

ಡಲ್ಲಾಸ್: ಚುಟುಕು ವಿಶ್ವ ಸಮರಕ್ಕೆ ಇಂದು (ಜೂನ್ 02) ಅಧಿಕೃತ ಚಾಲನೆ ದೊರೆತ್ತಿದ್ದು, ಉದ್ಘಾಟನಾ ಪಂದ್ಯದಲ್ಲಿ ಯುಎಸ್ಯ ಹಾಗೂ ಕೆನೆಡಾ ತಂಡಗಳು ಮುಖಾಮುಖಿಯಾಗಿವೆ. ಇಲ್ಲಿನ ಡಲ್ಲಾಸ್ನಲ್ಲಿ ನಡೆದ 9ನೇ ಆವೃತ್ತಿಯ ಟಿ20 ವಿಶ್ವಕಪ್ನ ಮೊದಲ ಪಂದ್ಯದಲ್ಲಿ ರನ್ ಮಳೆಯೇ ಸುರಿದಿದ್ದು, ಮೊದಲ ಪಂದ್ಯದಲ್ಲಿ ಯುಎಸ್ಎ ಭರ್ಜರಿ ಪ್ರದರ್ಶನದ ಮೂಲಕ ಗೆಲುವಿನ ನಗೆ ಬೀರಿದೆ.
ಡಲ್ಲಾಸ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆನೆಡಾ ನವನೀತ್ ಧಳಿವಾಲ್ (61 ರನ್, 44 ಎಸೆತ, 6 ಬೌಂಡರಿ, 3 ಸಿಕ್ಸರ್), ನಿಕೋಲಸ್ ಕೀರ್ಟಾನ್ (51 ರನ್, 31 ಎಸೆತ, 3 ಬೌಂಡರಿ, 2 ಸಿಕ್ಸರ್) ಅರ್ಧಶತಕಗಲ ಬಲದಿಂದ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 194 ರನ್ ಪೇರಿಸಿತ್ತು.
ಬೃಹತ್ ಗುರಿ ಬೆನ್ನತ್ತಿದ್ದ ಯುಎಸ್ಎ ತಂಡವು ಆರನ್ ಜೋನ್ಸ್ (94 ರನ್, 40 ಎಸೆತ, 4 ಬೌಂಡರಿ, 10 ಸಿಕ್ಸರ್), ಆ್ಯಂಡ್ರಿಯಿಸ್ ಗೌಸ್ (65 ರನ್, 46 ಎಸೆತ, 7 ಬೌಂಡರಿ, 3 ಸಿಕ್ಸರ್) ಅರ್ಧಶತಕಗಳ ಫಲವಾಗಿ 17.4 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿ ಗೆಲುವಿನ ನಗೆ ಬೀರಿತ್ತು.
ಈ ಭರ್ಜರಿ ಗೆಲುವಿನೊಂದಿಗೆ ಯುಎಸ್ಎ ಗರಿಷ್ಠ ಸ್ಕೋರ್ ಚೇಸ್ ಮಾಡಿದ ದಾಖಲೆ ಬರೆದಿದೆ. ಇದಕ್ಕೂ ಮುನ್ನ ಅಮೆರಿಕ ತಂಡವು 169 ರನ್ಗಳನ್ನು ಚೇಸ್ ಮಾಡಿರುವುದು ಅತ್ಯುತ್ತಮ ಸಾಧನೆಯಾಗಿತ್ತು. ಇದೀಗ ಟಿ20 ವಿಶ್ವಕಪ್ನ ಚೊಚ್ಚಲ ಪಂದ್ಯದಲ್ಲೇ ಅಬ್ಬರಿಸುವ ಮೂಲಕ ಐತಿಹಾಸಿಕ ಗೆಲುವು ದಾಖಲಿಸುವಲ್ಲಿ ಯುಎಸ್ಎ ತಂಡ ಯಶಸ್ವಿಯಾಗಿದೆ.
ಯುಎಸ್ಎ ಪರ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆರನ್ ಜೋನ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಆರೋನ್ ಸಿಕ್ಸ್ - ಫೋರ್ಗಳ ಸುರಿಮಳೆಗೈದರು. ಈ ಮೂಲಕ ಕೇವಲ 40 ಎಸೆತಗಳಲ್ಲಿ 10 ಭರ್ಜರಿ ಸಿಕ್ಸ್ ಸಿಡಿಸಿದರು. ಈ ಹತ್ತು ಸಿಕ್ಸ್ಗಳೊಂದಿಗೆ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯಧಿಕ ಸಿಕ್ಸ್ ಸಿಡಿಸಿದ ಆರಂಭಿಕನಲ್ಲದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಆರೋನ್ ಜೋನ್ಸ್ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಸೌತ್ ಆಫ್ರಿಕಾದ ರೈಲಿ ರೊಸ್ಸೊವ್ ಹೆಸರಿನಲ್ಲಿತ್ತು. 2007 ರ ಟಿ20 ವಿಶ್ವಕಪ್ನಲ್ಲಿ ರೊಸ್ಸೊವ್ 8 ಸಿಕ್ಸ್ ಸಿಡಿಸಿ ಈ ದಾಖಲೆ ನಿರ್ಮಿಸಿದ್ದರು. ಇದೀಗ ಆರೋನ್ ಜೋನ್ಸ್ ಈ ದಾಖಲೆ ಮುರಿದಿದ್ದಾರೆ.
ಇದಲ್ಲದೆ ಟಿ20 ವಿಶ್ವಕಪ್ನ ಉದ್ಘಾಟನಾ ಪಂದ್ಯದಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಕ್ರಿಸ್ ಗೇಲ್ ಅವರ ವಿಶ್ವ ದಾಖಲೆಯನ್ನು ಕೂಡ ಸರಿಗಟ್ಟಿದ್ದಾರೆ. 2007ರ ಟಿ20 ವಿಶ್ವಕಪ್ನ ಉದ್ಘಾಟನಾ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಕ್ರಿಸ್ ಗೇಲ್ 57 ಎಸೆತಗಳಲ್ಲಿ 10 ಸಿಕ್ಸ್ ಬಾರಿಸಿ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ್ದರು. ಇದೀಗ ಕೆನಡಾ ವಿರುದ್ಧ 10 ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಆರೋನ್ ಜೋನ್ಸ್ ಕ್ರಿಸ್ ಗೇಲ್ ಹೆಸರಿನಲ್ಲಿದ್ದ ಅಪರೂಪದ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಲ್ಲದೇ ಟಿ20 ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಎರಡನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಕ್ರಿಸ್ ಗೇಲ್ (100) ಅಗ್ರಸ್ಥಾನದಲ್ಲಿದ್ದು, ಇದೀಗ 94 ರನ್ ಬಾರಿಸಿರುವ ಜೋನ್ಸ್ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.
ಇನ್ನು ಟಿ20 ವಿಶ್ವಕಪ್ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಐಸಿಸಿ ಅಸೋಸಿಯೇಟ್ ದೇಶದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಕೂಡ ಜೋನ್ಸ್ ತಮ್ಮದಾಗಿಸಿಕೊಂಡಿದ್ದಾರೆ. ಇದರ ಜೊತೆಗೆ ಟಿ20 ಕ್ರಿಕೆಟ್ನಲ್ಲಿ ಯುಎಸ್ಎ ಪರ ಅತೀ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಕೂಡ ಆರೋನ್ ಜೋನ್ (22 ಎಸೆತಗಳು) ಪಾಲಾಗಿದೆ.