More

  ವಿಗ್ರಹಗಳ ಮೇಲೆ ಕಳ್ಳರ ಕಣ್ಣು!: 10 ವರ್ಷದಲ್ಲಿ 14 ಮೂರ್ತಿ ಕಳವು; 7 ರಾಜ್ಯಗಳಲ್ಲಿ 31 ಕಲಾಕೃತಿ ಕಣ್ಮರೆ

  | ಕೀರ್ತಿನಾರಾಯಣ ಸಿ. ಬೆಂಗಳೂರು 
  ಭಾರತ ಕಲೆ, ಚಿತ್ರಕಲೆ, ಶಿಲ್ಪಕಲೆಗೆ ಹೆಸರುವಾಸಿಯಾದ ದೇಶ. ಪರಂಪರಾಗತ, ಪುರಾತನ ವಸ್ತುಗಳಿಗೆ ಈಗಲೂ ಎಲ್ಲಿಲ್ಲದ ಬೇಡಿಕೆ. ಇದೇ ಕಾರಣಕ್ಕೆ ಪ್ರಾಚೀನ ಸ್ಮಾರಕ, ದೇವಾಲಯಗಳಲ್ಲಿರುವ ವಿಗ್ರಹಗಳು, ಕಲಾಕೃತಿಗಳನ್ನು ಕಳವು ಮಾಡಿ ಮಾರಾಟ ಮಾಡುವ ಜಾಲಗಳು ಸಕ್ರಿಯವಾಗಿವೆ. ಅದರಲ್ಲೂ ಹೆಚ್ಚಾಗಿ ಕರ್ನಾಟಕದ ದೇವಸ್ಥಾನಗಳಲ್ಲಿರುವ ವಿಗ್ರಹಗಳ ಮೇಲೆ ಕಳ್ಳರು ಕಣ್ಣಿಟ್ಟಿರುವ ವಿಚಾರ ಬೆಳಕಿಗೆ ಬಂದಿದ್ದು, ಭದ್ರತಾ ವ್ಯವಸ್ಥೆ ಇನ್ನಷ್ಟು ಹೆಚ್ಚಿಸಬೇಕು ಎಂಬ ಕೂಗು ಕೇಳಿಬಂದಿದೆ. ಈವರೆಗೆ ನಡೆದಿರುವ ವಿಗ್ರಹಗಳ ಕಳ್ಳತನದ ಪಟ್ಟಿಯಲ್ಲಿ ಕರ್ನಾಟಕವೇ ನಂ.1 ಸ್ಥಾನದಲ್ಲಿದೆ.

  ರಾಜ್ಯದಲ್ಲಿ ಕಳೆದ 10 ವರ್ಷದಲ್ಲಿ (2013ರಿಂದ 2023) 14 ವಿಗ್ರಹಗಳು ಕಳುವಾಗಿವೆ. ಇದರಲ್ಲಿ ಒಂದು ವಿಗ್ರಹವನ್ನು ಮಾತ್ರ ಪತ್ತೆಹಚ್ಚಿ ಮರಳಿ ದೇಗುಲಕ್ಕೆ ಸೇರಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಉಳಿದಂತೆ ಇನ್ನೂ 13 ಮೂರ್ತಿಗಳನ್ನು ಕಳವು ಮಾಡಿದವರ್ಯಾರು? ಅವುಗಳನ್ನು ಎಲ್ಲಿಗೆ ಸಾಗಣೆ ಮಾಡಿದ್ದಾರೆ? ಈಗ ಆ ಕಲಾಕೃತಿಗಳು ಎಲ್ಲಿವೆ? ಎಂಬುದರ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಭಾರತೀಯ ಸಂಸ್ಕೃತಿ ಸಚಿವಾಲಯ ಹಾಗೂ ಪುರಾತತ್ವ ಸರ್ವೆಕ್ಷಣಾ ಇಲಾಖೆ ಕೊಟ್ಟಿರುವ ಮಾಹಿತಿ ಪ್ರಕಾರ ಭಾರತೀಯ ಪುರಾತತ್ವ ಸರ್ವೆಕ್ಷಣಾ ಇಲಾಖೆ ವ್ಯಾಪ್ತಿಯ (ಎಎಸ್​ಐ) ಕೇಂದ್ರೀಯವಾಗಿ ಸಂರಕ್ಷಿತ ಸ್ಮಾರಕಗಳು, ಪುರಾತನ ಸ್ಥಳಗಳು, ದೇವಾಲಯಗಳಿಂದ ಒಟ್ಟು 31 ಪ್ರಾಚೀನ ವಸ್ತುಗಳನ್ನು ಕಳವು ಮಾಡಲಾಗಿದೆ. ಇದರಲ್ಲಿ 4 ವಿಗ್ರಹಗಳನ್ನು ಮರುವಶಕ್ಕೆ ಪಡೆಯಲಾಗಿದೆ. ಉಳಿದ 27 ವಿಗ್ರಹಗಳನ್ನು ಇನ್ನಷ್ಟೇ ಪತ್ತೆಹಚ್ಚಬೇಕಿದೆ. ವಿದೇಶಗಳಿಗೆ ಕಳ್ಳಸಾಗಣೆ ಮಾಡಿರುವ ಕುರಿತು ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ಸ್ಥಳೀಯಮಟ್ಟದಲ್ಲೇ ಕಳ್ಳತನ ಜಾಲಗಳು ಕಾರ್ಯಾಚರಣೆಯಲ್ಲಿ ತೊಡಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ.

  ಆದಾಯವಿದ್ದರೆ ಮಾತ್ರ ಭದ್ರತೆ: ಕರ್ನಾಟಕದಲ್ಲಿ 3 ಸಾವಿರಕ್ಕೂ ಹೆಚ್ಚು ಸ್ಮಾರಕಗಳು, ದೇವಸ್ಥಾನಗಳು ಸೇರಿ ಇನ್ನಿತರ ಐತಿಹಾಸಕ ಸ್ಥಳಗಳಿವೆ. ಇದರಲ್ಲಿ 218 ಸ್ಮಾರಕಗಳನ್ನು ಕೇಂದ್ರ ಪುರಾತತ್ವ ಇಲಾಖೆ ಹಾಗೂ 771 ಸ್ಮಾರಕಗಳನ್ನು ರಾಜ್ಯ ಪುರಾತತ್ವ ಇಲಾಖೆ ನಿರ್ವಹಣೆ ಮಾಡುತ್ತಿದೆ. ಉಳಿದವನ್ನು ಮುಜರಾಯಿ ಇಲಾಖೆ ನೋಡಿಕೊಳ್ಳುತ್ತಿದೆ. ಉತ್ತಮ ಆದಾಯ ಬರುವಂತಹ ದೇವಾಲಯಗಳಿಗೆ ಮಾತ್ರ ಮುಜರಾಯಿ ಇಲಾಖೆ ಭದ್ರತಾ ವ್ಯವಸ್ಥೆ ಕಲ್ಪಿಸಿದೆ. ಉಳಿದ ಪುರಾತನ ಸ್ಥಳಗಳಿಗೆ ಭದ್ರತೆ ಕಲ್ಪಿಸಿಲ್ಲ. ಇದೇ ಕಾರಣಕ್ಕೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ ಎಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

  10 ವರ್ಷದಲ್ಲಿ 4 ಮರುವಶ: 10 ವರ್ಷದಲ್ಲಿ ಕಳುವಾಗಿರುವ ಒಟ್ಟು 31 ಪ್ರಾಚೀನ ವಿಗ್ರಹಗಳ ಪೈಕಿ 14 ಕರ್ನಾಟಕಕ್ಕೆ ಸೇರಿವೆ. ಉಳಿದಂತೆ ಆಂಧ್ರಪ್ರದೇಶದಲ್ಲಿ-3, ಬಿಹಾರದಲ್ಲಿ-4, ಛತ್ತೀಸ್​ಗಢದಲ್ಲಿ-2, ರಾಜಸ್ಥಾನದಲ್ಲಿ-3 ಹಾಗೂ ಉತ್ತರಾಖಂಡದಲ್ಲಿ-1 ವಿಗ್ರಹಗಳು ನಾಪತ್ತೆಯಾಗಿವೆ. ಇದರಲ್ಲಿ ಕರ್ನಾಟಕದ 1, ಆಂಧ್ರಪ್ರದೇಶದ 2 ಹಾಗೂ ಉತ್ತರಾಖಂಡದ 1 ಮೂರ್ತಿ ಪತ್ತೆಹಚ್ಚಿ, ಸಂಬಂಧಪಟ್ಟ ದೇವಾಲಯಗಳಿಗೆ ಪುನಃ ಸೇರಿಸಲಾಗಿದೆ.

  ಭದ್ರತೆ ಹೇಗಿರುತ್ತೆ?: ಸ್ಮಾರಕಗಳ ಕಾವಲಿಗೆ ಖಾಸಗಿ ಭದ್ರತಾ ಸಿಬ್ಬಂದಿ, ರಾಜ್ಯ ಪೊಲೀಸ್ ಸಶಸ್ತ್ರ ಪಡೆ (ಕೆಎಸ್​ಆರ್​ಪಿ) ಮತ್ತು ಅಗತ್ಯಕ್ಕೆ ಅನುಗುಣವಾಗಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್​ಐಎಸ್​ಎಫ್) ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಯಾವುದೇ ದೇವಸ್ಥಾನದಲ್ಲಿ ಕಳ್ಳತನ ಪ್ರಕರಣ ವರದಿಯಾದ ವೇಳೆ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಎಫ್​ಐಆರ್ ದಾಖಲಿಸಲಾಗುತ್ತದೆ. ಆದರೆ, ಆರೋಪಿಗಳ ಪತ್ತೆಕಾರ್ಯ ಗಂಭೀರವಾಗಿ ನಡೆಯುವುದಿಲ್ಲ. ಸರ್ಕಾರದ ಈ ಉದಾಸೀನ ಧೋರಣೆ ಕಳ್ಳರಿಗೆ ವರವಾಗಿದೆ.

  238 ವಸ್ತುಗಳು ವಾಪಸ್: ಭಾರತದಿಂದ ವಿದೇಶಕ್ಕೆ ಕೊಂಡೊಯ್ಯಲಾಗಿದ್ದ 251 ಪುರಾತನ ವಸ್ತುಗಳನ್ನು 1976 ರಿಂದ 2023ರ ಅವಧಿಯಲ್ಲಿ ಭಾರತೀಯ ಪುರಾತತ್ವ ಇಲಾಖೆ ಮರಳಿ ತಂದಿದೆ. ಇದರಲ್ಲಿ 238 ವಸ್ತುಗಳನ್ನು 2014 ರಿಂದ 2023ರ ಅವಧಿಯಲ್ಲೇ ತಂದಿದೆ. ಭಾರತದ ಯಾವುದೇ ವಸ್ತು ವಿದೇಶದಲ್ಲಿರುವ ಮಾಹಿತಿ ಸಿಕ್ಕ ಕೂಡಲೇ ಪುರಾತತ್ವ ಇಲಾಖೆ ಅಲ್ಲಿನ ಭಾರತೀಯ ರಾಯಭಾರ ಕಚೇರಿ ಮೂಲಕ ವಿಷಯ ಸಂಗ್ರಹಿಸಿ ವಾಪಸ್ ತರುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುತ್ತದೆ.

  ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಇರುವ ಎ ಮತ್ತು ಬಿ ವರ್ಗದ ಬಹುತೇಕ ದೇವಾಲಯಗಳಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ. ಈ ದೇಗುಲಗಳಲ್ಲಿ ಯಾವುದೇ ರೀತಿಯ ಕಳ್ಳತನ ಪ್ರಕರಣಗಳು ಇತ್ತೀಚೆಗೆ ವರದಿಯಾಗಿಲ್ಲ. ತುಂಬಾ ಹಿಂದೆ ಕಳುವಾಗಿರುವ ಮಾಹಿತಿ ಇದೆ. ಸಿ ವರ್ಗದ ದೇವಸ್ಥಾನಗಳಿಗೆ ಭದ್ರತಾ ವ್ಯವಸ್ಥೆ ಇಲ್ಲ. ಗ್ರಾಮಾಂತರ ಭಾಗದಲ್ಲಿರುವುದರಿಂದ ಈ ದೇಗುಲಗಳಿಗೆ ಭದ್ರತೆ ಒದಗಿಸುವುದು ಕಷ್ಟಸಾಧ್ಯವಾಗಿದೆ.

  | ರಾಮಲಿಂಗಾರೆಡ್ಡಿ, ಮುಜರಾಯಿ ಸಚಿವ

  ನಿಧಿ ಆಸೆಗೆ ದೇಗುಲ ಧ್ವಂಸ: ವಿಗ್ರಹಗಳ ಕಳವು ಶಿಕ್ಷಾರ್ಹ ಅಪರಾಧ. ಆದಾಗ್ಯೂ ಕಳ್ಳತನ ನಿಂತಿಲ್ಲ. ಪ್ರಾಚೀನ ಕಾಲದ ವಸ್ತುಗಳನ್ನು ಕಳವು ಮಾಡಿ ಮಾರಾಟ ಮಾಡುವ ಜಾಲ ಒಂದೆಡೆಯಾದರೆ, ನಿಧಿ ಆಸೆಗೆ ದೇಗುಲಗಳನ್ನೇ ಧ್ವಂಸ ಮಾಡುವ ಜಾಲಗಳೂ ಸಕ್ರಿಯವಾಗಿವೆ. ಕರ್ನಾಟಕದಲ್ಲಿ ನಿಧಿಗಾಗಿ ಹಳೇ ದೇವಸ್ಥಾನಗಳನ್ನೇ ಬೀಳಿಸಿರುವ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಯಾವುದೇ ಭದ್ರತೆ ಇಲ್ಲದ ಗ್ರಾಮಗಳಲ್ಲಿರುವ ದೇವಸ್ಥಾನಗಳಲ್ಲಿ ಇಂತಹ ಕೃತ್ಯಗಳು ನಡೆಯುತ್ತಿವೆ.

  12 ವರ್ಷಗಳಿಂದ ಇನ್ಶೂರೆನ್ಸ್ ಇಲ್ಲದ ವಾಹನದಲ್ಲಿ ಪೊಲೀಸರ ಡ್ಯೂಟಿ; ಸ್ಥಳೀಯ ವ್ಯಕ್ತಿ ಅಧಿಕಾರಿಯನ್ನೇ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡ!

  ರಾಜ್ಯೋತ್ಸವ ರಸಪ್ರಶ್ನೆ - 21

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts