ಬದ್ಧತೆ ಇರಬೇಕು. ಈ ಎರಡು ಇಲ್ಲದಾಗ ಈ ರೀತಿ ಆಗುತ್ತೆ. ಅವನ ಅತಿಯಾದ ಕುಡಿತದ ಚಟ ಅವನನ್ನ ಸಾಲಗಾರನ್ನಾಗಿ ಮಾಡಿತ್ತು ಎಂದು ಜಗ್ಗೇಶ್ ಹೇಳಿದ್ದರು. ಈ ವೇಳೆ ಜಗ್ಗೇಶ್ ಅವರ ಮಾತಿಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಇದೀಗ ಧನಂಜಯ್ ವಿಡಿಯೋ ನೋಡಿದವರು ಜಗ್ಗೇಶ್ ಹೇಳಿದ್ದು ಸರಿಯಾಗಿದೆ ಎನ್ನುತ್ತಿದ್ದಾರೆ.
ಅಂದಹಾಗೆ ಗುರುಪ್ರಸಾದ್ ಅವರು ಬೆಂಗಳೂರಿನ ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು. ಅವರ ರೂಮಿನಿಂದ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿತು. ಕೆಲ ತಿಂಗಳ ಹಿಂದಷ್ಟೇ ಇವರ ನಿರ್ದೇಶನದ ರಂಗನಾಯಕ ಚಿತ್ರ ರಿಲೀಸ್ ಆಗಿತ್ತು. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದ್ದ ಈ ಚಿತ್ರವು ಬಾಕ್ಸ್ಆಫೀಸ್ನಲ್ಲಿ ಹೀನಾಯವಾಗಿ ಸೋಲುಂಡಿತ್ತು. ಸಾಲಬಾಧೆ ತಾಳಲಾರದೆ ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಈ ಬಗ್ಗೆ ಇನ್ನಷ್ಟೇ ಅಧಿಕೃತವಾಗಬೇಕಿದೆ.
1972ನೇ ನವೆಂಬರ್ 2 ಗುರುಪ್ರಸಾದ್ ಜನಿಸಿದ್ದರು. ರಾಮನಗರ ಜಿಲ್ಲೆಯ ಕನಕಪುರದಲ್ಲಿ ಗುರುಪ್ರಸಾದ್ ಜನಿಸಿದರು.2006 ರಲ್ಲಿ ಮಠ ಸಿನೆಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಆದರು. ಬಳಿಕ ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್, ರಂಗ ನಾಯಕ ಹಾಗೂ ಎರಡನೇ ಸಲ ಸೇರಿದಂತೆ ಹಲವು ಸಿನಿಮಾ ನಿರ್ದೇಶನ ಮಾಡಿದ್ದರು. ಎದ್ದೇಳು ಮಂಜುನಾಥ ಚಲನಚಿತ್ರದ ಅತ್ಯುತ್ತಮ ಚಿತ್ರಕಥೆಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಬಂದಿತ್ತು.
ನಾಲ್ಕು ವರ್ಷದಿಂದ ಕೋಮಾದಲ್ಲಿದ್ದಾರೆ ಈ ಸ್ಟಾರ್ ನಟನ ಪತ್ನಿ! ಟ್ಯೂಬ್ ಮೂಲಕವೇ ಆಹಾರ | Actor Wife in Coma