ಮೂಡಿಗೆರೆಯಲ್ಲಿ ದುರಂತ: ಗಣಪತಿಯನ್ನು ಕಳಿಸಿ ಬರುವಾಗ ವಿದ್ಯುತ್​ ತಂತಿ ತಗುಲಿ ಟ್ರ್ಯಾಕ್ಟರ್​ನಲ್ಲಿದ್ದ ಮೂವರ ಸಾವು

New Project(7)
Published on

ಚಿಕ್ಕಮಗಳೂರು: ಅದ್ದೂರಿಯಾಗಿ ಮೆರವಣಿಗೆ ಮಾಡಿ ಗಣಪತಿ ನಿಮಜ್ಜನ ಮಾಡಿ ಬರುವ ವೇಳೆ ವಿದ್ಯುತ್​ ಪ್ರವಹಿಸಿ ಮೂವರು ದುರಂತ ಅಂತ್ಯ ಕಂಡ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಿ.ಹೊಸಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.

ರಾಜು (47), ರಚನಾ (35) ಮತ್ತು ಪಾರ್ವತಿ (26) ಮೃತ ದುರ್ದೈವಿಗಳು. ಆರು ಜನರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾವು ಹೇಗೆ? ಯಾವ ರೂಪದಲ್ಲಿ? ಬರುತ್ತೆ ಎಂದು ಊಹಿಸಲೂ ಸಾಧ್ಯವಿಲ್ಲ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಗೌರಿ-ಗಣೇಶ ಹಬ್ಬದ ಹಿನ್ನೆಲೆ ಗ್ರಾಮದಲ್ಲಿ ಗೌರಿ-ಗಣೇಶ ಮೂರ್ತಿಗಳನ್ನು ಅದ್ದೂರಿಯಾಗಿ ಪ್ರತಿಷ್ಠಾಪಿಸಿ ಪೂಜಿಸಲಾಗಿತ್ತು. ಗ್ರಾಮಸ್ಥರೆಲ್ಲರೂ ಸೇರಿ ಸಿಂಗರಿಸಿದ ಟ್ರ್ಯಾಕ್ಟರ್​ನಲ್ಲಿ ಗೌರಿ-ಗಣೇಶ ಮೂರ್ತಿಗಳನ್ನು ಮೆರವಣಿಗೆ ಮಾಡಿದ್ದರು. ಬಳಿಕ ಗಣಪತಿ ನಿಮಜ್ಜನ ಮಾಡಿ ವಾಪಸ್​ ಬರುತ್ತಿದ್ದರು.

ಈ ವೇಳೆ ಟ್ರ್ಯಾಕ್ಟರ್​ಗೆ ಅಳವಡಿಸಿದ್ದ ಪೆಂಡಾಲ್​ಗೆ ವಿದ್ಯುತ್ ತಂತಿ ತಗುಲಿದ್ದು, ವಿದ್ಯುತ್​ ಪ್ರವಹಿಸಿ ಟ್ರ್ಯಾಕ್ಟರ್​ನಲ್ಲಿ ಕುಳಿತಿದ್ದ ರಾಜು, ರಚನಾ, ಪಾರ್ವತಿ ಮೃತಪಟ್ಟಿದ್ದಾರೆ. ಸಂಗೀತ, ಪಲ್ಲವಿ ಸೇರಿ 6 ಜನರ ಸ್ಥಿತಿ ಗಂಭೀರವಾಗಿದೆ. ಇಂಜಿನ್ ಮೇಲೆ ಕೂತಿದ್ದ ಡ್ರೈವರ್ ಅಪಾಯದಿಂದ ಪಾರಾಗಿದ್ದಾರೆ. ಗಣೇಶ ಹಬ್ಬದ ಸಂಭ್ರಮದಲ್ಲಿದ್ದ ಇಡೀ ಗ್ರಾಮದಲ್ಲೀಗ ಸೂತಕ ಆವರಿಸಿದೆ. ಕುಟುಂಬಸ್ಥರು ಮತ್ತು ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೂಡಿಗೆರೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net