

ಕೊಪ್ಪಳ: ಪಿಎಸ್ಐ ಹುದ್ದೆ ನೇಮಕಾತಿ ಹಗರಣದಲ್ಲಿ 15 ಲಕ್ಷ ರೂ. ಪಡೆದ ವಿಚಾರ ಆಡಿಯೋ ಮೂಲಕ ವೈರಲ್ ಆದ ಬೆನ್ನಲ್ಲೇ ಶಾಸಕ ಬಸವರಾಜ ದಢೇಸುಗೂರು, ಹಣ ನೀಡಿದಾತಗೆ ನಿಂದಿಸಿದ್ದಾರೆ ಎನ್ನಲಾದ ಮತ್ತೊಂದು ಆಡಿಯೋ ಮಂಗಳವಾರ ಹೊರಬಂದಿದೆ.
ಹಣ ನೀಡಿದ್ದ ಕುರಿತು ಹಾಗೂ ವಿಷಯವನ್ನು ಮಾಧ್ಯಮಗಳಿಗೆ ಬಹಿರಂಗ ಪಡಿಸುವ ಸಂಬಂಧ ಹಣ ನೀಡಿದಾತನಿಗೆ ಧಮ್ಕಿ ಹಾಕುತ್ತಿರುವ ಸಂಭಾಷಣೆ ಆಡಿಯೋದಲ್ಲಿದೆ. "ನೀನಾಗಿಯೇ ಬಂದು ಹಣ ನೀಡಿದ್ದೀಯ. ನಾನೇನು ದುಡ್ಡು ನೀಡುವಂತೆ ನಿನ್ನನ್ನು ಕೇಳಿರಲಿಲ್ಲ. ಹಣವನ್ನು ನಾನು ತಿಂದಿಲ್ಲ. ಹೀಗಿದ್ದರೂ ಮರಳಿ ಕೊಡಿಸುವುದಾಗಿ ತಿಳಿಸಿರುವೆ. ಆದರೆ, ನನ್ನ ವಿರುದ್ಧವೇ ಸುದ್ದಿಗೋಷ್ಠಿ ನಡೆಸುವೆಯಾ? ಯಾರನ್ನು ಕರೆತಂದರೂ ನಡೆಯುವುದಿಲ್ಲ. ಅದು ಯಾರು ಬರುತ್ತಾರೆ ನೋಡೋಣ'' ಎಂದು ಆವಾಚ್ಯವಾಗಿ ನಿಂದಿಸಲಾಗಿದೆ.
ಈಗಾಗಲೇ ಪಿಎಸ್ಐ ನೇಮಕಾತಿಗಾಗಿ ಹಣ ಪಡೆದ ಆಡಿಯೋದಲ್ಲಿನ ಧ್ವನಿ ತಮ್ಮದೇ ಎಂದು ಹೇಳಿಕೆ ನೀಡುವ ಮೂಲಕ ಶಾಸಕ ದಢೇಸುಗೂರು ಮುಜುಗರಕ್ಕೆ ಈಡಾಗಿದ್ದಾರೆ. ಸದ್ಯ ಪ್ರಕರಣವನ್ನು ಮುಚ್ಚಿ ಹಾಕುವ ಭರದಲ್ಲಿ ಶಾಸಕರು ಮತ್ತೊಂದು ಎಡವಟ್ಟು ಮಾಡಿಕೊಂಡರಾ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.