

ಶಿವಮೊಗ್ಗ: ಪ್ರತಿದಿನ ರಾತ್ರಿ ತಡವಾಗಿ ಮನೆಗೆ ಬರ್ತಿದ್ದ ಗಂಡನನ್ನು ಪ್ರಶ್ನಿಸಿದ ಪತ್ನಿ ದುರಂತ ಅಂತ್ಯಕಂಡಿದ್ದಾಳೆ. ಸಿಟ್ಟಿನಲ್ಲಿ ದುಡುಕಿದ ಪತಿಯೂ ಸಾವಿನ ಮನೆಯ ಕದ ತಟ್ಟಿ ಆಸ್ಪತ್ರೆ ಸೇರಿದ್ದಾರೆ. ಅಮ್ಮನನ್ನು ಕಳೆದುಕೊಂಡ ಪುಟ್ಟ ಮಕ್ಕಳಿಬ್ಬರು ಕಣ್ಣೀರಿಡುತ್ತಿದ್ದಾರೆ.
ಇಂತಹ ಘಟನೆ ಶಿವಮೊಗ್ಗ ನಗರದ ಬೈಪಾಸ್ ರಸ್ತೆಯ ಪ್ರಿಯಾಂಕಾ ಲೇಔಟ್ನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಶಿವಮೊಗ್ಗದ ಮೆಸ್ಕಾಂ ನೌಕರ ದಿನೇಶ್ ಎಂಬಾತ 12 ವರ್ಷದ ಹಿಂದೆ ಶಿವಮೊಗ್ಗ ತಾಲೂಕಿನ ಮತ್ತಿಘಟ್ಟ ಗ್ರಾಮದ ಮಂಜುಳಾ ಅವರೊಂದಿಗೆ ಮದುವೆಯಾಗಿದ್ದ. ದಂಪತಿಗೆ 10 ಮತ್ತು 4 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ದಿನೇಶ್ ಪ್ರತಿದಿನ ಮನೆಗೆ ತಡವಾಗಿ ಬರುತ್ತಿದ್ದ. ಇದೇ ಕಾರಣಕ್ಕೆ ದಂಪತಿ ನಡುವೆ ಜಗಳವಾಗುತ್ತಿತ್ತು. ಮಂಗಳವಾರ ರಾತ್ರಿಯೂ ಇದೇ ವಿಚಾರಕ್ಕೆ ದಂಪತಿ ಜಗಳವಾಡಿದ್ದಾರೆ. ಮಾತಿಗೆ ಮಾತು ಬೆಳೆದು ದಿನೇಶ್ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಪತ್ನಿ ಮಂಜುಳಾ ಅವರ ಕುತ್ತಿಗೆ ಕೊಯ್ದಿದ್ದಾನೆ. ತೀವ್ರ ರಕ್ತಸ್ರಾವದಿಂದ ಮಂಜುಳಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿಟ್ಟಿನಿಂದ ಕೊಲೆ ಮಾಡಿದ ದಿನೇಶ್, ಹೆದರಿ ತಾನೂ ಬ್ಲೇಡ್ನಿಂದ ಕೈಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ದಿನೇಶ್ ಚಾಕುವಿನಿಂದ ಇರಿದಾಗ ಮಂಜುಳಾ ಅರಚಾಡಿದ್ದು, ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ತುಂಗಾ ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದಾಗ ಮಂಜುಳಾ ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿದ್ದಳು. ದಿನೇಶ್ ಗಾಯಗೊಂಡಿದ್ದ. ತಕ್ಷಣ ಪೊಲೀಸರು ದಿನೇಶ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.