

ನವದೆಹಲಿ: ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನ (ಏಳನೇ ಹಂತ) ಜೂನ್ 02ರಂದು ಕೊನೆಗೊಂಡಿದ್ದು, ಮತದಾನ ಮುಗಿದ ಕೆಲವೇ ಕ್ಷಣಗಳಲ್ಲಿ ಹಲವು ಮಾಧ್ಯಮಗಳು ಎಕ್ಸಿಟ್ ಪೋಲ್ ವರದಿಗಳನ್ನು ಬಿತ್ತರಿಸಿವೆ. ಇತ್ತ ಎಕ್ಸಿಟ್ ಪೋಲ್ ವರದಿ ಬಿಡುಗಡೆಯಾಗುತ್ತಿದ್ದಂತೆ ರಾಜಕೀಯ ನಾಯಕರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಎಎಪಿ ನಾಯಕರೊಬ್ಬರು ನೀಡಿರುವ ಹೇಳಿಕೆ ಸಖತ್ ವೈರಲ್ ಆಗುತ್ತಿದೆ.
ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಸೋಮನಾಥ್ ಭಾರತಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ನಾನು ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾರೆ. ಇವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಟೀಕಿಸಿ ಕಮೆಂಟ್ ಮಾಡುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ಸೋಮನಾಥ್ ಭಾರತಿ, ನನ್ನ ಮಾತನ್ನು ನೆನಪಿಟ್ಟುಕೊಳ್ಳಿ ಮೋದಿ ಮೂರನೇ ಬಾರಿಗೆ ಪ್ರಧಾನಿಯಾದರೆ ನಾನು ನನ್ನ ತಲೆ ಬೋಳಿಸಿಕೊಳ್ಳುತ್ತೇನೆ. ಸದ್ಯ ಪ್ರಕಟವಾಗಿರುವ ಎಕ್ಸಿಟ್ ಪೋಲ್ಗಳ ವರದಿಯು ಜೂನ್ 04ರಂದು ಸುಳ್ಳಾಗುತ್ತವೆ. ನರೇಂದ್ರ ಮೋದಿ ಮೂರನೇ ಭಾರಿ ಪ್ರಧಾನಿಯಾಗುವುದಿಲ್ಲ.
ದೆಹಲಿಯ ಎಲ್ಲಾ ಏಳು ಸ್ಥಾನಗಳಲ್ಲಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಮೋದಿಯ ಭಯದಿಂದಾಗಿ ಎಕ್ಸಿಟ್ ಪೋಲ್ಗಳು ಸುಳ್ಳು ವರದಿಗಳನ್ನು ಪ್ರಕಟಿಸಿವೆ. ಜೂನ್ 04ರಂದು ನಿಜವಾದ ಫಲಿತಾಂಶ ಪ್ರಕಟವಾಗಲಿದ್ದು, ನಾವೆಲ್ಲರೂ ಅದಕ್ಕಾಗಿ ಕಾಯಬೇಕಿದೆ. ಇಂಡಿಯಾ ಮೈತ್ರಿಕೂಟವು ಸ್ಥಿರ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.